ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ರಲ್ಲಿ ಕ್ಷಮೆಯಾಚಿಸಿದ ತಮಿಳುನಾಡಿನ ಹೋಟೆಲ್ ಮಾಲೀಕ, ಏನಿದು ಪ್ರಕರಣ?

|

Updated on: Sep 13, 2024 | 4:32 PM

"ಕೊಯಮತ್ತೂರಿನ ಅನ್ನಪೂರ್ಣ ರೆಸ್ಟೋರೆಂಟ್‌ನಂತಹ ಸಣ್ಣ ವ್ಯಾಪಾರದ ಮಾಲೀಕರು ನಮ್ಮ ಸಾರ್ವಜನಿಕ ಸೇವಕರನ್ನು ಸರಳೀಕೃತ ಜಿಎಸ್‌ಟಿ ಆಡಳಿತಕ್ಕಾಗಿ ಕೇಳಿದಾಗ, ಅವರ ವಿನಂತಿಗೆ ದುರಹಂಕಾರ ಮತ್ತು ಸಂಪೂರ್ಣ ಅಗೌರವದ ಉತ್ತರ ಸಿಗುತ್ತದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ರಲ್ಲಿ ಕ್ಷಮೆಯಾಚಿಸಿದ ತಮಿಳುನಾಡಿನ ಹೋಟೆಲ್ ಮಾಲೀಕ, ಏನಿದು ಪ್ರಕರಣ?
ನಿರ್ಮಲಾ ಸೀತಾರಾಮನ್ ಅವರಲ್ಲಿ ಕ್ಷಮೆ ಕೇಳಿದ ಶ್ರೀನಿವಾಸ್
Follow us on

ದೆಹಲಿ ಸೆಪ್ಟೆಂಬರ್ 13: ತಮಿಳುನಾಡಿನ (Tamil Nadu) ಹೆಸರಾಂತ ರೆಸ್ಟೋರೆಂಟ್ ನ ಮಾಲೀಕರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರಲ್ಲಿ ಕ್ಷಮೆಯಾಚಿಸುವ ವಿಡಿಯೊದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul gandhi) ಶುಕ್ರವಾರ ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಕ್ಸ್‌ ಪೋಸ್ಟ್ ನಲ್ಲಿ ಕೊಯಮತ್ತೂರಿನ ಐಕಾನಿಕ್ ಅನ್ನಪೂರ್ಣ ಹೊಟೇಲ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಅವರ ನಡೆಗೆ ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕೊಯಮತ್ತೂರಿನ ಅನ್ನಪೂರ್ಣ ರೆಸ್ಟೋರೆಂಟ್‌ನಂತಹ ಸಣ್ಣ ವ್ಯಾಪಾರದ ಮಾಲೀಕರು ನಮ್ಮ ಸಾರ್ವಜನಿಕ ಸೇವಕರನ್ನು ಸರಳೀಕೃತ ಜಿಎಸ್‌ಟಿ ಆಡಳಿತಕ್ಕಾಗಿ ಕೇಳಿದಾಗ, ಅವರ ವಿನಂತಿಗೆ ದುರಹಂಕಾರ ಮತ್ತು ಸಂಪೂರ್ಣ ಅಗೌರವದ ಉತ್ತರ ಸಿಗುತ್ತದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಇದು ಸರ್ಕಾರವು ಹೇಗೆ ನಡೆದುಕೊಳ್ಳುತ್ತದೆ ಎಂಬುದನ್ನು ತೋರಿಸುತ್ತದೆ ಎಂದ ರಾಹುಲ್, “ಆದರೂ, ಕೋಟ್ಯಾಧಿಪತಿ ಸ್ನೇಹಿತನು ನಿಯಮಗಳನ್ನು ಸಡಿಲಿಸಲು, ಕಾನೂನುಗಳನ್ನು ಬದಲಾಯಿಸಲು ಅಥವಾ ರಾಷ್ಟ್ರೀಯ ಆಸ್ತಿಯನ್ನು ಪಡೆಯಲು ಪ್ರಯತ್ನಿಸಿದಾಗ, ಮೋದಿ ಜಿ ರೆಡ್ ಕಾರ್ಪೆಟ್ ಹಾಸುತ್ತಾರೆ ಎಂದಿದ್ದಾರೆ.

ರಾಹುಲ್ ಗಾಂಧಿ ಟ್ವೀಟ್


ಜಿಎಸ್‌ಟಿ ವ್ಯವಸ್ಥೆಯ ಜಟಿಲತೆಗಳ ಕುರಿತು ಸಾರ್ವಜನಿಕ ಸಭೆಯಲ್ಲಿ ಹೇಳಿಕೆ ನೀಡಿದ ನಂತರ ಶ್ರೀನಿವಾಸನ್ ಅವರು ನಿರ್ಮಲಾ ಸೀತಾರಾಮನ್ ಅವರಲ್ಲಿ ಕ್ಷಮೆಯಾಚಿಸಿದ್ದು, ಈ ವಿಡಿಯೊ ಬೆನ್ನಲ್ಲೇ ವಿವಾದದ ಕಿಡಿ ಹತ್ತಿಕೊಂಡಿದೆ. ತಮಿಳುನಾಡು ಹೊಟೇಲ್ ಅಸೋಸಿಯೇಷನ್ ಪ್ರತಿನಿಧಿಸುವ ಶ್ರೀನಿವಾಸನ್ ಅವರು ವಿವಿಧ ಆಹಾರ ಪದಾರ್ಥಗಳಿಗೆ ಅಸಂಗತ ಜಿಎಸ್‌ಟಿ ದರಗಳನ್ನು ಅನ್ವಯಿಸಿರುವುದನ್ನು ಹಾಸ್ಯಮಯವಾಗಿ ಟೀಕಿಸಿದಾಗ ಪ್ರೇಕ್ಷಕರು ನಗಾಡಿದ್ದರು. ಸಂಕೀರ್ಣವಾದ ತೆರಿಗೆ ವ್ಯವಸ್ಥೆಯು ವ್ಯವಹಾರಗಳು ಮತ್ತು ಗ್ರಾಹಕರಿಬ್ಬರಿಗೂ ಹೇಗೆ ಗೊಂದಲವನ್ನು ಉಂಟುಮಾಡುತ್ತಿದೆ ಎಂಬುದನ್ನು ಅವರು ಸರಳವಾಗಿ ಈ ರೀತಿ ಹೇಳಿದ್ದಾರೆ.

ಇದಕ್ಕಾಗಿ ಬನ್ ಮತ್ತು ಕ್ರೀಂನ ಉದಾಹರಣೆಯನ್ನು ನೀಡಿದ ಅವರು, “ಬನ್ ಮೇಲೆ ಜಿಎಸ್ಟಿ ಇಲ್ಲ. ಆದರೆ ನೀವು ಅದರಲ್ಲಿ ಕ್ರೀಮ್ ಹಾಕಿದರೆ, ಜಿಎಸ್ಟಿ 18% ಆಗುತ್ತದೆ. ಗ್ರಾಹಕರು ಈಗ ಹೆಚ್ಚಿನ ತೆರಿಗೆ ಪಾವತಿಸುವುದನ್ನು ತಪ್ಪಿಸಲು ಬನ್ ಮತ್ತು ಕ್ರೀಮ್ ಅನ್ನು ಪ್ರತ್ಯೇಕವಾಗಿ ಕೊಡಿ ಅಂತಾರೆ ಎಂದಿದ್ದಾರೆ.

ಮರುದಿನ, ಶ್ರೀನಿವಾಸನ್, ಸೀತಾರಾಮನ್ ಅವರನ್ನು ಮುಚ್ಚಿದ ಬಾಗಿಲಿನ ಸಭೆಯಲ್ಲಿ ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್ ಅವರೊಂದಿಗೆ ಭೇಟಿಯಾದರು. ಶ್ರೀನಿವಾಸನ್ ಅವರು ಹಣಕಾಸು ಸಚಿವರಲ್ಲಿ ಕ್ಷಮೆಯಾಚಿಸುವ ವಿಡಿಯೊವನ್ನು ತಮಿಳುನಾಡು ಬಿಜೆಪಿ ಕಾರ್ಯಾಧ್ಯಕ್ಷ ಬಾಲಾಜಿ ಎಂಎಸ್ ಅವರು ಹಂಚಿಕೊಂಡಿದ್ದರು.

ಶ್ರೀನಿವಾಸನ್ ಕೇಳಿರುವ ಪ್ರಶ್ನೆ ಮತ್ತು ಮರುದಿನ ಕ್ಷಮೆಯಾಚಿಸಿದ್ದಾರೆ ಎನ್ನಲಾದ ವಿಡಿಯೊ

ವಿರೋಧ ಪಕ್ಷದ ನಾಯಕರು ಈ ವೀಡಿಯೊವನ್ನು ಬೆದರಿಕೆಯ ಒಂದು ರೂಪವೆಂದು ಖಂಡಿಸಿದ್ದು, ಕೇವಲ ಕಳವಳವನ್ನು ವ್ಯಕ್ತಪಡಿಸುವುದಕ್ಕಾಗಿ ಬಿಜೆಪಿಯು ಸಣ್ಣ ವ್ಯಾಪಾರ ಮಾಲೀಕರನ್ನು ಅವಮಾನಿಸಿದೆ ಎಂದು ಆರೋಪಿಸಿದ್ದಾರೆ

“ನಮ್ಮ ಸಣ್ಣ ವ್ಯಾಪಾರ ಮಾಲೀಕರು ಈಗಾಗಲೇ ನೋಟು ಅಮಾನ್ಯೀಕರಣ, ಪ್ರವೇಶಿಸಲಾಗದ ಬ್ಯಾಂಕಿಂಗ್ ವ್ಯವಸ್ಥೆ, ತೆರಿಗೆ ಸುಲಿಗೆ ಮತ್ತು ವಿನಾಶಕಾರಿ ಜಿಎಸ್‌ಟಿಯ ಹೊಡೆತಗಳನ್ನು ಸಹಿಸಿಕೊಂಡಿದ್ದಾರೆ. ಅವರಿಗೆ ಈಗ ಮತ್ತಷ್ಟು ಅವಮಾನವಾಗಿದೆ. ಆದರೆ ಅಧಿಕಾರದಲ್ಲಿರುವವರ ದುರ್ಬಲವಾದ ಅಹಂಕಾರಕ್ಕೆ ನೋವುಂಟಾದಾಗ, ಅವಮಾನವನ್ನು ಅವರು ನಿಖರವಾಗಿ ತಲುಪಿಸುತ್ತಾರೆ ಎಂದು ತೋರುತ್ತದೆ ಎಂದು ರಾಹುಲ್ ಗಾಂಧಿ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಸರಳೀಕೃತ ಜಿಎಸ್‌ಟಿ ರಚನೆಯ ಕರೆಯನ್ನು ಪುನರುಚ್ಚರಿಸಿದ ರಾಹುಲ್” ಎಂಎಸ್‌ಎಂಇಗಳು ಹಲವು ವರ್ಷಗಳಿಂದ ಪರಿಹಾರವನ್ನು ಕೇಳುತ್ತಿವೆ. ಈ ದುರಹಂಕಾರಿ ಸರ್ಕಾರವು ಜನರ ಮಾತನ್ನು ಕೇಳಿದರೆ, ಒಂದೇ ತೆರಿಗೆ ದರದೊಂದಿಗೆ ಸರಳೀಕೃತ ಜಿಎಸ್‌ಟಿಯು ಲಕ್ಷಾಂತರ ವ್ಯವಹಾರಗಳ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಅವರು ಅರ್ಥಮಾಡಿಕೊಳ್ಳುತ್ತಾರೆ.” ಎಂದಿದ್ದಾರೆ.

ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್​ಗೆ ಜಾಮೀನು ಸಿಕ್ಕಿದೆ ಆದ್ರೂ ಯಾವ ಕಡತಗಳಿಗೂ ಸಹಿ ಹಾಕುವಂತಿಲ್ಲ

ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರೀನೇಟ್ ಅವರು, ಶ್ರೀನಿವಾಸನ್ ಅವರನ್ನು ಕ್ಷಮೆಯಾಚಿಸುವಂತೆ ಬಿಜೆಪಿ ಒತ್ತಾಯಿಸಿದೆ ಮತ್ತು ಅವರ ಅರಿವಿಲ್ಲದೆ ಅದನ್ನು ರೆಕಾರ್ಡ್ ಮಾಡಿದೆ ಎಂದು ಆರೋಪಿಸಿದರು. “ವಿತ್ತ ಸಚಿವೆಯ ವೇದಿಕೆಯಲ್ಲಿ ನಗಿಸಿತದಾಗ, ಅದೇ ಮಾಲೀಕರು ನಂತರ ಅವರ ಬಳಿ ವೈಯಕ್ತಿಕವಾಗಿ ಕ್ಷಮೆಯಾಚಿಸಿದರು. ಅವರ ಕ್ಷಮೆಯನ್ನು ಬಿಜೆಪಿಯ ಅಧಿಕೃತ ಹ್ಯಾಂಡಲ್‌ನಿಂದ ರಹಸ್ಯವಾಗಿ ರೆಕಾರ್ಡ್ ಮಾಡಲಾಗಿದೆ ಮತ್ತು ಹಂಚಿಕೊಳ್ಳಲಾಗಿದೆ. ಇದು ದುರಹಂಕಾರದ ಪರಮಾವಧಿ” ಎಂದು ಶ್ರೀನೇಟ್ ಹೇಳಿದ್ದಾರೆ.