ದೆಹಲಿ: ದೇಶಾದ್ಯಂತ ಕ್ರೈಸ್ತ ಸಂಸ್ಥೆಗಳು (Christian institutions) ಮತ್ತು ಪಾದ್ರಿಗಳ ಮೇಲೆ ಹೆಚ್ಚುತ್ತಿರುವ ದಾಳಿ ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ (Supreme Court) ಸೋಮವಾರ ಜುಲೈ 15ಕ್ಕೆ ಮುಂದೂಡಿದೆ. ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಈ ಅರ್ಜಿಯನ್ನು ಶುಕ್ರವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ. ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್, ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು ಎಂದು ಕೇಳಿದ್ದಾರೆ. “ನೀವು ಹೇಳುತ್ತಿರುವುದು ಸಂಭವಿಸುತ್ತಿದ್ದರೆ ದುರದೃಷ್ಟಕರ. ನಿಮ್ಮ ವಿಷಯವನ್ನು ಮರು-ತೆರೆಯುವ ದಿನದಂದು ಕೈಗೆತ್ತಿಕೊಳ್ಳುತ್ತೇವೆ ಎಂದು ನಾವು ಖಚಿತಪಡಿಸಿಕೊಳ್ಳಬಹುದು” ಎಂದು ಪೀಠ ಹೇಳಿದೆ. ಬೆಂಗಳೂರು ಧರ್ಮಪ್ರಾಂತ್ಯದ ಆರ್ಚ್‌ಬಿಷಪ್ ಡಾ. ಪೀಟರ್ ಮಚಾಡೊ ಅವರು ಸಲ್ಲಿಸಿದ ಅರ್ಜಿಯಲ್ಲಿ, ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಕ್ರೈಸ್ತ ಸಮುದಾಯದ ಸದಸ್ಯರ ವಿರುದ್ಧ ಹಿಂಸಾಚಾರ ಮತ್ತು ಗುಂಪು ದಾಳಿಗಳನ್ನು ತಡೆಯಲು ನಿರ್ದೇಶನಗಳನ್ನು ಕೋರಲಾಗಿದೆ. ಅದೇ ವೇಳೆ ದ್ವೇಷದ ಅಪರಾಧಗಳನ್ನು ತಡೆಯಲು ಈ ಹಿಂದಿನ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ಕೋರಲಾಗಿದೆ.
ಈ ಪ್ರಕರಣ ಬಗ್ಗೆ ವಿಚಾರಣೆ ನಡೆಸುವುದಕ್ಕಾಗಿ ರಾಜ್ಯದಿಂದ ಹೊರಗಿನ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸಂತ್ರಸ್ತರ ವಿರುದ್ಧ ದಾಳಿಕೋರರಿಂದ ಸುಳ್ಳು ಕೌಂಟರ್ ಎಫ್‌ಐಆರ್‌ಗಳನ್ನು ದಾಖಲಿಸಿದ್ದು ಇದನ್ನು ಕಾನೂನಿಗೆ ಅನುಸಾರವಾಗಿ ಮುಚ್ಚುವುದಕ್ಕೆ ಎಸ್ಐಟಿಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಲಾಗಿದೆ. ತೆಹಸೀನ್ ಪೂನಾವಾಲಾ ತೀರ್ಪಿನಲ್ಲಿ ನೀಡಲಾದ ಮಾರ್ಗಸೂಚಿಗಳ ಅನುಷ್ಠಾನಕ್ಕೆ ಅರ್ಜಿಯು ಕೋರಿದೆ.ಇದರಲ್ಲಿ ರಾಷ್ಟ್ರದಾದ್ಯಂತ ದ್ವೇಷದ ಅಪರಾಧಗಳನ್ನು ಗಮನಿಸಲು ಮತ್ತು ಎಫ್‌ಐಆರ್‌ಗಳನ್ನು ದಾಖಲಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಎಂದು ಅರ್ಜಿಯಲ್ಲಿ ಹೇಳಿದೆ.