ಪ್ರಧಾನಿ ಮೋದಿ ಇಂದಿನಿಂದ 3 ದಿನಗಳ ಗುಜರಾತ್ ಪ್ರವಾಸ; ಜತೆಯಾಗಲಿದ್ದಾರೆ ಡಬ್ಲ್ಯೂಎಚ್ಒ ಮಹಾನಿರ್ದೇಶಕ ಟೆಡ್ರೊಸ್ ಘೆಬ್ರೆಯೆಸಸ್
ಬುಧವಾರ ಘೆಬ್ರೆಯೆಸಸ್ ಗಾಂಧಿನಗರಕ್ಕೆ ಭೇಟಿ ಕೊಡಲಿದ್ದಾರೆ. ಅಂದು ಅಲ್ಲಿ ಪ್ರಧಾನಿ ಮೋದಿ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆ ಉದ್ಘಾಟನೆ ಮಾಡಲಿದ್ದಾರೆ. ಇದು ಮೂರು ದಿನಗಳ ಶೃಂಗಸಭೆಯಾಗಿದ್ದು, ಮಹಾತ್ಮಾ ಮಂದಿರ್ನಲ್ಲಿ ನಡೆಯಲಿದೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ (ಏಪ್ರಿಲ್ 3) ಮೂರು ದಿನಗಳ ಗುಜರಾತ್ ಪ್ರವಾಸ ಹಮ್ಮಿಕೊಂಡಿದ್ದಾರೆ. ಈ ಮೂರು ದಿನಗಳ ಕಾಲ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು ಮೊದಲು ಗುಜರಾತ್ನ ಗಾಂಧಿ ನಗರದಲ್ಲಿರುವ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಹಾಗೇ, ಮರುದಿನ (ಏಪ್ರಿಲ್ 19) ಬನಸ್ಕಾಂತದ ಡಿಯೋದರ್ನಲ್ಲಿರುವ ಬನಾಸ್ ಡೇರಿ ಸಂಕುಲ್ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವರು ಮತ್ತು ಅನುಷ್ಠಾನಗೊಂಡಿರುವ ಹಲವು ಯೋಜನೆಗಳನ್ನು ಉದ್ಘಾಟಿಸುವರು ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.
ಹಾಗೇ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಡಾ ಟೆಡ್ರೊಸ್ ಘೆಬ್ರೆಯೆಸಸ್ ಕೂಡ ಇಂದಿನಿಂದ ಮೂರು ದಿನಗಳ ಭಾರತ ಪ್ರವಾಸ ಹಮ್ಮಿಕೊಂಡಿದ್ದಾರೆ. ಅವರು ಇಂದು ಗುಜರಾತ್ನ ರಾಜಕೋಟ್ಗೆ ಭೇಟಿ ನೀಡಲಿದ್ದು, ನಂತರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಜತೆಯಾಗಲಿದ್ದಾರೆ. ಏಪ್ರಿಲ್ 19ರಂದು ಗುಜರಾತ್ನ ಜಮ್ನಾಗರ್ನಲ್ಲಿ ಡಬ್ಲ್ಯೂಎಚ್ಒದ ಸಾಂಪ್ರದಾಯಿಕ ಔಷಧದ ಜಾಗತಿಕ ಕೇಂದ್ರ (GCTM)ವನ್ನು ಪ್ರಧಾನಿ ಮೋದಿ ಮತ್ತು ಟೆಡ್ರೊಸ್ ಘೆಬ್ರೆಯೆಸಸ್ ಜತೆಯಾಗಿ ಲೋಕಾರ್ಪಣೆಗೊಳಿಸಲಿದ್ದಾರೆ. ಈ ಜಿಸಿಟಿಎಂ ಜಗತ್ತಿನ ಏಕೈಕ ಸಾಂಪ್ರದಾಯಿಕ ಔಷಧ ಕೇಂದ್ರ ಎಂದು ರಾಜ್ಕೋಟ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬುಧವಾರ ಘೆಬ್ರೆಯೆಸಸ್ ಗಾಂಧಿನಗರಕ್ಕೆ ಭೇಟಿ ಕೊಡಲಿದ್ದಾರೆ. ಅಂದು ಅಲ್ಲಿ ಪ್ರಧಾನಿ ಮೋದಿ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆ ಉದ್ಘಾಟನೆ ಮಾಡಲಿದ್ದಾರೆ. ಇದು ಮೂರು ದಿನಗಳ ಶೃಂಗಸಭೆಯಾಗಿದ್ದು, ಮಹಾತ್ಮಾ ಮಂದಿರ್ನಲ್ಲಿ ನಡೆಯಲಿದೆ. 90 ಪ್ರಖ್ಯಾತ ಭಾಷಣಕಾರರು ಮತ್ತು 100ಕ್ಕೂ ಹೆಚ್ಚು ಪ್ರದರ್ಶನಕಾರರು ಪಾಲ್ಗೊಳ್ಳಲಿದ್ದಾರೆ. ಇನ್ನೊಂದು ವಿಶೇಷವೆಂದರೆ ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಅವರೂ ಇಂದು ರಾಜ್‌ಕೋಟ್‌ಗೆ ಆಗಮಿಸಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅವರನ್ನು ಸ್ವಾಗತಿಸಲಾಗುವುದು. ಅಲ್ಲಿಂದ ಅಶ್ವದಳದ ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಗುವುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ರಣಬೀರ್-ಆಲಿಯಾ ಮದುವೆಗೆ ದೀಪಿಕಾ, ಕತ್ರಿನಾ ಗಿಫ್ಟ್ ಏನು? ದಂಪತಿಗೆ ಕೋಟ್ಯಂತರ ರೂ. ಬೆಲೆಯ ಉಡುಗೊರೆ
Published On - 9:05 am, Mon, 18 April 22