ದೆಹಲಿ: ಆರ್ಯ ಸಮಾಜ ನೀಡಿದ ವಿವಾಹ ಪ್ರಮಾಣಪತ್ರಕ್ಕೆ (marriage certificate) ಕಾನೂನು ಮಾನ್ಯತೆ ನೀಡಲು ಸುಪ್ರೀಂಕೋರ್ಟ್ (Supreme Court) ಶುಕ್ರವಾರ ನಿರಾಕರಿಸಿದೆ. ಹಿಂದೂ ಸುಧಾರಣಾವಾದಿ ಸಂಘಟನೆಯಾದ ಆರ್ಯ ಸಮಾಜವನ್ನು (Arya Samaj) 1875 ರಲ್ಲಿ ಸ್ವಾಮಿ ದಯಾನಂದ ಸರಸ್ವತಿ ಸ್ಥಾಪಿಸಿದ್ದರು. ನ್ಯಾಯಮೂರ್ತಿಗಳಾದ ಅಜಯ್ ರಸ್ಟೋಗಿ ಮತ್ತು ಬಿವಿ ನಾಗರತ್ನ ಅವರ ಪೀಠವು ಆರ್ಯಸಮಾಜದ ಕೆಲಸ ಮತ್ತು ಅಧಿಕಾರ ವ್ಯಾಪ್ತಿ ವಿವಾಹ ಪ್ರಮಾಣಪತ್ರಗಳನ್ನು ನೀಡುವುದಲ್ಲ ಎಂದು ಹೇಳಿದೆ. “ಸಮರ್ಥ ಅಧಿಕಾರಿಗಳು ಮಾತ್ರ ಮದುವೆ ಪ್ರಮಾಣಪತ್ರಗಳನ್ನು ನೀಡಬಹುದು. ಮೂಲ ಪ್ರಮಾಣಪತ್ರವನ್ನು ನ್ಯಾಯಾಲಯದ ಮುಂದೆ ತನ್ನಿ’ ಎಂದು ಪೀಠ ಹೇಳಿತು. ಮಧ್ಯಪ್ರದೇಶದಲ್ಲಿ ಪ್ರೇಮ ವಿವಾಹಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ. ತಮ್ಮ ಮಗಳನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ಬಾಲಕಿಯ ಕುಟುಂಬಸ್ಥರು ಯುವಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆಕೆ ಅಪ್ರಾಪ್ತ ವಯಸ್ಸಿನವಳು ಎಂದಿದ್ದರು. ಬಾಲಕಿಯ ಕುಟುಂಬವು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಸೆಕ್ಷನ್ 5(ಎಲ್)/6 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದೆ. ಇದು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ್ದಾಗಿದೆ.
ಯುವತಿ ಅಪ್ರಾಪ್ತೆ ಅಲ್ಲ , ಆಕೆ ತನ್ನ ಸ್ವಂತ ಇಚ್ಛೆಯಿಂದ ಮದುವೆಯಾಗಲು ನಿರ್ಧರಿಸಿದ್ದಾಳೆ ಎಂದು ಯುವಕ ತನ್ನ ಅರ್ಜಿಯಲ್ಲಿ ತಿಳಿಸಿದ್ದಾನೆ. ಆರ್ಯ ಸಮಾಜ ಮಂದಿರದಲ್ಲಿ ವಿವಾಹ ನಡೆದಿತ್ತು. ಕೇಂದ್ರ ಭಾರತೀಯ ಆರ್ಯ ಪ್ರತಿನಿಧಿ ಸಭಾ ನೀಡಿದ ವಿವಾಹ ಪ್ರಮಾಣಪತ್ರವನ್ನು ಸಹ ವ್ಯಕ್ತಿ ಹಾಜರುಪಡಿಸಿದ್ದು, ಅದನ್ನು ಸ್ವೀಕರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಈ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಏಪ್ರಿಲ್‌ನಲ್ಲಿ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿತ್ತು. ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಮತ್ತು ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರ ಪೀಠವು ಆರ್ಯ ಪ್ರತಿನಿಧಿ ಸಭೆಗೆ ವಿಶೇಷ ವಿವಾಹ ಕಾಯ್ದೆ 1954 ರ ಸೆಕ್ಷನ್ 5, 6, 7 ಮತ್ತು 8 ರ ನಿಬಂಧನೆಗಳನ್ನು ಒಂದು ತಿಂಗಳೊಳಗೆ ತಮ್ಮ ಮಾರ್ಗಸೂಚಿಗಳಿಗೆ ಸೇರಿಸಲು ಹೇಳಿತ್ತು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 4:55 pm, Fri, 3 June 22