ಮಗಳ ಹೇಳಿಕೆಗೆ ತಾಯಿಯ ತಲೆದಂಡ; ಕೊಂಡ ಸುರೇಖಾರನ್ನು ಸಂಪುಟದಿಂದ ವಜಾಗೊಳಿಸಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ
ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಇಂದು ಸಚಿವೆ ಕೊಂಡ ಸುರೇಖಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ. ಸಚಿವರ ಮಂಡಳಿಯಿಂದ ಸುರೇಖಾ ಅವರನ್ನು ವಜಾಗೊಳಿಸುವಂತೆ ಕೋರಿ ಈಗಾಗಲೇ ರಾಜ್ಯಪಾಲರಿಗೆ ಶಿಫಾರಸು ರವಾನಿಸಲಾಗಿದೆ. ತಮ್ಮ ಮಗಳು ತೆಲಂಗಾಣದ ಸಿಎಂ ವಿರುದ್ಧ ನೀಡಿದ್ದ ಹೇಳಿಕೆ ಇದೀಗ ಸುರೇಖಾ ಅವರ ಕುರ್ಚಿಗೇ ಕುತ್ತು ತಂದಿದೆ.

ಹೈದರಾಬಾದ್, ಸೆಪ್ಟೆಂಬರ್ 3: ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಸಚಿವೆ ಕೊಂಡ ಸುರೇಖಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಲು ತೀರ್ಮಾನಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಕಾರ್ಯಾಲಯ ಪ್ರಕಟಣೆ ಹೊರಡಿಸಿದ್ದು, ಸಂಪುಟದಿಂದ ವಜಾಗೊಳಿಸುವಂತೆ ಕೋರಿ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರಿಗೆ ಶಿಫಾರಸು ಕಳುಹಿಸಲಾಗಿದೆ. ಪಾರ್ಕಲ್ ಅಸೆಂಬ್ಲಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಕೊಂಡ ಸುರೇಖಾ ಅವರ ಮಗಳು ಕೊಂಡ ಸುಶ್ಮಿತಾ ಪಟೇಲ್, ಸಿಎಂ ರೇವಂತ್ ರೆಡ್ಡಿ ವಿರುದ್ಧ ನೀಡಿರುವ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಅರಣ್ಯ ಮತ್ತು ಧಾರ್ಮಿಕ ದತ್ತಿ ಸಚಿವೆಯಾಗಿದ್ದ ಕೊಂಡ ಸುರೇಖಾ ಅವರ ಮಗಳು, ಸಿಎಂ ರೇವಂತ್ ರೆಡ್ಡಿ ಹಾಗೂ ಇತರ ಪಕ್ಷದ ನಾಯಕರ ವಿರುದ್ಧ ನಡೆಸಿದ್ದ ವಾಗ್ದಾಳಿ ಆಡಳಿತಾರೂಢ ಕಾಂಗ್ರೆಸ್ ಶಾಸಕರು ಮತ್ತು ನಾಯಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಮೊದಲು ಕಾಂಗ್ರೆಸ್ ಶಿಸ್ತು ಸಮಿತಿಯೂ ಸಹ ಸುರೇಖಾ ಅವರನ್ನು ಸಂಪುಟದಿಂದ ತೆಗೆದುಹಾಕುವಂತೆ ಶಿಫಾರಸು ಮಾಡಿತ್ತು.
Telangana CM Revanth Reddy has decided to drop Konda Surekha, Minister, from the Council of Ministers with immediate effect. A recommendation to this effect has been sent to the Governor already. Chief Minister has also decided to rescind the appointment of Dr. G. Chinna Reddy as… pic.twitter.com/0nmGajo1qX
— ANI (@ANI) September 3, 2026
ವಿವಾದಕ್ಕೆ ಕಾರಣವೇನು?:
ಪಾರ್ಕಲ್ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯವಾಗಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಕೊಂಡ ಸುರೇಖಾ ಅವರ ಮಗಳು ಸುಶ್ಮಿತಾ ಪಟೇಲ್ 2028ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಹಾಲಿ ಶಾಸಕ ರೇವೂರಿ ಪ್ರಕಾಶ್ ರೆಡ್ಡಿ ಅವರನ್ನು ಸಿಎಂ ರೇವಂತ್ ರೆಡ್ಡಿ ಬೆಂಬಲಿಸುತ್ತಿರುವುದನ್ನು ಪ್ರಶ್ನಿಸಿದ್ದರು. “ನನ್ನ ಟಿಕೆಟ್ ತೀರ್ಮಾನಿಸಲು ರೇವಂತ್ ರೆಡ್ಡಿ ಯಾರು?” ಎಂದು ಸುಶ್ಮಿತಾ ಬಹಿರಂಗವಾಗಿ ಪ್ರಶ್ನಿಸಿದ್ದರು. ಹಾಗೇ, ಹಾಲಿ ಶಾಸಕರಿಗೆ ರಾಜೀನಾಮೆ ನೀಡಿ ತಮ್ಮ ವಿರುದ್ಧ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸವಾಲು ಹಾಕಿದ್ದ ಸುಶ್ಮಿತಾ ಪಟೇಲ್, ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಚಾಲೆಂಜ್ ಮಾಡಿದ್ದರು. ಇದು ತೆಲಂಗಾಣದ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.
ನನ್ನ ಮಗಳ ಹೇಳಿಕೆಗೆ ನಾನು ಹೊಣೆಯಲ್ಲ ಎಂದ ಸುರೇಖಾ:
“ಮಗಳು ಸುಶ್ಮಿತಾ ನೀಡಿರುವ ಹೇಳಿಕೆಗೆ ತಾಯಿಯನ್ನು ಹೊಣೆಗಾರರನ್ನಾಗಿ ಮಾಡಬಾರದು, ಮಗಳು ಸ್ವತಂತ್ರ ವ್ಯಕ್ತಿ. ಆಕೆಗೆ ಏನು ಮಾತನಾಡಬೇಕು ಎಂಬುದು ತಿಳಿದಿದೆ” ಎಂದು ಸುರೇಖಾ ವಾದಿಸಿದ್ದರು. ಜೊತೆಗೆ, ತಾವು ಮತ್ತು ತಮ್ಮ ಪತಿ ತೆಲಂಗಾಣದ ಪ್ರಬಲ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದು, ಪಕ್ಷಕ್ಕಾಗಿ ಕಷ್ಟಪಟ್ಟು ದುಡಿದಿರುವುದಾಗಿ ಹೈಕಮಾಂಡ್‌ಗೆ ತಿಳಿಸಿದ್ದರು.
#WATCH | Hyderabad, Telangana: After being dropped from State Cabinet, Konda Surekha says, “I am not at all at fault. They issued me a show-cause, but I had not levelled any allegations against Revanth Reddy or the party. In a meeting, my daughter expressed her frustration. She… pic.twitter.com/590jxE9yzS
— ANI (@ANI) September 3, 2026
ಆದರೂ, ಸಚಿವೆ ಕೊಂಡ ಸುರೇಖಾ ಅವರ ಮಗಳ ಹೇಳಿಕೆ ತೆಲಂಗಾಣ ಕಾಂಗ್ರೆಸ್‌ನಲ್ಲಿ ಭಾರಿ ಅಸಮಾಧಾನ ಉಂಟುಮಾಡಿತ್ತು. ಮಂಗಳವಾರ ದೆಹಲಿಗೆ ತೆರಳಿದ್ದ ಸಿಎಂ ರೇವಂತ್ ರೆಡ್ಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿ ಸುರೇಖಾ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಹೈಕಮಾಂಡ್ ಮಟ್ಟದಲ್ಲಿ ನಡೆದ ಸುದೀರ್ಘ ಚರ್ಚೆ ಮತ್ತು ಶಿಸ್ತು ಸಮಿತಿಯ ವರದಿ ಆಧಾರದ ಮೇಲೆ ಅಂತಿಮವಾಗಿ ಅವರನ್ನು ತೆಲಂಗಾಣದ ಸಚಿವ ಸಂಪುಟದಿಂದ ವಜಾಗೊಳಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:54 pm, Thu, 3 September 26




