ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ; ಬಿಜೆಪಿಗೆ ಕೆ. ಅಣ್ಣಾಮಲೈ ದಿಢೀರ್ ರಾಜೀನಾಮೆ

ತಮಿಳುನಾಡು ರಾಜಕಾರಣ ಕಳೆದ ಒಂದು ತಿಂಗಳಿನಿಂದ ದೇಶದ ಗಮನ ಸೆಳೆಯುತ್ತಿದೆ. ಟಿವಿಕೆ ನಾಯಕ ಜೋಸೆಫ್ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದ ಬೆನ್ನಲ್ಲೇ ತಮಿಳುನಾಡು ಬಿಜೆಪಿಯ ಫೈರ್‌ಬ್ರಾಂಡ್ ನಾಯಕ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ದಿಢೀರನೆ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ದೆಹಲಿಯಲ್ಲಿ ಇಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾದ ಅಣ್ಣಾಮಲೈ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ.

ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ; ಬಿಜೆಪಿಗೆ ಕೆ. ಅಣ್ಣಾಮಲೈ ದಿಢೀರ್ ರಾಜೀನಾಮೆ
Annamalai
Image Credit source: TV9

Updated on: Jun 02, 2026 | 2:49 PM

ನವದೆಹಲಿ, ಜೂನ್ 2: ತಮಿಳುನಾಡಿನ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಬೆಳವಣಿಗೆಯೊಂದು ನಡೆದಿದೆ. ತಮಿಳುನಾಡು ಬಿಜೆಪಿಯ ಪ್ರಮುಖ ನಾಯಕ ಕೆ. ಅಣ್ಣಾಮಲೈ (K Annamalai) ಇಂದು ಭಾರತೀಯ ಜನತಾ ಪಕ್ಷಕ್ಕೆ (BJP) ರಾಜೀನಾಮೆ ನೀಡಿದ್ದಾರೆ. ಕೆಲವು ದಿನಗಳಿಂದ ಅಣ್ಣಾಮಲೈ ಬಿಜೆಪಿನ ತೊರೆದು ಹೊಸ ಪಕ್ಷ ಕಟ್ಟಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಆದರೆ, ಈ ಬಗ್ಗೆ ಅಣ್ಣಾಮಲೈ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾದ ಅಣ್ಣಾಮಲೈ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ತಮಿಳುನಾಡು ರಾಜಕಾರಣದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಆಕ್ರಮಣಕಾರಿ ನಾಯಕ ಎಂದೇ ಗುರುತಿಸಿಕೊಂಡಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಬಿಜೆಪಿಗೆ ದಿಢೀರ್ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ದೆಹಲಿಗೆ ಭೇಟಿ ನೀಡಿರುವ ಅವರು ಪಕ್ಷದ ಉಸ್ತುವಾರಿ ಹಾಗೂ ಹಿರಿಯ ನಾಯಕರಾದ ನಿತಿನ್ ನಬಿನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶಗಳು ಮತ್ತು ಬಿಜೆಪಿಯ ಆಂತರಿಕ ಭಿನ್ನಾಭಿಪ್ರಾಯಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಇದನ್ನೂ ಓದಿ: ತಾವು ಹೊಸ ಪಕ್ಷ ಕಟ್ಟುವ ವದಂತಿ ಬಗ್ಗೆ ಅಣ್ಣಾಮಲೈ ಹೇಳಿದ್ದೇನು?

ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ಈ ದಿಢೀರ್ ನಿರ್ಧಾರಕ್ಕೆ ಕಾರಣವೇನೆಂಬುದರ ಬಗ್ಗೆ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ರಾಜಕೀಯ ವಲಯದಲ್ಲಿ ಅವರ ಈ ನಿರ್ಧಾರಕ್ಕೆ ಹಲವು ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ. ತಮಿಳುನಾಡಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಅಣ್ಣಾಮಲೈ ಅವರು ‘ಎನ್ ಮಣ್ಣ್, ಎನ್ ಮಕ್ಕಳ್’ (ನನ್ನ ಮಣ್ಣು, ನನ್ನ ಜನ) ಪಾದಯಾತ್ರೆ ಸೇರಿದಂತೆ ಭಾರಿ ಹೋರಾಟ ನಡೆಸಿದ್ದರು. ಆದರೆ, ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಯಶಸ್ಸು ಸಾಧಿಸದ ಹಿನ್ನೆಲೆಯಲ್ಲಿ ಸೋಲಿನ ನೈತಿಕ ಜವಾಬ್ದಾರಿ ಹೊತ್ತು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ, ಅಣ್ಣಾಮಲೈ ಅವರ ಆಕ್ರಮಣಕಾರಿ ಶೈಲಿಯ ರಾಜಕಾರಣದ ವಿರುದ್ಧ ತಮಿಳುನಾಡು ಬಿಜೆಪಿಯ ಹಿರಿಯ ನಾಯಕರಲ್ಲೇ ತೀವ್ರ ಅಸಮಾಧಾನವಿತ್ತು. ಮೈತ್ರಿಕೂಟದ ನಿರ್ಧಾರಗಳು ಮತ್ತು ಪಕ್ಷದ ಆಂತರಿಕ ನಾಯಕತ್ವದ ನಡುವಿನ ಗೊಂದಲಗಳೇ ರಾಜೀನಾಮೆಗೆ ಮುಖ್ಯ ಕಾರಣ ಎಂದು ಕೂಡ ಹೇಳಲಾಗುತ್ತಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಹೊಸ ಪಕ್ಷ ಕಟ್ಟಲು ಮುಂದಾದ್ರಾ ಬಿಜೆಪಿ ನಾಯಕ ಅಣ್ಣಾಮಲೈ?

ಕಳೆದ ಕೆಲವು ದಿನಗಳಿಂದ ಅಣ್ಣಾಮಲೈ ದೆಹಲಿಯಲ್ಲೇ ಬೀಡುಬಿಟ್ಟಿದ್ದರು. ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ತಮಿಳುನಾಡು ರಾಜಕೀಯ ಸ್ಥಿತಿಗತಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದರು. ತಾವು ಬೇರೆ ಪಕ್ಷ ಕಟ್ಟುವ ಬಗ್ಗೆ ಪ್ರಶ್ನೆ ಬಂದಾಗಲೂ ಅವರು ಸ್ಪಷ್ಟವಾಗಿ ಉತ್ತಿರಿಸಿರಲಿಲ್ಲ. ಕಾದು ನೋಡಿ ಎಂದಷ್ಟೇ ಹೇಳಿದ್ದರು. ಇಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ಅಧಿಕೃತವಾಗಿ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಹೈಕಮಾಂಡ್ ನಾಯಕರು ಅವರನ್ನು ಮನವೊಲಿಸಲು ಪ್ರಯತ್ನಿಸಿದರೂ, ಅಣ್ಣಾಮಲೈ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು ಎನ್ನಲಾಗಿದೆ.


ಅಣ್ಣಾಮಲೈ ರಾಜಕೀಯದಿಂದ ಬ್ರೇಕ್ ಪಡೆಯಲಿದ್ದಾರೆಯೇ ಅಥವಾ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳ ಜೊತೆ ಕೈಜೋಡಿಸಲಿದ್ದಾರೆಯೇ ಎಂಬುದು ಸದ್ಯದ ಕುತೂಹಲವಾಗಿದೆ. ಅವರು ಮತ್ತೆ ಪೊಲೀಸ್ ಸೇವೆಗೆ ಮರಳುವ ಸಾಧ್ಯತೆ ಇಲ್ಲ ಎಂದು ಆಪ್ತ ಮೂಲಗಳು ಸ್ಪಷ್ಟಪಡಿಸಿವೆ. ಅವರು ಹೊಸ ಪಕ್ಷ ಕಟ್ಟುವ ಸಿದ್ಧತೆಯಲ್ಲಿದ್ದಾರೆ ಎನ್ನಲಾಗುತ್ತಿದೆ.

ದೆಹಲಿಯಲ್ಲಿ ನಿತಿನ್ ನಬಿನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುವುದರೊಂದಿಗೆ ಅವರ ಐದು ವರ್ಷಗಳ ಬಿಜೆಪಿ ರಾಜಕೀಯ ಪಯಣಕ್ಕೆ ತೆರೆ ಬಿದ್ದಂತಾಗಿದೆ. ಇದು ದಕ್ಷಿಣ ಭಾರತದಲ್ಲಿ ಹೆಜ್ಜೆ ಇಡಲು ಪ್ರಯತ್ನಿಸುತ್ತಿದ್ದ ಬಿಜೆಪಿಗೆ ಭಾರಿ ಆಘಾತ ನೀಡಿದೆ. ಅಣ್ಣಾಮಲೈ ಅವರ ರಾಜೀನಾಮೆ ಸುದ್ದಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ #Annamalai ಎಂಬ ಹ್ಯಾಶ್‌ಟ್ಯಾಗ್ ಭಾರಿ ಟ್ರೆಂಡ್ ಆಗುತ್ತಿದೆ.

2020ರಲ್ಲಿ ರಾಜಕೀಯಕ್ಕೆ ಬಂದು ಅತ್ಯಂತ ಕಿರಿಯ ವಯಸ್ಸಿಗೆ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದ ಅಣ್ಣಾಮಲೈ, ಸದ್ಯಕ್ಕೆ ಯಾವುದೇ ಹೊಸ ಪಕ್ಷ ಕಟ್ಟುವ ನಿರ್ಧಾರ ಪ್ರಕಟಿಸಿಲ್ಲ. ಬದಲಿಗೆ ರಾಜ್ಯದಲ್ಲಿ ದೊಡ್ಡ ಮಟ್ಟದ ‘ಜನ ಚಳವಳಿ’ ಅಥವಾ ‘ಜನತಾ ಮೂವ್‌ಮೆಂಟ್’ ಪ್ರಾರಂಭಿಸಲು ಅವರು ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಮುಂದಿನ ಎರಡು ದಿನಗಳಲ್ಲಿ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸುವುದಾಗಿ ಅಣ್ಣಾಮಲೈ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:35 pm, Tue, 2 June 26

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us