
ಹೈದರಾಬಾದ್, ಅಕ್ಟೋಬರ್ 7: ತೆಲಂಗಾಣದ ಸಿದ್ಧಿಪೇಟೆ ಜಿಲ್ಲೆಯಲ್ಲಿರುವ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಅವರ ಫಾರ್ಮ್‌ಹೌಸ್ ಬಳಿ ‘ಕಾಣೆಯಾಗಿರುವ’ 45 ಎಕರೆಗೂ ಹೆಚ್ಚು ಜಮೀನಿನ ದಾಖಲೆಗಳನ್ನು ಸಲ್ಲಿಸುವಂತೆ ಅವರಿಗೆ ನೋಟಿಸ್ ನೀಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಕಳೆದ ತಿಂಗಳು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಆದೇಶದಂತೆ ನಡೆಸಿದ ಜಮೀನು ಸರ್ವೆಯಲ್ಲಿ, 45 ಎಕರೆ ಜಮೀನು “ಕಾಣೆಯಾಗಿರುವುದು” ಕಂದಾಯ ಇಲಾಖೆ ಅಧಿಕಾರಿಗಳ ತನಿಖೆಯಲ್ಲಿ ತಿಳಿದುಬಂದಿದೆ. ಮಂಗಳವಾರ ಮುಖ್ಯಮಂತ್ರಿಗಳು ಈ ಭೂ ವಿವಾದಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಪರಾಮರ್ಶೆ ಸಭೆ ನಡೆಸಿದರು.
ಈ ಸಭೆಯ ವೇಳೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಸಿದ್ಧಿಪೇಟೆ ಜಿಲ್ಲೆಯ ಎರ್ರಾವೆಲ್ಲಿ ಹಾಗೂ ಸಿವಾರೂ ವೆಂಕಟಾಪುರ ಗ್ರಾಮಗಳಲ್ಲಿ ಸರ್ವೆ ನಡೆಸಲಾಗಿದೆ. ಮಾಜಿ ಸಿಎಂ ಅವರ ಫಾರ್ಮ್‌ಹೌಸ್ ಎರ್ರಾವೆಲ್ಲಿ ಗ್ರಾಮದಲ್ಲಿದೆ. ಅಧಿಕಾರಿಗಳು ಶೀಘ್ರದಲ್ಲೇ ಕೆಸಿಆರ್ ಹಾಗೂ ಅವರ ಕುಟುಂಬದ ಸದಸ್ಯರಿಗೆ ನೋಟಿಸ್ ಜಾರಿ ಮಾಡಲಿದ್ದಾರೆ. ತನಿಖೆಯ ನಂತರ ಈ ಜಮೀನನ್ನು ಅರ್ಹ ಸ್ಥಳೀಯ ರೈತರಿಗೆ ಹಂಚಿಕೆ ಮಾಡಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮಗಳ ಹೇಳಿಕೆಗೆ ತಾಯಿಯ ತಲೆದಂಡ; ಕೊಂಡ ಸುರೇಖಾರನ್ನು ಸಂಪುಟದಿಂದ ವಜಾಗೊಳಿಸಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ
ಇದರೊಂದಿಗೆ, ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದ ಸಮಯದಲ್ಲಿ ಪ್ರಾಣತ್ಯಾಗ ಮಾಡಿದ ಅಮರವೀರರ ಕುಟುಂಬಗಳಿಗಾಗಿ ಈ ಭೂಮಿಯಲ್ಲಿ ‘ಆವಾಸಸ್ಥಾನ ಕಾಲೋನಿ’ ನಿರ್ಮಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸೆಪ್ಟೆಂಬರ್ 16ರಂದು ಬಿಆರ್‌ಎಸ್ ನಾಯಕರು ಸುಮಾರು 1 ಲಕ್ಷ ಕೋಟಿ ರೂ. ಮೌಲ್ಯದ ಜಮೀನನ್ನು ಲೂಟಿ ಮಾಡಿದೆ ಎಂದು ರೇವಂತ್ ರೆಡ್ಡಿ ಆರೋಪಿಸಿದ್ದರು ಹಾಗೂ ಈ ಅಕ್ರಮಗಳ ಕುರಿತು ಸಮಗ್ರ ತನಿಖೆಗೆ ಆದೇಶಿಸಿದ್ದರು.
ಕೆಸಿಆರ್ ಮತ್ತು ಅವರ ಕುಟುಂಬವು ತೆಲಂಗಾಣ ಭೂ ಸುಧಾರಣೆ (ಕೃಷಿ ಹಿಡುವಳಿಗಳ ಮೇಲಿನ ಗರಿಷ್ಠ ಮಿತಿ) ಕಾಯ್ದೆಯಡಿ ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಜಮೀನನ್ನು ಹೊಂದಿದೆ ಎಂದು ಕಳೆದ ತಿಂಗಳು ರಾಜ್ಯ ವಿಧಾನಸಭೆಯಲ್ಲಿ ಆರೋಪಿಸಿದ್ದ ರೇವಂತ್ ರೆಡ್ಡಿ, ಈ ಕುರಿತು ತನಿಖೆಗೆ ಸಮಿತಿಯನ್ನು ರಚಿಸಿದ್ದರು. ಅಲ್ಲದೆ ಕೆಸಿಆರ್ ಮತ್ತು ಅವರ ಕುಟುಂಬದವರು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪದ ಕುರಿತು ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದರು.
ಎರ್ರಾವೆಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ “ಕಾಣೆಯಾದ” 45 ಎಕರೆ ಜಮೀನನ್ನು ಪತ್ತೆ ಹಚ್ಚುವಂತೆ ರೇವಂತ್ ರೆಡ್ಡಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಸರ್ವೆ ಸಂಖ್ಯೆ 325ರ ಅಡಿಯಲ್ಲಿ ಗುರುತಿಸಲಾದ ಸರ್ಕಾರಿ ಜಮೀನನ್ನು ಅರ್ಹ ಸ್ಥಳೀಯ ರೈತರಿಗೆ ಹಂಚಲು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.
ವಿಧಾನಸಭೆಯಲ್ಲಿ ಸರ್ಕಾರದ ವಾಗ್ದಾಳಿ:
ವಿಧಾನಸಭೆಯಲ್ಲಿ ಮಾತನಾಡಿದ್ದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಹಿಂದಿನ ಬಿಆರ್‌ಎಸ್ ಸರ್ಕಾರವು ಜಮೀನು ಹಂಚಿಕೆ ಹಾಗೂ ಕಂದಾಯ ಪ್ರಕ್ರಿಯೆಯಲ್ಲಿ ಬೃಹತ್ ಅಕ್ರಮ ಮತ್ತು ಭ್ರಷ್ಟಾಚಾರ ಎಸಗಿದೆ ಎಂದು ನೇರ ಆರೋಪ ಮಾಡಿದ್ದರು. “ಬಿಆರ್‌ಎಸ್ ನಾಯಕರು, ಅವರ ಬೆಂಬಲಿಗರು ಮತ್ತು ಬಂಧುಗಳು ಸುಮಾರು 1 ಲಕ್ಷ ಕೋಟಿ ರೂ. ಮೌಲ್ಯದ ಜಮೀನನ್ನು ಕಬಳಿಸಿದ್ದಾರೆ. ಈ ಸತ್ಯ ಹೊರಬರಬೇಕು, ತನಿಖೆಯಾಗಬೇಕು ಹಾಗೂ ಬಡವರಿಗೆ ನ್ಯಾಯ ಸಿಗಬೇಕು” ಎಂದು ಅವರು ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ