ಬೋಟಿನಲ್ಲಿ ಪಾಠ ಶಾಲೆ; ವರ್ಷಕ್ಕೆ 6 ತಿಂಗಳು ಪ್ರವಾಹದಲ್ಲಿ ಮುಳುಗುವ ಪ್ರದೇಶದಲ್ಲಿ ಯುವಕರಿಂದ ‘ಶಿಕ್ಷಣದ ನಾವೆಗೆ’ ಚಾಲನೆ

| Updated By: ಆಯೇಷಾ ಬಾನು

Updated on: Sep 06, 2021 | 10:03 AM

ಪ್ರವಾಹ ಬಂತೆಂದರೆ ಸಾಕು ಇಲ್ಲಿನ ಜನ ಸಾಮಾನ್ಯರ ಜೀವನ ಕಷ್ಟಕ್ಕೆ ಸಿಲುಕುತ್ತದೆ. ಮತ್ತು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಪ್ರತಿ ವರ್ಷದ ಈ ಸಮಸ್ಯೆಗೆ ಕೆಲ ಶಿಕ್ಷಕರು ಪರಿಹಾರ ಕಂಡುಕೊಂಡಿದ್ದಾರೆ. ಪ್ರವಾಹದಿಂದ ಮಕ್ಕಳ ಭವಿಷ್ಯಕ್ಕೆ ಕಷ್ಟ ಆಗಬಾರದೆಂದು ಪ್ರವಾಹದಲ್ಲೇ ದೋಣಿಗಳನ್ನು ನಿಲ್ಲಿಸಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಮುಂದಾಗಿದ್ದಾರೆ.

ಬೋಟಿನಲ್ಲಿ ಪಾಠ ಶಾಲೆ; ವರ್ಷಕ್ಕೆ 6 ತಿಂಗಳು ಪ್ರವಾಹದಲ್ಲಿ ಮುಳುಗುವ ಪ್ರದೇಶದಲ್ಲಿ ಯುವಕರಿಂದ ‘ಶಿಕ್ಷಣದ ನಾವೆಗೆ’ ಚಾಲನೆ
ಬೋಟಿನಲ್ಲಿ ಪಾಠ ಶಾಲೆ; ವರ್ಷಕ್ಕೆ 6 ತಿಂಗಳು ಪ್ರವಾಹದಲ್ಲಿ ಮುಳುಗುವ ಪ್ರದೇಶದಲ್ಲಿ ಯುವಕರಿಂದ ಶಿಕ್ಷಣದ ನಾವೆಗೆ ಚಾಲನೆ
Follow us on

ಉತ್ತರ ಭಾರತದಲ್ಲಿ ಅದರಲ್ಲೂ ಬಿಹಾರ, ಅಸ್ಸಾಂ ರಾಜ್ಯಗಳಲ್ಲಿ ವರ್ಷದುದ್ದಕ್ಕೂ ಫ್ಲಾಷ್ ಫ್ಲಡ್ಗಳದ್ದೇ ಗೋಳಾಟ. ಕಣ್ಣು ಹಾಯಿಸಿದಷ್ಟೂ ನೀರೋ ನೀರು. ಪರಿಸ್ಥಿತಿ ಹೀಗಿರುವಾಗ ಅಲ್ಲಿನ ಜನಜೀವನ ಕಲ್ಪಿಸಿಕೊಳ್ಳಲೂ ಅಸಾಧ್ಯ. ಅದೂ ಶಿಕ್ಷಣ ಕಲಿತು, ಭವ್ಯ ಭವಿಷ್ಯ ರೂಪಿಸಿಕೊಳ್ಳಬೇಕಾದ ಮಕ್ಕಳ ಗತಿಯೇನು? ಇದನ್ನು ಅರಿತ ಮೂವರು ಯುವಕರು ನಿನ್ನೆ ನಡೆದ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ವಿಶೇಷ ಸಾಹಸಕ್ಕೆ ಮುಂದಾಗಿದ್ದಾರೆ.

ಮೂವರು ಶಿಕ್ಷಕರು ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹದಲ್ಲಿ ಸಿಲುಕಿರುವ ಶಾಲಾ ವಿದ್ಯಾರ್ಥಿಗಳಿಗೆ ದೋಣಿಗಳಲ್ಲೇ ತರಗತಿ ನಡೆಸಿದ್ದಾರೆ. ಮಣಿಹರಿ ಉಪವಿಭಾಗದ ಕತಿಹಾರ್‌ನ ಗಂಗಾ ಪ್ರತಿ ವರ್ಷವೂ ಪ್ರವಾಹಕ್ಕೆ ಸಿಲುಕುತ್ತದೆ ಮತ್ತು ಹಲವಾರು ತಿಂಗಳುಗಳ ಕಾಲ ಈ ಪ್ರದೇಶ ಪೂರ್ತಿ ಜಲಾವೃತಗೊಂಡಿರುತ್ತದೆ. ಪ್ರವಾಹ ಬಂತೆಂದರೆ ಸಾಕು ಇಲ್ಲಿನ ಜನ ಸಾಮಾನ್ಯರ ಜೀವನ ಕಷ್ಟಕ್ಕೆ ಸಿಲುಕುತ್ತದೆ. ಮತ್ತು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಪ್ರತಿ ವರ್ಷದ ಈ ಸಮಸ್ಯೆಗೆ ಕೆಲ ಶಿಕ್ಷಕರು ಪರಿಹಾರ ಕಂಡುಕೊಂಡಿದ್ದಾರೆ. ಪ್ರವಾಹದಿಂದ ಮಕ್ಕಳ ಭವಿಷ್ಯಕ್ಕೆ ಕಷ್ಟ ಆಗಬಾರದೆಂದು ಪ್ರವಾಹದಲ್ಲೇ ದೋಣಿಗಳನ್ನು ನಿಲ್ಲಿಸಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಮುಂದಾಗಿದ್ದಾರೆ.

ಕೊರೊನಾ-ಪ್ರವಾಹ ಬಂದರೇನು..? ದೋಣಿಗಳಲ್ಲೇ ಶಿಕ್ಷಣ!
ಸ್ಥಳೀಯ ಮೀನುಗಾರರು ಮತ್ತು ದೋಣಿಗಾರರಿಂದ ದೋಣಿಗಳನ್ನು ಪಡೆದು ಕುಂದನ್ ಕುಮಾರ್ ಸಾಹಾ, ಪಂಕಜ್ ಕುಮಾರ್ ಸಾಹಾ ಮತ್ತು ರವೀಂದ್ರ ಮಂಡಲ್ ಎಂಬ ಮೂವರು ಶಿಕ್ಷಕರು ಬೆಳ್ಳಂ ಬೆಳಿಗ್ಗೆಯೇ ಮನೆಯಿಂದ ಹೊರಟು ದೂರದ ಹಳ್ಳಿಗಳನ್ನು ತಲುಪಿ ಪ್ರವಾಹದಿಂದಾಗಿ ಶಿಕ್ಷಣ ವಂಚಿತರಾಗುತ್ತಿರುವ ಮಕ್ಕಳನ್ನು ಒಟ್ಟುಗೂಡಿಸಿ ಶಿಕ್ಷಣ ನೀಡುತ್ತಿದ್ದಾರೆ.

ಒಮ್ಮೆಗೆ ಸುಮಾರು 20 ವಿದ್ಯಾರ್ಥಿಗಳನ್ನು ದೋಣಿಯಲ್ಲಿ ಕೂರಿಸಿ ದೋಣಿಯನ್ನು ಹತ್ತಿರದ ಮರಕ್ಕೆ ಕಟ್ಟುತ್ತಾರೆ. ಪ್ರವಾಹದ ಮಧ್ಯೆ ನೀರಿನ ಮೇಲೆ ದೋಣಿಗಳಲ್ಲಿ ವೈಟ್ ಬೋರ್ಡ್ ಹಾಕಿ ವಿದ್ಯಾರ್ಥಿಗಳಲ್ಲಿ ಜ್ಞಾನದ ಜ್ಯೋತಿಯನ್ನು ಬೆಳೆಗಿಸುತ್ತಿದ್ದಾರೆ. ಕೋಪಿತಳಾದ ಗಂಗೆಯ ಅಲೆಗಳು ವಿದ್ಯಾರ್ಥಿಗಳಿರುವ ದೋಣಿಯನ್ನು ಮೃದುವಾಗಿ ಅಲುಗಾಡಿಸಿದರು ಶಿಕ್ಷಣ ಮಾತ್ರ ಮುಂದುವರೆಯುತ್ತಲೇ ಇರುತ್ತದೆ.

ಈ ಯುವ ಶಿಕ್ಷಕರು ವಿದ್ಯಾರ್ಥಿಗಳ ಬಳಿ ಯಾವುದೇ ಶುಲ್ಕವನ್ನು ಪಡೆಯದೆ ಮಕ್ಕಳಿಗೆ ತಾವೇ ಪುಸ್ತಕಗಳು, ನೋಟ್‌ಬುಕ್‌ಗಳು ಮತ್ತು ಪೆನ್ಸಿಲ್‌ಗಳನ್ನು ಖರೀದಿಸಿ ಅವರ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ಇನ್ನು ಮಣಿಹರಿಯ ಮಕ್ಕಳಿಗೆ ಶಿಕ್ಷಣವು ಎಂದಿಗೂ ಸುಗಮ ನೌಕಾಯಾನವಾಗಿರಲಿಲ್ಲ, ಹೆಚ್ಚಾಗಿ ಬಡವರು, ರೈತರು ಮತ್ತು ಕಾರ್ಮಿಕರು ವಾಸವಿರುವ ಈ ಪ್ರದೇಶದಲ್ಲಿ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ. ಒಮ್ಮೆ ಪ್ರವಾಹದಿಂದ ಬಾಳು ನೀರಲ್ಲಿ ತೇಲುವ ಗುಳ್ಳೆಯಾದ್ರೆ ಎರಡು ವರ್ಷಗಳಿಂದ ಜನರನ್ನು ಕಾಡುತ್ತಿರುವ ಮಹಾಮಾರಿ ಕೊರೊನಾ ಸೋಂಕು ಇಲ್ಲಿನ ಜನರನ್ನು ಮತ್ತಷ್ಟು ತೊಂದರೆಗಳಿಗೆ ಸಿಲುಕುವಂತೆ ಮಾಡಿತ್ತು. ಈ ಪ್ರದೇಶದ ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟವು ಮತ್ತು ಇಂಟರ್ನೆಟ್ ಸಂಪರ್ಕದ ಕೊರತೆಯಿಂದಾಗಿ ಆನ್‌ಲೈನ್ ಕಲಿಕೆ ಕೂಡ ದೂರದ ಕನಸಾಗಿ ಉಳಿಯಿತು. ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳು ಪ್ರವಾಹ ಮತ್ತು ಕೊರೊನಾ ಲಾಕ್ಡೌನ್ನಿಂದ ಶಿಕ್ಷಣದಿಂದ ಅತಂತ್ರರಾಗಿದ್ದಾರೆ ಎಂದು ಶಿಕ್ಷಕ ರವೀಂದ್ರ ಮಂಡಲ್ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.

ಪ್ರವಾಹದ ನೀರಿನ ಮೇಲೆ ತೇಲುತ್ತಿರುವ ದೋಣಿಗಳಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳವರೆಗೂ ಎಲ್ಲಾ ವಿದ್ಯಾರ್ಥೊಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಅವರಿಗೆ ಇತರ ವಿಷಯಗಳ ಜೊತೆಗೆ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಹಿಂದಿ ಮತ್ತು ಇಂಗ್ಲಿಷ್ ಕಲಿಸಲಾಗುತ್ತಿದೆ. ಶಿಕ್ಷಕರ ಈ ಸಾಹಸ ಹಾಗೂ ನಿಸ್ವಾರ್ಥ ಸೇವೆಗೆ ನಮ್ಮದೊಂದು ಸಲಾಮ್!

ಇದನ್ನೂ ಓದಿ: ಹೊಸ ಶಿಕ್ಷಣ ನೀತಿ ಬಗ್ಗೆ ಗೊತ್ತಿಲ್ಲದಿದ್ರೆ ಬೇರೆಯವರ ಬಳಿ ಕೇಳಿ ತಿಳಿಯಲಿ: ಡಿಕೆ ಶಿವಕುಮಾರ್​ಗೆ ಅಶ್ವತ್ಥ್ ನಾರಾಯಣ ತಿರುಗೇಟು