ಕೋಲ್ಕತ್ತ: ಪಶ್ಚಿಮ ಬಂಗಾಳದ (West Bengal) ಮುನ್ಸಿಪಲ್ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (Trinamool Congress)ಭರ್ಜರಿ ಜಯಗಳಿಸಿದ ಬೆನ್ನಲ್ಲೇ ಇತ್ತ ಬಿಜೆಪಿಯಲ್ಲಿ ಸುವೇಂದು ಅಧಿಕಾರಿ (Suvendu Adhikari)ನಡೆ ನಿಗೂಢವಾಗಿದೆ. ಇವರು ಮೊದಲು ತೃಣಮೂಲ ಕಾಂಗ್ರೆಸ್ನಲ್ಲೇ ಇದ್ದು, ಬಿಜೆಪಿ ಸೇರ್ಪಡೆಯಾದವರು. ಬಿಜೆಪಿ ಸೇರಿದ ಬಳಿಕ ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್ ವಿರುದ್ಧ ಒಂದೇ ಸಮ ವಾಗ್ದಾಳಿ ನಡೆಸಿದ್ದರು. ಇತ್ತೀಚೆಗೆ ನಡೆದಿದ್ದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಕೇವಲ 63 ವಾರ್ಡ್ಗಳಲ್ಲಿ ಮಾತ್ರ ಗೆದ್ದುಕೊಂಡಿತ್ತು. ಅಂದರೆ ಶೇ.12.57ರಷ್ಟು ಮತ ಪಡೆದಿತ್ತು. ಒಂದೇ ಒಂದು ಪುರಸಭೆಯಲ್ಲಿ ಗೆಲ್ಲಲೂ ವಿಫಲವಾಗಿತ್ತು. ಇದರ ಬೆನ್ನಲ್ಲೇ ಶನಿವಾರ ಕೋಲ್ಕತ್ತದಲ್ಲಿ ಬಿಜೆಪಿ ಜನಪ್ರತಿನಿಧಿಗಳು, ಪ್ರಮುಖ ನಾಯಕರ ಸಭೆಯನ್ನು ಕರೆಯಲಾಗಿತ್ತು. ಆದರೆ ಈ ಸಭೆಗೆ ಪಶ್ಚಿಮ ಬಂಗಾಳ ವಿಧಾನಸಭೆ ಪ್ರತಿಪಕ್ಷ ನಾಯಕ (ಬಿಜೆಪಿ ಮುಖಂಡ) ಸುವೇಂದು ಅಧಿಕಾರಿ ಗೈರಾಗಿದ್ದಾರೆ.
ಸುವೇಂದು ಅಧಿಕಾರಿ ಸಭೆಗೆ ಗೈರಾಗಿದ್ದಷ್ಟೇ ಅಲ್ಲ, ಯಾವ ಕರೆಗೂ ಸ್ಪಂದಿಸಲಿಲ್ಲ. ಶನಿವಾರ ಸಭೆ ಇತ್ತು. ಸುವೇಂದು ಅಧಿಕಾರಿ ಶುಕ್ರವಾರ ರಾತ್ರಿ ತಮಗೆ ಸಭೆಗೆ ಬರಲು ಆಗುತ್ತಿಲ್ಲ ಎಂಬ ವಿಷಯವನ್ನು ತಿಳಿಸಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾಗಿ ಟೈಮ್ಸ್ ನೌ ವರದಿ ಮಾಡಿದೆ. ಸುವೇಂದು ಅಧಿಕಾರಿ ಸಭೆಗೆ ಯಾಕೆ ಬರಲಿಲ್ಲ ಎಂಬುದು ನಮಗೂ ಗೊತ್ತಿಲ್ಲ. ಬಹುಶಃ ಹಿರಿಯ ನಾಯಕರಿಗೆ ಅವರು ವಿಷಯ ತಿಳಿಸಿರಬಹುದು. ನನಗೆ ಸಭೆಗೆ ಆಹ್ವಾನವಿತ್ತು. ಹಾಗಾಗಿ ಹೋಗಿದ್ದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ತಿಳಿಸಿದ್ದಾರೆ.
ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಪ್ರಭುತ್ವ ಸಾಧಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದಷ್ಟೂ ಮತ್ತೆ ಮತ್ತೆ ಸೋಲುತ್ತಿದೆ. ರಾಷ್ಟ್ರೀಯ ಚುನಾವಣೆಗಳಲ್ಲೂ ಪಶ್ಚಿಮ ಬಂಗಾಳವೆಂಬುದು ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಕೂಡ ಗೆಲುವಿಗಾಗಿ ಬಿಜೆಪಿ ಸಿದ್ಧತೆ ನಡೆಸಿತ್ತು. ಕೊನೆಗೂ ಮಮತಾ ಬ್ಯಾನರ್ಜಿ ಪಕ್ಷವೇ ಅಲ್ಲಿ ಗೆದ್ದಿದೆ. ಈ ಬಾರಿ ಮುನ್ಸಿಪಲ್ ಚುನಾವಣೆಯಲ್ಲಿ ಕೇವಲ 63 ವಾರ್ಡ್ಗಳಲ್ಲಷೇ ಬಿಜೆಪಿ ಗೆದ್ದಿದೆ. 108 ಪುರಸಭೆಗಳಲ್ಲಿ ಒಂದೇ ಒಂದು ಪುರಸಭೆಯೂ ಬಿಜೆಪಿ ಪಾಲಿಗೆ ದಕ್ಕಲಿಲ್ಲ. ಇದು ಪಕ್ಷದ ಪಾಲಿಗೆ ಸಹಜವಾಗಿಯೇ ಬಹುದೊಡ್ಡ ಮುಜುಗರ ತಂದ ಸಂಗತಿಯಾಗಿದೆ.
ಇದನ್ನೂ ಓದಿ: ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಿದ್ದು ಚುನಾವಣೆ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ: ಅಮಿತ್ ಶಾ