ಕಾಶಿ ವಿಶ್ವನಾಥ ದೇಗುಲ ಕಾರಿಡಾರ್ ನಿರ್ಮಾಣ ಅಂತಿಮ ಹಂತದಲ್ಲಿ; ಡಿಸೆಂಬರ್ 13ರಂದು ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
Kashi Vishwanath Corridor: ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ವಾರ್ಷಿಕವಾಗಿ ಏಳು ಮಿಲಿಯನ್ (70 ಲಕ್ಷ) ಭಕ್ತರು ಭೇಟಿಕೊಡುತ್ತಾರೆ. ಅದರಲ್ಲಿ ವಾರಾಣಸಿ ಮತ್ತು ಸುತ್ತಲಿನ ಪ್ರದೇಶಗಳ 10 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿದಿನ ದೇಗುಲಕ್ಕೆ ಬಂದು ದರ್ಶನ ಪಡೆಯುತ್ತಾರೆ.
ಗಂಗಾ ನದಿಯಿಂದ ವಾರಾಣಸಿ ಕಾಶಿ ವಿಶ್ವನಾಥ ದೇಗುಲವನ್ನು ಸಂಪರ್ಕಿಸುವ ಕಾಶಿ ವಿಶ್ವನಾಥ ಕಾರಿಡಾರ್ (Kashi Vishwanath Corridor)ನ್ನು ಡಿಸೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಸದ್ಯ ಕಾರಿಡಾರ್ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದ್ದು, ಅಂತಿಮ ಹಂತದ ಸಣ್ಣಪುಟ್ಟ ಕಾಮಗಾರಿಗಳು ನಡೆಯುತ್ತಿವೆ. ಶ್ರೀ ಕಾಶಿ ವಿಶ್ವನಾಥ ವಿಶೇಷ ಪ್ರದೇಶಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ವರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದು, ಕಾರಿಡಾರ್ ಹಾಗೂ ಉಳಿದ ಒಟ್ಟು 24 ಕಟ್ಟಡಗಳ ನಿರ್ಮಾಣ ಕಾರ್ಯ ಮುಗಿದಿದೆ. ಅಂತಿಮ ಹಂತದ ಕೆಲವು ಕೆಲಸಗಳಿದ್ದು ಡಿಸೆಂಬರ್ 13ರ ಹೊತ್ತಿಗೆ ಸಂಪೂರ್ಣವಾಗಿ ಮುಗಿಯಲಿದೆ ಎಂದು ಹೇಳಿದ್ದಾರೆ. ಅಂದಹಾಗೇ, ಈ ಕಾರಿಡಾರ್ ಉದ್ದಕ್ಕೂ ಶ್ಲೋಕ, ವೇದಸ್ತೋತ್ರಗಳನ್ನು ಕೆತ್ತಲಾಗಿದ್ದು, ಇದಕ್ಕೆ ಸುಮಾರು 1000 ಕೋಟಿ ರೂಪಾಯಿ ವೆಚ್ಚವಾಗಿದೆ.
ಗಂಗಾನದಿಯಿಂದ ನೇರವಾಗಿ ಕಾಶಿ ವಿಶ್ವನಾಥ ದೇಗುಲಕ್ಕೆ ಸಾಗುವ ದಾರಿ ಇದಾಗಿದ್ದು, 2019ರ ಮಾರ್ಚ್ನಲ್ಲಿ ಕಾರಿಡಾರ್ ನಿರ್ಮಾಣಕ್ಕೆ ಪ್ರಧಾನಿ ಮೋದಿಯವರು ಅಡಿಗಲ್ಲು ಸ್ಥಾಪನೆ ನೆರವೇರಿಸಿದ್ದರು. 5.5 ಲಕ್ಷ ಚದರ ಅಡಿಗಳಷ್ಟು ವಿಸ್ತಾರ ಪ್ರದೇಶದಲ್ಲಿ ಕಾರಿಡಾರ್ ನಿರ್ಮಾಣ ಮಾಡಲಾಗಿದೆ. ಈ ಕಾರಿಡಾರ್ ಮತ್ತು 24 ಇತರ ಕಟ್ಟಡಗಳ ನಿರ್ಮಾಣಕ್ಕಾಗಿ ಸ್ಥಳದಲ್ಲಿದ್ದ ಸುಮಾರು 300 ಕಟ್ಟಡಗಳನ್ನು ಖರೀದಿ ಮಾಡಿ, ಅದರ ಬೆಲೆಯನ್ನು ಮಾಲೀಕರಿಗೆ ಕೊಟ್ಟು ನಂತರ ಧ್ವಂಸ ಮಾಡಲಾಗಿತ್ತು. ಈ ಕಾರಿಡಾರ್ ನಿರ್ಮಾಣವನ್ನು ಯೋಗಿ ಆದಿತ್ಯನಾಥ್ ಖುದ್ದಾಗಿ ನಿಂತು ಪರಿಶೀಲನೆ ನಡೆಸಿದ್ದಾರೆ. ಇನ್ನು 24 ಕಟ್ಟಡಗಳೆಂದರೆ ಅದರಲ್ಲಿ ವರ್ಚ್ಯುವಲ್ ಮ್ಯೂಸಿಯಂ, ಏಳು ದೊಡ್ಡ ಪ್ರವೇಶದ್ವಾರಗಳು, ಗ್ರಂಥಾಲಯ, ಕೆಫೆಟೇರಿಯಾ, ಫುಡ್ ಕೋರ್ಟ್, ಪ್ರವಾಸಿ ಮಂದಿರ, ಧ್ಯಾನ ಮಂದಿರ ಸೇರಿ ಇನ್ನೂ ಹಲವು ಸೌಲಭ್ಯಗಳು ಇವೆ. ಅದರಲ್ಲೂ ಒಂದು ಬಾರಿಗೆ 10 ಸಾವಿರ ಭಕ್ತರು ಧ್ಯಾನಕ್ಕೆ ಕುಳಿತುಕೊಳ್ಳಲು ಸಾಧ್ಯವಾಗುವಂತೆ 7 ಸಾವಿರ ಚದರ್ ಮೀಟರ್ ವಿಸ್ತೀರ್ಣದ ವೇದಿಕೆ ನಿರ್ಮಾಣ ವಿಶೇಷವೆನಿಸಿದೆ. ಕಾರಿಡಾರ್ ನಿರ್ಮಾಣ ಕೆಲಸ ನವೆಂಬರ್ನಲ್ಲಿಯೇ ಮುಗಿಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದೀಗ ಒಂದು ತಿಂಗಳು ತಡವಾಗಿ ಉದ್ಘಾಟನೆಯಾಗುತ್ತಿದೆ.
ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ವಾರ್ಷಿಕವಾಗಿ ಏಳು ಮಿಲಿಯನ್ (70 ಲಕ್ಷ) ಭಕ್ತರು ಭೇಟಿಕೊಡುತ್ತಾರೆ. ಅದರಲ್ಲಿ ವಾರಾಣಸಿ ಮತ್ತು ಸುತ್ತಲಿನ ಪ್ರದೇಶಗಳ 10 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿದಿನ ದೇಗುಲಕ್ಕೆ ಬಂದು ದರ್ಶನ ಪಡೆಯುತ್ತಾರೆ. ಅದರಲ್ಲೂ ಸೋಮವಾರಗಳಂದು 40-50 ಸಾವಿರ ಭಕ್ತರು ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಶ್ರಾವಣ ಮಾಸದಲ್ಲಂತೂ ಸೋಮವಾರ ಬಂತೆಂದರೆ ದಿನಕ್ಕೆ 3 ಲಕ್ಷದವರೆಗೂ ಭಕ್ತರು ಬರುತ್ತಾರೆ.
ಇದನ್ನೂ ಓದಿ: ಅಪರೂಪ: ಸರ್ಕಾರಿ ಕೆಲಸಕ್ಕಾಗಿ ಲಂಚ ನೀಡಿದ್ದ ಮೂವರ ವಿರುದ್ಧ ಎಸಿಬಿಯಲ್ಲಿ ಎಫ್ಐಆರ್ ದಾಖಲಾಯ್ತು!