ನವದೆಹಲಿ: ಸಶಸ್ತ್ರ ಪಡೆಗಳಿಗೆ ನೇಮಕಾತಿಗಾಗಿ ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯನ್ನು (Agnipath Scheme) ಪರಿಚಯಿಸಿದ ನಂತರ ನಡೆದ ಪ್ರತಿಭಟನೆಗಳ ತನಿಖೆಗೆ ಕೋರಿ ವಕೀಲರೊಬ್ಬರು ಸಲ್ಲಿಸಿದ ಹೊಸ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅರ್ಜಿದಾರರು ಅಗ್ನಿಪಥ್ ನೇಮಕಾತಿ ಯೋಜನೆಯ ಸಿಂಧುತ್ವವನ್ನು ಪ್ರಶ್ನಿಸಲು ಮತ್ತು ಸೇನೆಯ ಮೇಲೆ ಅದರ ಪ್ರಭಾವವನ್ನು ಪರಿಶೀಲಿಸಲು ಕೋರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಈ ಬಗ್ಗೆ ಆದೇಶ ಹೊರಡಿಸಿದ್ದು, ಈ ಸಮಸ್ಯೆ ಈಗಾಗಲೇ ದೆಹಲಿ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಆದ್ದರಿಂದ ಈ ಪ್ರಕರಣವನ್ನು ಪರಿಗಣಿಸಲು ನಿರಾಕರಿಸಲಾಗಿದೆ ಎಂದಿದೆ. ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಬ್ಯಾಚ್ ಅನ್ನು ದೆಹಲಿ ಹೈಕೋರ್ಟ್‌ಗೆ ಈ ವರ್ಷದ ಜುಲೈನಲ್ಲಿ ಸುಪ್ರೀಂ ಕೋರ್ಟ್ ವರ್ಗಾಯಿಸಿತ್ತು. ಇದೇ ರೀತಿಯ ಅರ್ಜಿಗಳು ಈಗಾಗಲೇ ಹೈಕೋರ್ಟ್‌ನಲ್ಲಿ ಬಾಕಿಯಿದ್ದು, ಹೈಕೋರ್ಟ್‌ನ ಅಭಿಪ್ರಾಯದ ಪ್ರಯೋಜನವನ್ನು ಹೊಂದಿರುತ್ತದೆ ಎಂದು ಸುಪ್ರೀಂ ಕೋರ್ಟ್ ಭಾವಿಸಿದ್ದರಿಂದ ವರ್ಗಾವಣೆಗೆ ನಿರ್ದೇಶನ ನೀಡಲಾಗಿದೆ.
ಇದನ್ನೂ ಓದಿ: Prophet Row: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಬಂಧನ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎಎಸ್ ಬೋಪಣ್ಣ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ವಿಷಯದ ಕುರಿತು ಬಹುಸಂಖ್ಯೆಯ ರಿಟ್ ಅರ್ಜಿಗಳು ಅಪೇಕ್ಷಣೀಯ ಅಥವಾ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ.