ಚೆನ್ನೈ, ಸೆಪ್ಟೆಂಬರ್ 02: ತಮಿಳುನಾಡಿನ ಪ್ರಸಿದ್ಧ ಹಾಗೂ ಐತಿಹಾಸಿಕ ದೇವಾಲಯಗಳ ಧಾರ್ಮಿಕ ಪಾವಿತ್ರ್ಯತೆ, ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಉದ್ದೇಶದಿಂದ ರಾಜ್ಯದ 52 ಪ್ರಮುಖ ದೇವಾಲಯಗಳ ಆವರಣದೊಳಗೆ ಸ್ಮಾರ್ಟ್‌ಫೋನ್(Smart Phone)ಗಳ ಬಳಕೆ ಮತ್ತು ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಹೊರಡಿಸಿರುವ ಈ ನೂತನ ಆದೇಶವು ಮಂಗಳವಾರದಿಂದಲೇ ಜಾರಿಗೆ ಬಂದಿದ್ದು, ದೇವಸ್ಥಾನದೊಳಗೆ ಸೆಲ್ಫಿ, ಫೋಟೋಗ್ರಫಿ ಹಾಗೂ ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಮಾಡುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.
ದೇವಾಲಯಕ್ಕೆ ಬರುವ ಭಕ್ತರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಪ್ರವೇಶದ್ವಾರದಲ್ಲಿರುವ ವಿಶೇಷ ಕೌಂಟರ್‌ಗಳಲ್ಲಿ ಠೇವಣಿ ಇಡಬೇಕು. ಪ್ರತಿ ಮೊಬೈಲ್‌ಗೆ 5 ರೂ. ನಿರ್ವಹಣಾ ಶುಲ್ಕ ಪಾವತಿಸಿ ಟೋಕನ್ ಅಥವಾ ಕಂಪ್ಯೂಟರ್ ರಸೀದಿ ಪಡೆಯಬೇಕು. ಪೂಜೆ ಮುಗಿದ ನಂತರ ರಸೀದಿ ತೋರಿಸಿ ಫೋನ್ ಮರಳಿ ಪಡೆಯಬಹುದು.
ಕ್ಯಾಮೆರಾ ರಹಿತ ಫೋನ್‌ಗಳಿಗೆ ವಿನಾಯಿತಿ: ಕ್ಯಾಮೆರಾ ಸೌಲಭ್ಯವಿಲ್ಲದ ಸಾಮಾನ್ಯ ಕೀಪ್ಯಾಡ್ (Basic) ಫೋನ್‌ಗಳನ್ನು ದೇವಾಲಯದ ಒಳಗೆ ಕೊಂಡೊಯ್ಯಲು ಯಾವುದೇ ನಿರ್ಬಂಧವಿಲ್ಲ.
ಫೋಟೋ-ವಿಡಿಯೋ ಸಂಪೂರ್ಣ ಬ್ಯಾನ್: ಗರ್ಭಗುಡಿಯ ವಿಗ್ರಹಗಳು, ಪೂಜಾ ಕೈಂಕರ್ಯಗಳು ಹಾಗೂ ವಿಐಪಿಗಳ ಆಗಮನದ ಸಂದರ್ಭದಲ್ಲಿ ಯಾವುದೇ ಛಾಯಾಗ್ರಹಣ ಅಥವಾ ವಿಡಿಯೋ ಚಿತ್ರೀಕರಣ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಮತ್ತಷ್ಟು ಓದಿ: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್: ಹೆಡ್‌ಲೈಟ್ ಇಲ್ಲದೆ 90 ಕಿ.ಮೀ ಪ್ರಯಾಣ!
ಕಾಂಚೀಪುರಂ ದೇವಸ್ಥಾನದಲ್ಲಿ ಆರಂಭ: ಕಾಂಚೀಪುರಂನ ಸುಪ್ರಸಿದ್ಧ ದೇವರಾಜಸ್ವಾಮಿ-ಅತ್ತಿ ವರದರ್ ದೇವಾಲಯದಲ್ಲಿ ಮಂಗಳವಾರ ಬೆಳಗ್ಗೆ 6 ಗಂಟೆಯಿಂದಲೇ ಈ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಭಕ್ತರ ಮೊಬೈಲ್ ಸಂಖ್ಯೆ ಮತ್ತು ಮಾಡೆಲ್ ನಮೂದಿಸಿ ಕಂಪ್ಯೂಟರೀಕೃತ ರಸೀದಿ ನೀಡುವ ಪ್ರಕ್ರಿಯೆ ಆರಂಭವಾಗಿದೆ.
ಸಾರ್ವಜನಿಕರ ಆಕ್ಷೇಪ ಮತ್ತು ಕಳವಳ: ದೇವಸ್ಥಾನದ ಪ್ರಶಾಂತ ವಾತಾವರಣ ಕಾಪಾಡಲು ಇದು ಉತ್ತಮ ಹೆಜ್ಜೆ ಎಂದು ಹಲವರು ಶ್ಲಾಘಿಸಿದ್ದರೆ, ದೈನಂದಿನ ಭಕ್ತರು ಪ್ರತಿ ಬಾರಿಯೂ 5ರೂ. ಶುಲ್ಕ ಮತ್ತು ಕೌಂಟರ್‌ಗಳಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾಗುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬೆಲೆಬಾಳುವ ಮೊಬೈಲ್ ಫೋನ್‌ಗಳ ಭದ್ರತೆಯ ಬಗ್ಗೆ ಸಿಬ್ಬಂದಿ ಕೂಡ ಆತಂಕ ಹೊರಹಾಕಿದ್ದಾರೆ.
ಸರ್ಕಾರದ ಸ್ಪಷ್ಟನೆ: ಈ 5 ರೂ. ಶುಲ್ಕವು ಸರ್ಕಾರದ ಆದಾಯಕ್ಕಲ್ಲ, ಕೌಂಟರ್ ಸಿಬ್ಬಂದಿ ವೇತನ, ಭದ್ರತಾ ಲಾಕರ್ ಮತ್ತು ಮೂಲಸೌಕರ್ಯ ನಿರ್ವಹಣೆಗೆ ಮಾತ್ರ ಬಳಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ: ತಿರುಚೆಂಡೂರಿನ ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಮೊಬೈಲ್ ನಿಷೇಧ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು, 2022ರ ಡಿಸೆಂಬರ್‌ನಲ್ಲೇ ದೇಗುಲಗಳ ಪಾವಿತ್ರ್ಯತೆ ಕಾಪಾಡಲು ಮೊಬೈಲ್ ಬ್ಯಾನ್ ಜಾರಿಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಕರ್ನಾಟಕ ಮತ್ತು ಇತರೆ ರಾಜ್ಯಗಳಲ್ಲೂ ಮಾದರಿ: ಕರ್ನಾಟಕದ ಕೊಲ್ಲೂರು ಮೂಕಾಂಬಿಕಾ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಹಾಗೂ ತಿರುಪತಿ ತಿರುಮಲ ಸೇರಿದಂತೆ ದೇಶದ ಹಲವು ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಈಗಾಗಲೇ ಗರ್ಭಗುಡಿ ಹಾಗೂ ಒಳಾಂಗಣದಲ್ಲಿ ಮೊಬೈಲ್ ಬಳಕೆಗೆ ಕಟ್ಟುನಿಟ್ಟಿನ ನಿಷೇಧ ಜಾರಿಯಲ್ಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:51 am, Wed, 2 September 26