Karunanidhi Memorial: ಚೆನ್ನೈನಲ್ಲಿ 39 ಕೋಟಿ ರೂ. ವೆಚ್ಚದಲ್ಲಿ ಕರುಣಾನಿಧಿ ಸ್ಮಾರಕ ನಿರ್ಮಾಣ; ಸಿಎಂ ಸ್ಟಾಲಿನ್ ಘೋಷಣೆ

| Updated By: ಸುಷ್ಮಾ ಚಕ್ರೆ

Updated on: Aug 24, 2021 | 5:07 PM

ತಮಿಳುನಾಡಿನ ಪ್ರಸಿದ್ಧ ಸಮುದ್ರ ತೀರವಾದ ಮರೀನಾ ಬೀಚ್ ಬಳಿ ಈ ಬೃಹತ್ ಸ್ಮಾರಕ ತಲೆಯೆತ್ತಲಿದೆ. 2.2 ಎಕರೆ ಜಾಗದಲ್ಲಿ 39 ಕೋಟಿ ರೂ. ವೆಚ್ಚದಲ್ಲಿ ಕರುಣಾನಿಧಿ ಸ್ಮಾರಕ ನಿರ್ಮಾಣವಾಗಲಿದೆ.

Karunanidhi Memorial: ಚೆನ್ನೈನಲ್ಲಿ 39 ಕೋಟಿ ರೂ. ವೆಚ್ಚದಲ್ಲಿ ಕರುಣಾನಿಧಿ ಸ್ಮಾರಕ ನಿರ್ಮಾಣ; ಸಿಎಂ ಸ್ಟಾಲಿನ್ ಘೋಷಣೆ
ಎಂ.ಕೆ. ಸ್ಟಾಲಿನ್
Follow us on

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ (DMK) ಪಕ್ಷದ ನಾಯಕ ದಿ. ಎಂ. ಕರುಣಾನಿಧಿ (M Karunanidhi) ಅವರ ಸ್ಮರಣಾರ್ಥ ಮರೀನಾ ಬೀಚ್ ಬಳಿ 39 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಆಧುನಿಕ ತಮಿಳುನಾಡು ನಿರ್ಮಾಣಕ್ಕೆ ಕರುಣಾನಿಧಿ ನೀಡಿರುವ ಕೊಡುಗೆಯನ್ನು ಪರಿಗಣಿಸಿ, ಈ ಸ್ಮಾರಕ ನಿರ್ಮಿಸುತ್ತಿರುವುದಾಗಿ ಕರುಣಾನಿಧಿ ಅವರ ಮಗ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (CM MK Stalin) ಘೋಷಣೆ ಮಾಡಿದ್ದಾರೆ. ಅಲ್ಲದೆ, 39 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಸ್ಮಾರಕದ ಮಾದರಿಯನ್ನು ಕೂಡ ಸಿಎಂ ಸ್ಟಾಲಿನ್ ಬಿಡುಗಡೆ ಮಾಡಿದ್ದಾರೆ.

ತಮಿಳುನಾಡಿನ ಪ್ರಸಿದ್ಧ ಸಮುದ್ರ ತೀರವಾದ ಮರೀನಾ ಬೀಚ್ ಬಳಿ ಈ ಬೃಹತ್ ಸ್ಮಾರಕ ತಲೆಯೆತ್ತಲಿದೆ. 2.2 ಎಕರೆ ಜಾಗದಲ್ಲಿ 39 ಕೋಟಿ ರೂ. ವೆಚ್ಚದಲ್ಲಿ ಕರುಣಾನಿಧಿ ಸ್ಮಾರಕ ನಿರ್ಮಾಣವಾಗಲಿದೆ. ಆಧುನಿಕ ತಮಿಳುನಾಡಿನ ಶಿಲ್ಪಿಯಾಗಿರುವ ಕರುಣಾನಿಧಿ ಅವರ ಕೊಡುಗೆಯ ಗೌರವಾರ್ಥ ಈ ಸ್ಮಾರಕ ನಿರ್ಮಿಸಲಾಗುತ್ತಿದೆ. ಡಿಎಂಕೆ ಪಕ್ಷದ ಸಂಸ್ಥಾಪಕರಾದ ಅಣ್ಣಾ ದೊರೈ ಅವರ ಸ್ಮಾರಕದ ಪಕ್ಕದಲ್ಲೇ ಕರುಣಾನಿಧಿ ಅವರ ಸ್ಮಾರಕವನ್ನು ನಿರ್ಮಿಸಲಾಗುತ್ತದೆ ಎಂದು ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಸ್ಟಾಲಿನ್ ಮಾಹಿತಿ ನೀಡಿದ್ದಾರೆ.

ಮರೀನಾ ಬೀಚ್ ಬಳಿ ನಿರ್ಮಾಣವಾಗಲಿರುವ ಕರುಣಾನಿಧಿ ಸ್ಮಾರಕದ ನೀಲನಕ್ಷೆ

ಇದೇ ಮರೀನಾ ಬೀಚ್ ದಡದಲ್ಲಿ ಡಿಎಂಕೆ ಸಂಸ್ಥಾಪಕ ಅಣ್ಣಾ ದೊರೈ, ಮಾಜಿ ಮುಖ್ಯಮಂತ್ರಿಗಳಾದ ಎಂ.ಜಿ. ರಾಮಚಂದ್ರನ್ (ಎಂಜಿಆರ್), ಜೆ. ಜಯಲಲಿತಾ ಅವರ ಸ್ಮಾರಕಗಳನ್ನು ಕೂಡ ನಿರ್ಮಿಸಲಾಗಿದೆ. 5 ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದ ಎಂ. ಕರುಣಾನಿಧಿ 50 ವರ್ಷ ತಮಿಳುನಾಡಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. 2018ರ ಆಗಸ್ಟ್ 7ರಂದು ಅವರು ಸಾವನ್ನಪ್ಪಿದ್ದರು. ತಮಿಳು ಸಮುದಾಯಕ್ಕೆ ಅವರು ನೀಡಿದ್ದ ಕೊಡುಗೆಯ ಸ್ಮರಣಾರ್ಥ 39 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಿಸಲಾಗುತ್ತಿದೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸರ್ಕಾರದ ಈ ನಿರ್ಧಾರವನ್ನು ವಿರೋಧ ಪಕ್ಷವಾದ ಎಐಎಡಿಎಂಕೆ ಕೂಡ ಸ್ವಾಗತಿಸಿದೆ. ಈಗ ನಾವು ನೋಡುತ್ತಿರುವ ಆಧುನಿಕ ತಮಿಳುನಾಡಿನ ನಿರ್ಮಾತೃ ಕರುಣಾನಿಧಿ ಅವರು. ಸ್ಪರ್ಧಿಸಿದ ಎಲ್ಲ ಚುನಾವಣೆಯಲ್ಲೂ ಗೆಲುವು ಕಂಡಿರುವ ಏಕೈಕ ರಾಜಕಾರಣಿಯೆಂದರೆ ಅದು ಕರುಣಾನಿಧಿ ಮಾತ್ರ. ಸೋಲಿಲ್ಲದ ಸರದಾರ ಎಂದೇ ಹೆಸರಾಗಿದ್ದ ಕರುಣಾನಿಧಿ 50 ವರ್ಷಗಳ ಕಾಲ ಡಿಎಂಕೆ ಪಕ್ಷವನ್ನು ಮುನ್ನಡೆಸಿದ್ದಾರೆ. 13 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಕರುಣಾನಿಧಿ 1957ರಿಂದ 2016ರವರೆಗೆ ಒಂದು ಬಾರಿ ಕೂಡ ಸೋಲಿನ ರುಚಿ ಕಂಡಿಲ್ಲ.

ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ತಂದುಕೊಡುವ ನಿಟ್ಟಿನಲ್ಲೂ ಕರುಣಾನಿಧಿ ಸಾಕಷ್ಟು ಹೋರಾಟ ನಡೆಸಿದ್ದರು. ಚೆನ್ನೈ ಮೆಟ್ರೋ ಯೋಜನೆ, ಆಸ್ತಿಯಲ್ಲಿ ಮಹಿಳೆಯರಿಗೂ ಸಮಾನ ಹಕ್ಕು ಮುಂತಾದ ಅನೇಕ ಯೋಜನೆಗಳನ್ನು ಕರುಣಾನಿಧಿ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದರು. ಹೀಗಾಗಿ, ಅವರ ನೆನಪಿನಲ್ಲಿ ಸ್ಮಾರಕ ನಿರ್ಮಿಸಲಾಗುತ್ತಿದೆ ಎಂದು ಸಿಎಂ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ.

ಇದನ್ನೂ ಓದಿ: MK Stalin: ಜಿಮ್​ನಲ್ಲಿ ಬೆವರಿಳಿಸಿದ ಎಂಕೆ ಸ್ಟಾಲಿನ್; ತಮಿಳುನಾಡು ಸಿಎಂ ಫಿಟ್​ನೆಸ್ ವಿಡಿಯೋ ವೈರಲ್

MK Stalin Oath taking: ತಮಿಳುನಾಡು ಮುಖ್ಯಮಂತ್ರಿಯಾಗಿ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್​ ಪ್ರಮಾಣ ವಚನ ಸ್ವೀಕಾರ

(Tamil Nadu CM MK Stalin Announces 39 Crore Memorial For M Karunanidhi in Chennai Marina Beach)

Published On - 5:02 pm, Tue, 24 August 21