
ಹೈದರಾಬಾದ್, ಅಕ್ಟೋಬರ್ 21: ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಯ ಕುಟುಂಬಗಳಿಗೆ ನೀಡಲಾಗುವ ಪರಿಹಾರ ಧನವನ್ನು 2 ಕೋಟಿ ರೂ.ವರೆಗೆ ಹೆಚ್ಚಿಸುವುದಾಗಿ ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಘೋಷಿಸಿದ್ದಾರೆ. ‘ರಾಷ್ಟ್ರೀಯ ಪೊಲೀಸ್ ಸಂಸ್ಮರಣಾ ದಿನ’ದ ಅಂಗವಾಗಿ ಹೈದರಾಬಾದ್‌ನ ಗೋಶಾಲಿ ಮಹಲ್ ಪೊಲೀಸ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪೆರೇಡ್‌ನಲ್ಲಿ ಭಾಗವಹಿಸಿ, ಗೌರವ ಸಲ್ಯೂಟ್ ಸ್ವೀಕರಿಸಿದ ಬಳಿಕ ಅವರು ಈ ನಿರ್ಧಾರಗಳನ್ನು ಪ್ರಕಟಿಸಿದರು. ಇದರ ಜೊತೆಗೆ 2028ರ ವೇಳೆಗೆ ಪೊಲೀಸ್ ಇಲಾಖೆಯಲ್ಲಿರುವ ಎಲ್ಲಾ ಖಾಲಿ ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಸಿಎಂ ರೇವಂತ್ ರೆಡ್ಡಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಎಸ್‌ಪಿ ಮತ್ತು ಐಪಿಎಸ್ ಅಧಿಕಾರಿಗಳಿಗೆ ನೀಡಲಾಗುವ ಪರಿಹಾರ ಧನವನ್ನು 1 ಕೋಟಿಯಿಂದ 2 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಡಿಎಸ್‌ಪಿ ಮತ್ತು ಅಡಿಷನಲ್ ಎಸ್‌ಪಿ ಅಧಿಕಾರಿಗಳಿಗೆ 1.50 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ. ಇನ್ಸ್‌ಪೆಕ್ಟರ್‌ಗಳಿಗೆ 50 ಲಕ್ಷ ರೂ.ದಿಂದ 1.25 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಸಬ್-ಇನ್ಸ್‌ಪೆಕ್ಟರ್‌ಗಳಿಗೆ 45 ಲಕ್ಷ ರೂ.ದಿಂದ 1.25 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಹೆಡ್ ಕಾನ್‌ಸ್ಟೇಬಲ್ ಮತ್ತು ಎಎಸ್‌ಐಗೆ 45 ಲಕ್ಷ ರೂ.ದಿಂದ 1 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಹೋಮ್ ಗಾರ್ಡ್‌ಗಳಿಗೆ ಪರಿಹಾರ ಧನವನ್ನು 5 ಲಕ್ಷ ರೂ.ದಿಂದ 10 ಲಕ್ಷ ರೂ.ಗೆ ಹೆಚ್ಚಿಸಲಾಗಿದ್ದು, ಈ ಕುರಿತು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡದಲ್ಲಿ ಮದರಸಾಗಳಿಗೆ ಶುಕ್ರವಾರದ ಬದಲಾಗಿ ಭಾನುವಾರವೇ ವಾರದ ರಜೆ; ಧಾಮಿ ಸರ್ಕಾರ ನಿರ್ಧಾರ
ಕಾನೂನು ಸುವ್ಯವಸ್ಥೆಗೆ ಮೊದಲ ಆದ್ಯತೆ:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಭದ್ರತೆಯನ್ನು ಕಾಯ್ದುಕೊಳ್ಳುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಇತರರ ಜೀವ ರಕ್ಷಣೆಗಾಗಿ ತಮ್ಮ ಜೀವವನ್ನೇ ಲೆಕ್ಕಿಸದೆ ಹೋರಾಡಿದ ಧೀರ ಪೊಲೀಸರ ತ್ಯಾಗವನ್ನು ದೇಶ ಸದಾ ಸ್ಮರಿಸುತ್ತದೆ ಎಂದು ಸಿಎಂ ಹೇಳಿದ್ದಾರೆ.
2028ರ ವೇಳೆಗೆ ಸಂಪೂರ್ಣ ಹುದ್ದೆ ಭರ್ತಿ:
ಪೊಲೀಸ್ ಇಲಾಖೆಯಲ್ಲಿ ಈಗಾಗಲೇ 5,000 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. 2028ರ ವೇಳೆಗೆ ಇಲಾಖೆಯ ಎಲ್ಲಾ ಖಾಲಿ ಹುದ್ದೆಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ. ತೆಲಂಗಾಣ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಬಾರಿಗೆ 112 ಡಿಎಸ್‌ಪಿ ಹುದ್ದೆಗಳನ್ನು ಭರ್ತಿ ಮಾಡುತ್ತಿರುವುದು ಐತಿಹಾಸಿಕ ಸಾಧನೆ ಎಂದು ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ‘2029ರ ಅಂತ್ಯದೊಳಗೆ ಪಂಜಾಬ್ ಡ್ರಗ್ಸ್ ಮುಕ್ತವಾಗಲಿದೆ’; ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಜ್ಞೆ
ಮಹಿಳೆಯರು ಮತ್ತು ಮಕ್ಕಳ ರಕ್ಷಣೆ:
ಮಹಿಳೆಯರು ಹಾಗೂ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳನ್ನು ಪೊಲೀಸರು ಅತ್ಯಂತ ಸೂಕ್ಷ್ಮತೆಯಿಂದ ಹಾಗೂ ಶೀಘ್ರವಾಗಿ ನಿರ್ವಹಿಸಬೇಕು. ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಯಾವುದೇ ವಿಳಂಬವಾಗಬಾರದು ಎಂದು ಸೂಚಿಸಿದ ಸಿಎಂ, ಮಹಿಳೆಯರ ಸುರಕ್ಷತೆ ಕೇವಲ ಇಲಾಖೆಯ ಕರ್ತವ್ಯವಷ್ಟೇ ಅಲ್ಲ, ಸಮಾಜದ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ