ತಮಿಳುನಾಡು: ಉಡುಗೊರೆಯನ್ನು ಪ್ರೀತಿ ಪಾತ್ರರಿಗೆ ನೀಡುವಾಗ ಆಗುವ ಸಂತೋಷವೇ ಬೇರೆ. ಉಡುಗೊರೆಯನ್ನು ನೀಡಿ ಸಂತೋಷದ ಘಳಿಗೆಯನ್ನು ಹುಟ್ಟು ಹಾಕುವುದು ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಯಾವ ಉಡುಗೊರೆಯನ್ನು ನೀಡಬೇಕು ಎನ್ನುವುದೇ ದೊಡ್ಡ ಸವಾಲಿನ ಕೆಲಸ. ಕೆಲವರಿಗೆ ಎಂತಹಾ ಉಡುಗೊರೆ ನೀಡಿದರೂ ನಿಶ್ಕಲ್ಮಶ ಮನಸ್ಸಿನಿಂದ ಸ್ವೀಕರಿಸುತ್ತಾರೆ. ಇನ್ನೂ ಕೆಲವರಿಗೆ ಎಷ್ಟೇ ದುಬಾರಿ ಮೌಲ್ಯದ ಉಡುಗೊರೆ ನೀಡಿದರೂ ಮೂಗು ಮುರಿಯುವುದು ಬಿಡುವುದಿಲ್ಲ. ಹೀಗಾಗಿಯೇ ಇದು ಸವಾಲಿನ ಕೆಲಸವೇ ಆಗಿರುತ್ತದೆ.
ಮದುವೆಗೆ ಸಹಜವಾಗಿ ಸ್ನೇಹಿತರು ನೀಡುವ ಉಡುಗೊರೆ ಹೇಗಿರುತ್ತದೆ ಎಂದರೆ.. ನವ ದಂಪತಿಗಳಿಗೆ ಆ ಉಡುಗೊರೆ ಮುಂದಿನ ಜೀವನಕ್ಕೆ ಸ್ಪೂರ್ತಿಯಾಗಿರಬೇಕು. ಅಂಥಹಾ ಗಿಫ್ಟ್ಗಳನ್ನೇ ನೀಡುವುದು ನೋಡಿದ್ದೇವೆ. ಆದರೆ ಇಲ್ಲೊಂದು ದಂಪತಿಗೆ ನೀಡಿದ ಉಡುಗೊರೆಯನ್ನು ನೋಡಿದರೆ ನಿಜಕ್ಕೂ ನಗು ಬರುತ್ತದೆ. ಸ್ನೇಹಿತರೆಲ್ಲರೂ ಸೇರಿ ಬಂಗಾರ, ಬಟ್ಟೆ ಅಥವಾ ಫೋಟೊ ಫ್ರೇಮ್ಗಳನ್ನು ನೀಡುವುದು ಸಹಜ. ಆದರೆ ತಮಿಳುನಾಡಿನ ದಂಪತಿಗೆ ಅವರ ಸ್ನೇಹಿತರು ನೀಡಿದ ಉಡುಗೊರೆ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಹಾಗೂ ಪೆಟ್ರೋಲ್.
ಎಲ್ಪಿಜಿ ಅಡುಗೆ ಅನಿಲ ದರ ಹಾಗೂ ಪೆಟ್ರೋಲ್ ದರ ಏರಿಕೆಯಾಗಿರುವುದರಿಂದ ಸ್ನೇಹಿತರೆಲ್ಲರೂ ಸೇರಿ ಇದನ್ನು ಉಡುಗೊರೆಯಾಗಿ ತಮಿಳುನಾಡಿನ ನವದಂಪತಿಗೆ ಗಿಫ್ಟ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಫುಲ್ ವೈರಲ್ ಆಗಿದ್ದು, ಜನರ ಅಚ್ಚರಿಗೆ ಕಾರಣವಾಗಿದೆ. ಉಡುಗೊರೆ ನೀಡುವ ಬಗ್ಗೆ ಹೆಚ್ಚು ಯೋಚನೆ ಮಾಡಿದ ನಂತರ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಹಾಗೂ ಪೆಟ್ರೋಲ್ ನೀಡುವುದು ಸೂಕ್ತ ಎಂದು ನಿರ್ಧರಿಸಿದೆವು ಎಂದು ಉಡುಗೊರೆ ನೀಡಿದ ಸ್ನೇಹಿತರು ಹೇಳಿದ್ದಾರೆ.
ರಾಜ್ಯದಲ್ಲಿ ಪೆಟ್ರೋಲ್ ಬೆಲೆ 100 ರೂ. ಸಮೀಪ ತಲುಪಿದ್ದು, ಜೊತೆಗೆ ಎಲ್ಪಿಜಿ ಅಡುಗೆ ಅನಿಲ ದರ ಸುಮಾರು 900 ರೂ.ಗೆ ತಲುಪಿದ್ದರಿಂದ ದುಬಾರಿ ಉಡುಗೊರೆ ಎಂದು ಪರಿಗಣಿಸಿ ಇದನ್ನು ತಮಿಳನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದ ಕಾರ್ತಿಕ್ ಹಾಗೂ ಶರಣ್ಯ ಎಂಬ ನವದಂಪತಿಗೆ ಸ್ನೇಹಿತರು ಗಿಫ್ಟ್ ಮಾಡಿದ್ದಾರೆ.
Couple gets Petrol, Gas Cylinder and Onions as a Wedding Gift in Tamilnadu. pic.twitter.com/IWxqDRXy1s
— बेरोजगार मनराज सिंह (@manraj_mokha) February 18, 2021
ಕರ್ನಾಟಕದಲ್ಲೂ ಕೆಲವೊಂದು ಮದುವೆಯಲ್ಲಿ ಸ್ನೇಹಿತರ ಈ ರೀತಿಯ ಉಡುಗೊರೆ ಹೆಚ್ಚು ನಗೆ ಹನಿಗೆ ಕಾರಣವಾಗಿದೆ. ಇತ್ತೀಚೆಗೆ ಉತ್ತರ ಕರ್ನಾಟಕ ಭಾಗದ ಮದುವೆಯೊಂದರಲ್ಲಿ ಸ್ನೇಹಿತರೆಲ್ಲರೂ ಸೇರಿ ಈರುಳ್ಳಿಯನ್ನು ನೀಡಿದ್ದರು. ಆ ಮದುವೆ ವೇಳೆ ಈರುಳ್ಳಿ ದರ ಹೆಚ್ಚಾಗಿದ್ದರಿಂದ ಈರುಳ್ಳಿಯನ್ನು ಗಿಫ್ಟ್ ಮಾಡಿದ್ದಾರೆಂಬ ಮಾತುಗಳು ಕೇಳಿ ಬಂದಿತ್ತು. ಅಲ್ಲದೇ ಇದಕ್ಕೆ ಸಂಬಂಧಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ದಕ್ಷಿಣ ಕನ್ನಡದ ಭಾಗದಲ್ಲಿ ಪುಂಡಿ ಎನ್ನುವುದು ಒಂದು ಉಪಹಾರ. ಇದನ್ನು ಸಿದ್ಧಪಡಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಆದರೆ ಇದೀಗ ಹುಡುಗ-ಹುಡಗಿ ಫೋನ್ನಲ್ಲಿ ಹೆಚ್ಚು ಮಾತನಾಡಿದರೆ ಈ ಪುಂಡಿ ಎನ್ನುವ ಹೆಸರು ಬಳಸುತ್ತಾರೆ. ಪುಂಡಿ ಬೇಯಿಸಿ ಆಯ್ತಾ ಎಂದು ತಮಾಷೆಗೆ ಕೇಳುತ್ತಾರೆ. ಅಲ್ಲದೇ ನಿಶ್ಚಿತಾರ್ಥದ ದಿನದಂದು ಇನ್ನು ಮದುವೆಯಾಗುವವರೆಗೂ ಪುಂಡಿ ಬೇಯಿಸಿ ಎಂದು ಪುಂಡಿ ಮಾಡುವ ಪಾತ್ರೆಯನ್ನು ಸ್ನೇಹಿತರು ಉಡುಗೊರೆಯಾಗಿ ನೀಡಿ ತಮಾಷೆಯ ಘಳಿಗೆಯನ್ನು ಸೃಷ್ಟಿಸುತ್ತಾರೆ. ಇದು ಸದ್ಯ ಒಂದು ರೀತಿಯ ಟ್ರೆಂಡ್ ಆಗಿದೆ.
ಇದನ್ನೂ ಓದಿ: 35 ನೇ ವಸಂತಕ್ಕೆ ಕಾಲಿಟ್ಟ ನಟಿ ಶ್ರುತಿ ಹಾಸನ್: ಆಪ್ತರು ಕೊಟ್ಟ 10 ದುಬಾರಿ ಉಡುಗೊರೆ ಲಿಸ್ಟ್ ಇಲ್ಲಿದೆ
ಇದನ್ನೂ ಓದಿ: ಎತ್ತಿನ ಬಂಡಿ ಓಟ, ಮಸ್ತ್ ಮಜಾ ನೋಟ..! ಧೂಳೆಬ್ಬಿಸಿದ ಶರವೇಗದ ಜೋಡೆತ್ತಿನ ಬಂಡಿ ರೇಸ್..!
Published On - 11:51 am, Sun, 21 February 21