ದೆಹಲಿ ಮಾರ್ಚ್ 14: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಸಂಸ್ಥಾಪಕ ಶರದ್ ಪವಾರ್ (Sharad Pawar) ಅವರ ಹೆಸರು ಮತ್ತು ಚಿತ್ರಗಳನ್ನು ಪ್ರಚಾರಕ್ಕಾಗಿ ಬಳಸಿರುವ ಆರೋಪದ ಮೇಲೆ ಸುಪ್ರೀಂಕೋರ್ಟ್ (Supreme Court) ಗುರುವಾರ ಅಜಿತ್ ಪವಾರ್ (Ajit Pawar) ಬಣವನ್ನು ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಶನಿವಾರದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಅಜಿತ್ ಪವಾರ್ ಬಣಕ್ಕೆ ಸೂಚಿಸಿದ್ದು, ಪಕ್ಷದ ವಿಭಜನೆಯ ಹೊರತಾಗಿಯೂ ಶರದ್ ಪವಾರ್ ಅವರ ಚಿತ್ರವನ್ನು ನಿರಂತರವಾಗಿ ಬಳಸುವುದರ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದೆ.
“ನೀವು ಈಗ ಬೇರೆ ರಾಜಕೀಯ ಪಕ್ಷವಾಗಿದ್ದೀರಿ. ನೀವು ಅವರೊಂದಿಗೆ ಇರಬಾರದು ಎಂದು ನಿರ್ಧರಿಸಿದ್ದೀರಿ. ಹೀಗಿರುವಾಗ ಅವರ ಚಿತ್ರ ಬಳಸುತ್ತಿರುವುದೇಕೆ? ಈಗ ನಾವು ನಿಮ್ಮದೇ ಗುರುತಿನೊಂದಿಗೆ ಹೋಗಿ ಎಂದು ಪೀಠ ಹೇಳಿದೆ. ಅದೇ ವೇಳೆ ಶರದ್ ಪವಾರ್ ಅವರ ಹೆಸರು, ಚಿತ್ರಗಳನ್ನು ಬಳಸಲಾಗುವುದಿಲ್ಲ ಎಂದು ನಮಗೆ ಸ್ಪಷ್ಟವಾದ ಮತ್ತು ಬೇಷರತ್ತಾದ ಒಪ್ಪಂದದ ಅಗತ್ಯವಿದೆ” ಎಂದು ಪೀಠ ಹೇಳಿದ್ದು, ಮುಂದಿನ ವಿಚಾರಣೆಯನ್ನು ಮಾರ್ಚ್ 19ಕ್ಕೆ ನಿಗದಿಪಡಿಸಿದೆ.
ಅಜಿತ್ ಪವಾರ್ ಬಣ ಮತದಾರರನ್ನು ಓಲೈಸಲು ಶರದ್ ಪವಾರ್ ಅವರ ಹೆಸರು ಮತ್ತು ಚಿತ್ರಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಶರದ್ ಪವಾರ್ ಬಣ ಸಲ್ಲಿಸಿದ ಅರ್ಜಿಯನ್ನು ಅನುಸರಿಸಿ ನ್ಯಾಯಾಲಯ ಮಧ್ಯಪ್ರವೇಶ ಮಾಡಿದೆ. ಅಜಿತ್ ಪವಾರ್ ನೇತೃತ್ವದ ಬಂಡಾಯದ ನಂತರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಯಲ್ಲಿ ಒಡಕು ಉಂಟಾಗಿತ್ತು. ಭಾರತೀಯ ಚುನಾವಣಾ ಆಯೋಗವು “ಶಾಸಕ ಬಹುಮತದ ಪರೀಕ್ಷೆ” ಆಧಾರದ ಮೇಲೆ ಅಜಿತ್ ಬಣವನ್ನು ನಿಜವಾದ NCP ಎಂದು ಗುರುತಿಸಿದೆ.
“ಅಜಿತ್ ಪವಾರ್ ಬಣವು ಶಾಸಕರ ಬಹುಮತದ ಬೆಂಬಲವನ್ನು ಹೊಂದಿತ್ತು. ಆಯೋಗವು ಅಜಿತ್ ಪವಾರ್ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಎಂದು ಹೇಳುತ್ತದೆ.ಅದರ ಹೆಸರು ಮತ್ತು ‘ಗಡಿಯಾರ’ದ ಚಿಹ್ನೆಯನ್ನು ಬಳಸಲು ಅರ್ಹರಾಗಿದ್ದಾರೆ” ಎಂದು ಇಸಿಐ ಆದೇಶ ಹೇಳಿದೆ.
ಇದನ್ನೂ ಓದಿ: Sudha Murty: ರಾಜ್ಯಸಭಾ ಸಂಸದರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸುಧಾ ಮೂರ್ತಿ
ಶರದ್ ಪವಾರ್ ಬಣಕ್ಕೆ ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್ಚಂದ್ರ ಪವಾರ್’ ಎಂಬ ಹೆಸರು ಬಳಸುವಂತೆ ಚುನಾವಣಾ ಆಯೋಗ ಹೇಳಿತ್ತು.
ಇದಕ್ಕೂ ಮೊದಲು, ಮಹಾರಾಷ್ಟ್ರ ಉಪಮುಖ್ಯಮಂತ್ರಿ ನೇತೃತ್ವದ ಗುಂಪನ್ನು ನಿಜವಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಎಂದು ಗುರುತಿಸುವ ಚುನಾವಣಾ ಆಯೋಗದ ಫೆಬ್ರವರಿ 6 ರ ಆದೇಶದ ವಿರುದ್ಧ ಶರದ್ ಪವಾರ್ ಅವರ ಮನವಿಯ ಮೇಲೆ ಸುಪ್ರೀಂ ಕೋರ್ಟ್ ಅಜಿತ್ ಪವಾರ್ ನೇತೃತ್ವದ ಬಣದಿಂದ ಪ್ರತಿಕ್ರಿಯೆ ಕೇಳಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ