ತೆಲಂಗಾಣ ಎಸ್‌ಎಸ್‌ಸಿ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್(Bandi Sanjay Kumar) ಅವರಿಗೆ ವಾರಂಗಲ್ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ. ಜಾಮೀನು ಅರ್ಜಿಯ ವಿಚಾರಣೆಯ ನಂತರ, ಹನಮಕೊಂಡದ ಹೆಚ್ಚುವರಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಗುರುವಾರ ರಾತ್ರಿ ಸಂಜಯ್ ಅವರನ್ನು ಕೆಲವು ಷರತ್ತುಗಳಿಗೆ ಒಳಪಟ್ಟು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಿದರು. ಜಾಮೀನು ನೀಡುವಾಗ, ಸಂಜಯ್ ದೇಶ ತೊರೆಯುವುದಿಲ್ಲ, ತನಿಖೆಗೆ ಸಹಕರಿಸಬೇಕು ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಎಂದು ಕೋರ್ಟ್ ಷರತ್ತು ವಿಧಿಸಿದೆ. ಅವರನ್ನು ಬುಧವಾರ ಬಂಧಿಸಲಾಗಿತ್ತು.
ಬಿಜೆಪಿಯ ಲೀಗಲ್ ಸೆಲ್ ತಂಡ ಸಲ್ಲಿಸಿದ್ದ ಜಾಮೀನು ಅರ್ಜಿಯ ಮೇರೆಗೆ 20,000 ರೂ.ಗಳ ವೈಯಕ್ತಿಕ ಬಾಂಡ್‌ನಲ್ಲಿ ಸಂಜಯ್ ಕುಮಾರ್‌ಗೆ ನ್ಯಾಯಾಲಯ ಜಾಮೀನು ನೀಡಿದೆ. ಶುಕ್ರವಾರ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ನ್ಯಾಯಾಲಯ ಆದೇಶಿಸಿದೆ. ಇದಕ್ಕೂ ಮುನ್ನ 10ನೇ ತರಗತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಜಯ್ ಕುಮಾರ್ ನ್ಯಾಯಾಂಗ ಬಂಧನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ತೆಲಂಗಾಣ ಹೈಕೋರ್ಟ್ ಏಪ್ರಿಲ್ 10ಕ್ಕೆ ಮುಂದೂಡಿತ್ತು.
ಮತ್ತಷ್ಟು ಓದಿ: Bandi Sanjay Kumar Detained: ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಬಂಧನ
ಮುಖ್ಯ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ನೇತೃತ್ವದ ಪೀಠವು ಸಂಜಯ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿ, ಪ್ರತಿವಾದ ಅಫಿಡವಿಟ್ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದೆ. ಜಾಮೀನಿಗಾಗಿ ಸಂಬಂಧಪಟ್ಟ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಸಂಜಯ್‌ಗೆ ನ್ಯಾಯಾಲಯ ಹೇಳಿತ್ತು.
ಬಿಜೆಪಿ ನಾಯಕರೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ಮೇರೆಗೆ ಹೈಕೋರ್ಟ್‌ನ ಮತ್ತೊಂದು ಪೀಠವು ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು. ಪ್ರಕರಣದ ಒಟ್ಟು 10 ಆರೋಪಿಗಳ ಪೈಕಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, 10ನೇ ತರಗತಿಯ ಅಪ್ರಾಪ್ತನಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಬಂಡಿ ಸಂಜಯ್, ಬೂರ ಪ್ರಶಾಂತ್, ಗುಂಡಬೋಯಿನ ಮಹೇಶ್ ಮತ್ತು ಮೂತಂ ಶಿವ ಗಣೇಶ್ ಎಂಬುವರನ್ನು ಬಂಧಿಸಲಾಗಿದೆ. ಪೋಗು ಸುಭಾಷ್, ಪೋಗು ಶಶಾಂಕ್, ದೂಳಂ ಶ್ರೀಕಾಂತ್, ಪೆರುಮಂಡಲ ಶ್ರಮಿಕ್ ಮತ್ತು ಪೋತನಬೋಯಿನ ವರ್ಷಿತ್ ತಲೆಮರೆಸಿಕೊಂಡಿದ್ದಾರೆ.
ಬಿಜೆಪಿಯನ್ನು ಹತ್ತಿಕ್ಕುವ ಬಿಆರ್‌ಎಸ್ ಪ್ರಯತ್ನದ ಭಾಗವಾಗಿ ಸಂಜಯ್ ಕುಮಾರ್ ಅವರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ