Sushil Kumar Modi Death: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್​ ಕುಮಾರ್ ಮೋದಿ ಕ್ಯಾನ್ಸರ್​ನಿಂದ ನಿಧನ

|

Updated on: May 14, 2024 | 9:06 AM

ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನಿಧನರಾಗಿದ್ದಾರೆ. ಅವರ ಬಾಲ್ಯ, ರಾಜಕೀಯ ಜೀವನ ಸೇರಿದಂತೆ ಕೆಲವು ಮಾಹಿತಿಗಳು ಇಲ್ಲಿವೆ.

Sushil Kumar Modi Death: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್​ ಕುಮಾರ್ ಮೋದಿ ಕ್ಯಾನ್ಸರ್​ನಿಂದ ನಿಧನ
ಸುಶೀಲ್ ಕುಮಾರ್ ಮೋದಿ
Follow us on

ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ(Sushil Kumar Modi) ನಿಧನರಾಗಿದ್ದಾರೆ. ಸುಶೀಲ್ ಮೋದಿ ಬಿಜೆಪಿಯ ಹಿರಿಯ ನಾಯಕರಲ್ಲಿ ಒಬ್ಬರು. ಅವರಿಗೆ 72 ವರ್ಷ ವಯಸ್ಸಾಗಿತ್ತು ಮತ್ತು ಕ್ಯಾನ್ಸರ್​ನಿಂದ ಬಳಲುತ್ತಿದ್ದರು.
ಬಿಹಾರದ ಹಾಲಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಎಕ್ಸ್​ನಲ್ಲಿ ಪೋಸ್ಟ್​ ಮಾಡಿ ಅವರ ನಿಧನದ ಬಗ್ಗೆ ಮಾಹಿತಿ ನೀಡಿ ದುಃಖ ವ್ಯಕ್ತಪಡಿಸಿದ್ದಾರೆ.

ಅವರು ಟ್ವೀಟ್​ ಮಾಡಿ, ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಮಾಜಿ ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ, ಇದು ಬಿಹಾರ ಬಿಜೆಪಿಗೆ ತುಂಬಲಾರದ ನಷ್ಟ’’ ಎಂದು ಬರೆದಿದ್ದಾರೆ.
ಸುಶೀಲ್ ಮೋದಿ ಅವರು ಕಳೆದ ಆರು ತಿಂಗಳಿನಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ಎಂದು ಸ್ವತಃ ಅವರೇ ಈ ಹಿಂದೆ ಮಾಹಿತಿ ನೀಡಿದ್ದರು.

ಸುಶೀಲ್ ಕುಮಾರ್ ಮೋದಿ ಜೀವನ
ಸುಶೀಲ್ ಕುಮಾರ್ ಮೋದಿ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಜನವರಿ 5, 1952ರಲ್ಲಿ ಜನಿಸಿದರು. ಅವರ ತಂದೆಯ ಹೆಸರು ಮೋತಿಲಾಲ್ ಮೋದಿ, ತಾಯಿಯ ಹೆಸರು ರತ್ನಾದೇವಿ. ಅವರ ಪತ್ನಿ ಜೆಸ್ಸಿ ಸುಶೀಲ್ ಮೋದಿ ಕ್ರಿಶ್ಚಿಯನ್ ಧರ್ಮದವರಾಗಿದ್ದು, ಪ್ರೊಫೆಸರ್ ಆಗಿದ್ದಾರೆ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಓರ್ವ ಉತ್ಕರ್ಷ್​ ತಥಾಗತ, ಮತ್ತೋರ್ವ ಅಕ್ಷಯ್ ಅಮೃತಾಂಕ್ಷು.
ಪಾಟ್ನಾ ವಿಜ್ಞಾನ ಕಾಲೇಜಿನಲ್ಲಿ ಸಸ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಅವರು 1990ರಲ್ಲಿ ಬಿಹಾರ ವಿಧಾನಸಭೆಗೆ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಇದಾದ ಬಳಿಕ1995 ಮತ್ತು 2000ರಲ್ಲಿಯೂ ಶಾಸಕರಾಗಿ ಆಯ್ಕೆಯಾದರು. ಸತತ ಮೂರು ಅವಧಿಗೆ ಶಾಸಕರಾಗಿದ್ದರು.

ಮತ್ತಷ್ಟು ಓದಿ: ಸಿಎಂ ಆಗಿ ಕಾರ್ಯ ನಿರ್ವಹಿಸಿದ ಏಕೈಕ ಪ್ರಧಾನಿ ನರೇಂದ್ರ ಮೋದಿ ಎಂದ ಸುಶೀಲ್ ಮೋದಿ: ತಪ್ಪು ಸರಿಪಡಿಸಿ ಇತಿಹಾಸದ ಪಾಠ ಹೇಳಿದ ನೆಟ್ಟಿಗರು

ಸುಶೀಲ್ ಮೋದಿ ರಾಜಕೀಯ ಜೀವನ
ಸುಶೀಲ್ ಮೋದಿ ಅವರು ಮೂರು ದಶಕಗಳ ಸುದೀರ್ಘ ರಾಜಕೀಯ ಜೀವನವನ್ನು ಹೊಂದಿದ್ದಾರೆ. ಈ ಅವಧಿಯಲ್ಲಿ ಅವರು ಶಾಸಕ, ಎಂಎಲ್​ಸಿ, ಲೋಕಸಭಾ ಸಂಸದ ಹಾಗೂ ರಾಜ್ಯಸಭಾ ಸಂಸದರೂ ಆಗಿದ್ದರು. ಬಿಹಾರ ಸರ್ಕಾರದಲ್ಲಿ ಹಣಕಾಸು ಸಚಿವ ಹುದ್ದೆಯನ್ನೂ ಅಲಂಕರಿಸಿದ್ದರು. ಎರಡು ಬಾರಿ ಬಿಹಾರ ಉಪಮುಖ್ಯಮಂತ್ರಿಯಾಗಿದ್ದರು.
ಅವರು 2005 ರಿಂದ 2013ರವರೆಗೆ ಮೊದಲ ಬಾರಿಗೆ ಮತ್ತು 2017ರಿಂದ 2020ರವರೆಗೆ ಎರಡನೇ ಬಾರಿಗೆ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು.

ಪ್ರಧಾನಿ ಮೋದಿ ಟ್ವೀಟ್​

ವಿದ್ಯಾರ್ಥಿ ರಾಜಕೀಯದಿಂದ ಮುಖ್ಯವಾಹಿನಿಯ ರಾಜಕೀಯಕ್ಕೆ ಬಂದ ನಾಯಕರಲ್ಲಿ ಒಬ್ಬರು. ಪಾಟ್ನಾ ವಿಶ್ವವಿದ್ಯಾಲಯ ಅವರ ವಿದ್ಯಾರ್ಥಿ ರಾಜಕಾರಣದ ನಾಡಾಯಿತು. 1973ರಲ್ಲಿ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. 1990ರಲ್ಲಿ ಅವರು ಪಾಟ್ನಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
ಇದಾದ ಬಳಿಕ 1995ರಲ್ಲಿ ಶಾಸಕರಾಗಿ ಆಯ್ಕೆಯಾಗಿ ನಂತರ ಬಿಜೆಪಿಯ ಮುಖ್ಯ ಸಚೇತಕರಾದರು. ಇದಾದ ಬಳಿಕ 2000ರಲ್ಲಿ ಸತತ ಮೂರನೇ ಬಾರಿಯೂ ಶಾಸಕರಾಗಿ ಆಯ್ಕೆಯಾದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:36 am, Tue, 14 May 24