ಯುಗಾದಿಯಂದು ಕೇಂದ್ರ ಸರ್ಕಾರ ‘Temple 360’ ಎಂಬ ಒಂದು ಪೋರ್ಟಲ್ನ್ನು (ವೆಬ್ಸೈಟ್) ಹೊರತಂದಿದೆ. ಅಂದು ಕೇಂದ್ರ ಸಂಸ್ಕೃತಿ, ವಿದೇಶಾಂಗ ಇಲಾಖೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಈ ಪೋರ್ಟಲ್ನ್ನು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ (IGNCA)ದಲ್ಲಿ ಉದ್ಘಾಟಿಸಿದ್ದಾರೆ. ಈ ಬಾರಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನಿಮಿತ್ತ ಕೇಂದ್ರ ಸರ್ಕಾರ ಆಜಾದಿ ಕಾ ಅಮೃತಮಹೋತ್ಸವ ಎಂಬ ವಿಶೇಷ ಅಭಿಯಾನ ಹಮ್ಮಿಕೊಂಡಿದೆ. ಇದರಡಿಯಲ್ಲಿ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಹಾಗೇ, ಈ ಟೆಂಪಲ್ 360 ಕೂಡ ಹೊರಬಂದಿದೆ. ಇದರ ಮೂಲಕ ದೇಶಾದ್ಯಂತ ಇರುವ ಪವಿತ್ರ ಯಾತ್ರಾಸ್ಥಳಗಳು, ಪ್ರಮುಖ ದೇವಾಲಯಗಳನ್ನು ಭಕ್ತರು ತಾವಿದ್ದ ಸ್ಥಳದಿಂದಲೇ ಆನ್ಲೈನ್ ಮೂಲಕ ವೀಕ್ಷಿಸಬಹುದು. ಅಂದರೆ ದೇಗುಲಗಳಲ್ಲಿರುವ ದೇವರ ದರ್ಶನವನ್ನು ಈ ಪೋರ್ಟಲ್ನಲ್ಲಿ ಲೈವ್ ಆಗಿ ಪಡೆಯಬಹುದು. ಇದರಲ್ಲಿ 12 ಜ್ಯೋತಿರ್ಲಿಂಗ ಸೇರಿ ಇನ್ನೂ ಹಲವು ಪ್ರಮುಖ ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆಯಬಹುದಾಗಿದೆ.
ಸದ್ಯ ಟೆಂಪಲ್ 360 ಪೋರ್ಟಲ್ನಲ್ಲಿ ಗುಜರಾತ್ನ ಸೋಮನಾಥ ದೇಗುಲ, ಕಾಶಿ ವಿಶ್ವನಾಥ ದೇವಾಲಯ, ಮಹಾರಾಷ್ಟ್ರದ ತೃಯಂಬೇಕಶ್ವರ ಮತ್ತು ಘೃಷ್ಣೇಶ್ವರ ಮಂದಿರಗಳ ದೇವರ ದರ್ಶನ ಪಡೆಯಬಹುದಾಗಿದೆ. ಪೂಜೆ, ಮಹಾಮಂಗಳಾರತಿ ಸೇರಿ ಇನ್ನಿತರ ಸೇವೆಗಳನ್ನೆಲ್ಲ ಲೈವ್ನಲ್ಲಿಯೇ ಭಕ್ತರು ನೋಡಬಹುದಾಗಿದೆ. ಶೀಘ್ರದಲ್ಲಿಯೇ 12 ಜ್ಯೋತಿರ್ಲಿಂಗ ದರ್ಶನ ಮತ್ತು ಗುಜರಾತ್ನ ದ್ವಾರಕಾ, ಉತ್ತರಾಖಂಡ್ನ ಬದರಿನಾಥ, ಓಡಿಶಾದ ಪುರಿ ದೇಗುಲ ಮತ್ತು ತಮಿಳುನಾಡಿನ ರಾಮೇಶ್ವರಂ ದೇವಸ್ಥಾನಗಳ ಧಾರ್ಮಿಕ ಆಚರಣೆಗಳ ಲೈವ್ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.
ಈ ವೆಬ್ಸೈಟ್ ಮೂಲಕ ಜನರು ಅಧ್ಯಾತ್ಮ ಪ್ರವಾಸ ಕೈಗೊಳ್ಳಬಹುದು. ಅಂದರೆ ದೇಶದ ಪ್ರಮುಖ ದೇಗುಲಗಳು, ಯಾತ್ರಾ ಸ್ಥಳಗಳ ದರ್ಶನವನ್ನು ಪ್ರಸ್ತುತ ಪೋರ್ಟಲ್ ಮೂಲಕ ಪಡೆಯಬಹುದು. ಅಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು, ಪೂಜೆ, ಸೇವೆಯನ್ನು ಲೈವ್ ಆಗಿ ವೀಕ್ಷಿಸಬಹುದು. ಅಷ್ಟೇ ಅಲ್ಲ, ತಾವಿದ್ದಾ ಜಾಗದಿಂದಲೇ ಸೇವೆಯನ್ನೂ ಮಾಡಬಹುದು. ಇದಕ್ಕಾಗಿ ವೆಬ್ಸೈಟ್ನಲ್ಲಿ ಇನ್ನಷ್ಟು ವೈಶಿಷ್ಟ್ಯಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಲಿಗಢ, ಬದೌನ್ ಮತ್ತು ಸುಲ್ತಾನ್‌ಪುರ ಸೇರಿದಂತೆ ಉತ್ತರ ಪ್ರದೇಶದ 12 ಜಿಲ್ಲೆಗಳ ಹೆಸರು ಬದಲಾಯಿಸಲಿದೆ ಯೋಗಿ ಸರ್ಕಾರ