9, 10 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ, ಎಲ್ಲರೂ ಪಾಸ್: ತಮಿಳುನಾಡು ಸಿಎಂ ಪಳನಿಸ್ವಾಮಿ

Tamil Nadu: ಇಂಟರ್​ನಲ್ ಪರೀಕ್ಷೆಯಲ್ಲಿ ಲಭಿಸಿದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಕಲಿಕೆಯ ಮೌಲ್ಯಮಾಪನ ಮಾಡಲಾಗುವುದು. ಬಾಕಿ ಇರುವ ಪರೀಕ್ಷೆಗಳ ಅಂಕವನ್ನು ಎರಡು ಮಾನದಂಡಗಳಿಂದ ನಿರ್ಣಯಿಸಲಾಗುವುದು.

9, 10 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ, ಎಲ್ಲರೂ ಪಾಸ್: ತಮಿಳುನಾಡು ಸಿಎಂ ಪಳನಿಸ್ವಾಮಿ
ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ

Updated on: Feb 25, 2021 | 2:21 PM

ಚೆನ್ನೈ:  9, 10 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಎಲ್ಲರನ್ನೂ ಉತ್ತೀರ್ಣ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಡಿ ಕೆ. ಪಳನಿಸ್ವಾಮಿ ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕದ ನಡುವೆ ಎಸ್ಎಸ್ಎಲ್​ಸಿ ಮತ್ತು ಪ್ಲಸ್ ಒನ್ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ಹೇಳಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ ಪಳನಿಸ್ವಾಮಿ.

ಮೌಲ್ಯ ಮಾಪನ ಹೇಗೆ?
ಇಂಟರ್​ನಲ್ ಪರೀಕ್ಷೆಯಲ್ಲಿ ಲಭಿಸಿದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಕಲಿಕೆಯ ಮೌಲ್ಯಮಾಪನ ಮಾಡಲಾಗುವುದು. ಬಾಕಿ ಇರುವ ಪರೀಕ್ಷೆಗಳ ಅಂಕವನ್ನು ಎರಡು ಮಾನದಂಡಗಳಿಂದ ನಿರ್ಣಯಿಸಲಾಗುವುದು. ಕಾಲುವಾರ್ಷಿಕ ಮತ್ತು ಅರ್ಧವಾರ್ಷಿಕ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಶೇಕಡಾ 80 ಅಂಕ ಮತ್ತು ಹಾಜರಾತಿಯನ್ನು ಪರಿಗಣಿಸಿ ಶೇಕಡಾ 20 ಅಂಕಗಳನ್ನು ನೀಡಲಾಗುವುದು. ಈ ಬಗ್ಗೆ ತಮಿಳುನಾಡು ಶಿಕ್ಷಣ ಇಲಾಖೆ ಶಾಲೆಗಳಿಗೆ ಇನ್ನೂ ಸುತ್ತೋಲೆ ಕಳುಹಿಸಿಲ್ಲ. ಆದಾಗ್ಯೂ, ತಮಿಳುನಾಡು ಸರ್ಕಾರದ ಪರೀಕ್ಷಾ ನಿರ್ದೇಶನಾಲಯ ಬಿಡುಗಡೆ ಮಾಡಿದ ವೇಳಾಪಟ್ಟಿ ಪ್ರಕಾರ 12ನೇ ತರಗತಿಗೆ ಪರೀಕ್ಷೆ ನಡೆಯಲಿದೆ.

12ನೇ ತರಗತಿಗೆ ಮೇ 3ರಿಂದ ಮೇ 21ರವರೆಗೆ ನಡೆಯಲಿದೆ. ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ನಡೆಯುತ್ತಿದ್ದ ಪರೀಕ್ಷೆ ಕೋವಿಡ್ ಸಾಂಕ್ರಾಮಿಕದಿಂದಾಗಿ ಮುಂದೂಡಿಕೆಯಾಗಿತ್ತು. 2020 ಮಾರ್ಚ್ ತಿಂಗಳಲ್ಲಿ ಕೋವಿಡ್​ನಿಂದಾಗಿ ತಮಿಳುನಾಡಿನಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು. ಆನಂತರ ಜನವರಿ 19ರಂದು 10 ಮತ್ತು 12ನೇ ತರಗತಿ ಮಕ್ಕಳಿಗೆ ಮಾತ್ರ ತರಗತಿ ಆರಂಭ ಮಾಡಲಾಗಿತ್ತು.

ಚೆನ್ನೈನಲ್ಲ 169 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 2,34,837ಕ್ಕೇರಿದೆ. ಇಲ್ಲಿಯವರೆಗೆ 4,145 ಮಂದಿ ಕೊವಿಡ್​ನಿಂದಾಗಿ ಸಾವಿಗೀಡಾಗಿದ್ದಾರೆ. ಬುಧವಾರ 50,395 ಮಾದರಿಗಳನ್ನು ಪರೀಕ್ಷೆಗೊಳಪಡಿಸಿದ್ದು ಈವರೆಗೆ 1,72,72,643 ಮಾದರಿಗಳನ್ನು ಪರೀಕ್ಷಿಸಲಾಗಿದೆ. 29 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಒಂದಂಕಿಯಾಗಿದ್ದು, 33 ಜಿಲ್ಲೆಗಳಲ್ಲಿ ಇಲ್ಲಿಯವರಿಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆಯ ಬುಲೆಟಿನ್​ನಲ್ಲಿ ಹೇಳಿದೆ.

 ಇದನ್ನೂ ಓದಿ: ಅಸೆಂಬ್ಲಿ ಚುನಾವಣೆಗೂ ಮುನ್ನ.. ತಮಿಳುನಾಡಿನಲ್ಲಿ ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸು ಏರಿಕೆ ಮಾಡಿದ ಸರ್ಕಾರ

Published On - 1:51 pm, Thu, 25 February 21