ದೆಹಲಿ: ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಹತ್ಯೆ ಪ್ರಕರಣ ಸಂಬಂಧ ಅಪರಾಧಿ ಮುಖೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಅಪರಾಧಿ ಮುಖೇಶ್ಗಿದ್ದ ಎಲ್ಲ ಕಾನೂನು ಹಾದಿಗಳು ಬಂದ್ ಆಗಿವೆ.
ಅಪರಾಧಿ ಅರ್ಜಿಯಲ್ಲಿ ಹುರುಳಿಲ್ಲ:
ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದ ತೀರ್ಮಾನ ಪ್ರಶ್ನಿಸಿ ಮುಖೇಶ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಅಪರಾಧಿ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್, ಈ ಪ್ರಕರಣದಲ್ಲಿ ಕೋರ್ಟ್ ಮಧ್ಯಪ್ರವೇಶ ಅಗತ್ಯವಿಲ್ಲ. ರಾಷ್ಟ್ರಪತಿಗಳು ಆತುರದಲ್ಲಿ ನಿರ್ಧಾರವನ್ನು ಕೈಗೊಂಡಿಲ್ಲ. ಅಲ್ಲದೆ, ಅಪರಾಧಿ ಮುಖೇಶ್ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಕ್ಷಮಾದಾನ ನೀಡಲು ಯಾವುದೇ ಪೂರಕ ಆಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಗಲ್ಲು ಶಿಕ್ಷೆ ತಡ ಮಾಡುವಂತಿಲ್ಲ:
ಯಾವುದೇ ಕಾರಣಕ್ಕೂ ಅಪರಾಧಿಗಳಿಗೆ ಗಲ್ಲುಶಿಕ್ಷೆ ತಡ ಮಾಡುವಂತಿಲ್ಲ. ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದಕ್ಕೆ ಕ್ಷಮಾದಾನ ನೀಡಲಾಗುವುದಿಲ್ಲ ಎಂದು ಮುಖೇಶ್ ಅರ್ಜಿ ವಜಾ ಮಾಡಲು ಸುಪ್ರೀಂಕೋರ್ಟ್ ಕಾರಣ ನೀಡಿದೆ. ಹೀಗಾಗಿ ನಿರ್ಭಯಾ ಅಪರಾಧಿ ಮುಖೇಶ್ ಸಿಂಗ್ಗೆ ಗಲ್ಲುಶಿಕ್ಷೆ ಫಿಕ್ಸ್ ಆಗಿದೆ.
ಫೆ.1ರಂದು ಗಲ್ಲಿಗೇರಿಸುವುದು ಅನುಮಾನ:
ನಿರ್ಭಯಾ ಪ್ರಕರಣದಲ್ಲಿ ಈಗಾಗಲೇ ನಾಲ್ವರು ಅಪರಾಧಿಗಳಿಗೂ ಡೆತ್ ವಾರಂಟ್ ಹೊರಡಿಸಲಾಗಿದೆ. ಇಂದು ಮುಖೇಶ್ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು, ಕಾನೂನಿನ ಎಲ್ಲಾ ಬಾಗಿಲುಗಳು ಬಂದ್ ಆಗಿವೆ. ಆದ್ರೆ ನಾಲ್ವರು ಸೇರಿ ಕೃತ್ಯೆಸಗಿರುವ ಕಾರಣ ಓರ್ವನನ್ನು ಮಾತ್ರ ಗಲ್ಲಿಗೇರಿಸಲು ಸಾಧ್ಯವಿಲ್ಲ. ಹೀಗಾಗಿ ಫೆ.1ರಂದು ಅಪರಾಧಿಗಳನ್ನು ಗಲ್ಲಿಗೇರಿಸುವುದು ಅನುಮಾನವಾಗಿದೆ. ಇನ್ನೂ ಮೂವರ ಕ್ಷಮಾದಾನ ಅರ್ಜಿಗಳು ಬಾಕಿಯಿದ್ದು, ಎಲ್ಲವೂ ಕ್ಲಿಯರ್ ಆದ ಬಳಿಕ ಗಲ್ಲಿಗೇರಿಸುವ ಸಾಧ್ಯತೆಯಿದೆ.