
ನವದೆಹಲಿ, ಆಗಸ್ಟ್ 14: ಬಿಹಾರದ ಕರಡು ಮತದಾರರ ಪಟ್ಟಿಯಿಂದ (Bihar’s draft electoral roll) ಹೆಸರು ಕೈಬಿಟ್ಟಿರುವುದರಿಂದ ಸಮಸ್ಯೆ ಎದುರಿಸುತ್ತಿರುವವರು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಚುನಾವಣಾಧಿಕಾರಿಗಳನ್ನು ಸಂಪರ್ಕಿಸುವಂತೆ ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಕೈಬಿಟ್ಟಿರುವ 65 ಲಕ್ಷ ಮತದಾರರ ಪಟ್ಟಿ ಎಲ್ಲಿ ಲಭ್ಯವಿರಲಿದೆ ಎಂಬುವುದನ್ನು ಜನರಿಗೆ ತಿಳಿಸಲು ಸುದ್ದಿ ವಾಹಿನಿಗಳು, ರೇಡಿಯೋ ಮತ್ತು ಪತ್ರಿಕೆಗಳ ಮೂಲಕ ವ್ಯಾಪಕ ಪ್ರಚಾರ ನೀಡಬೇಕು. ಜಿಲ್ಲಾ ಚುನಾವಣಾ ಅಧಿಕಾರಿಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆ ಇದ್ದರೆ, ಅವರು ಅಲ್ಲಿಯೂ ಸಹ ಪ್ರದರ್ಶಿಸಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಸೂಚನೆ ನೀಡಿತು.
ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಚುನಾವಣಾ ಆಯೋಗ ಬಿಹಾರದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಗುರುವಾರ (ಆ.14) ನಡೆಯಿತು.
2025ರ ಪಟ್ಟಿಯಲ್ಲಿ ಹೆಸರು ಇದ್ದರೂ ಕರಡು ಪಟ್ಟಿಯಲ್ಲಿ ಸೇರ್ಪಡೆಯಾಗದ 65 ಲಕ್ಷ ಮತದಾರರ ಪಟ್ಟಿಯನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳ ಜಾಲತಾಣಗಳಲ್ಲಿ ಪ್ರದರ್ಶಿಸಬೇಕು. ಮಾಹಿತಿಯು ಬೂತ್ ಮಟ್ಟದ್ದಾಗಿರಬೇಕು. ಇಪಿಐಸಿ ಸಂಖ್ಯೆ ನಮೂದಿಸಿ ಅದರ ವಿವರಗಳನ್ನು ಪಡೆಯಲು ಸಾಧ್ಯವಾಗುವಂತಿರಬೇಕು ಎಂದು ನಿರ್ದೇಶನ ನೀಡಿದೆ.
ಮೃತಪಟ್ಟ, ಶಾಶ್ವತವಾಗಿ ವಲಸೆ ಹೋದ ಅಥವಾ ಇತರ ಕ್ಷೇತ್ರಗಳಿಗೆ ವಾಸ ಬದಲಿಸಿದವರ ಹೆಸರುಗಳನ್ನು ಒಳಗೊಂಡಿರುವ ಪಟ್ಟಿಯನ್ನು ಬಹಿರಂಗಪಡಿಸಬೇಕು. ಪಂಚಾಯತ್ ಮಟ್ಟದ ಕಚೇರಿ ಮತ್ತು ಜಿಲ್ಲಾ ಮಟ್ಟದ ಚುನಾವಣಾಧಿಕಾರಿಗಳ ಕಚೇರಿಗಳಲ್ಲಿ ಪ್ರದರ್ಶಿಸಬೇಕು ಎಂದು ಹೇಳಿದೆ.
ಇದನ್ನೂ ಓದಿ: ‘ಆಧಾರ್ ಪೌರತ್ವದ ದಾಖಲೆಯಲ್ಲ’; ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಬೆಂಬಲ
ಪೀಠ ಮುಂದಿನ ವಿಚಾರಣೆಯನ್ನು ಆಗಸ್ಟ್ 22ಕ್ಕೆ ನಿಗದಿಪಡಿಸಿದೆ. ತನ್ನ ನಿರ್ದೇಶನದ ಪಾಲೆನೆಗೆ ಸಂಬಂಧಿಸಿದ ವರದಿಯನ್ನು ಸಲ್ಲಿಸುವಂತೆ ಆಯೋಗಕ್ಕೆ ಸೂಚಿಸಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ 65 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಚುನಾವಣಾ ಆಯೋಗ ಕೈಬಿಟ್ಟಿತ್ತು. ಇವರಲ್ಲಿ 36.28 ಲಕ್ಷ ಮಂದಿ ಶಾಶ್ವತ ವಲಸೆ ಹೋಗಿದ್ದಾರೆ. 22.34 ಲಕ್ಷ ಮಂದಿ ಮೃತಪಟ್ಟಿದ್ದಾರೆ ಮತ್ತು 7.01 ಲಕ್ಷ ಜನರು ಒಂದಕ್ಕಿಂತ ಹೆಚ್ಚು ಕಡೆ ಮತದಾರರಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಆಯೋಗ ಮಾಹಿತಿ ನೀಡಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 9:01 pm, Thu, 14 August 25