Terrorist Encounter: ಜಮ್ಮು ಕಾಶ್ಮೀರದಲ್ಲಿ ಜೈಷ್ ಸಂಘಟನೆಯ ಮೂವರು ಉಗ್ರರ ಎನ್​ಕೌಂಟರ್

| Updated By: ಸುಷ್ಮಾ ಚಕ್ರೆ

Updated on: Sep 28, 2022 | 8:24 AM

ಜಂಟಿ ಶೋಧ ತಂಡವು ಉಗ್ರರಿರುವ ಸ್ಥಳವನ್ನು ಸಮೀಪಿಸುತ್ತಿದ್ದಂತೆ ಅಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಮನಬಂದಂತೆ ಗುಂಡು ಹಾರಿಸಿದರು. ಇದು ಎನ್‌ಕೌಂಟರ್‌ಗೆ ಕಾರಣವಾಯಿತು.

Terrorist Encounter: ಜಮ್ಮು ಕಾಶ್ಮೀರದಲ್ಲಿ ಜೈಷ್ ಸಂಘಟನೆಯ ಮೂವರು ಉಗ್ರರ ಎನ್​ಕೌಂಟರ್
ಉಗ್ರರ ಎನ್​ಕೌಂಟರ್ ಕಾರ್ಯಾಚರಣೆ
Follow us on

ಕುಲ್ಗಾಮ್: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಅವಳಿ ಎನ್​ಕೌಂಟರ್ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಪಾಕಿಸ್ತಾನಿ ಉಗ್ರರು ಸೇರಿದಂತೆ ಮೂವರು ಜೈಶ್-ಎ-ಮೊಹಮ್ಮದ್ (JeM) ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಕುಲ್ಗಾಮ್‌ನ (Kulgam) ಅಹ್ವಾಟೂ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಜಮ್ಮು ಕಾಶ್ಮೀರ ಪೊಲೀಸರಿಗೆ ಗುಪ್ತಚರ ಮಾಹಿತಿ ಸಿಕ್ಕಿತ್ತು. ಈ ಪ್ರದೇಶದಲ್ಲಿ ಪೊಲೀಸರು, ಸೇನಾ ಪಡೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಜಂಟಿಯಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಜಂಟಿ ಶೋಧ ತಂಡವು ಉಗ್ರರಿರುವ ಸ್ಥಳವನ್ನು ಸಮೀಪಿಸುತ್ತಿದ್ದಂತೆ ಅಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಮನಬಂದಂತೆ ಗುಂಡು ಹಾರಿಸಿದರು. ಇದು ಎನ್‌ಕೌಂಟರ್‌ಗೆ ಕಾರಣವಾಯಿತು. ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಸ್ಥಳೀಯ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಅವರನ್ನು ಬಟ್‌ಪೋರಾದ ಮೊಹಮ್ಮದ್ ಶಫಿ ಘನಿ ಮತ್ತು ಟಕಿಯಾ ಗೋಪಾಲ್‌ಪೋರಾದ ಮೊಹಮ್ಮದ್ ಆಸಿಫ್ ವಾನಿ ಅಲಿಯಾಸ್ ಯವರ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಕುಲ್ಗಾಂನಲ್ಲಿ ಜೈಷ್-ಇ-ಮೊಹಮ್ಮದ್ ಸಂಘಟನೆ ಜೊತೆ ನಂಟು ಹೊಂದಿದ್ದ ಪಾಕಿಸ್ತಾನಿ ಉಗ್ರನ ಎನ್​ಕೌಂಟರ್

ಪೊಲೀಸ್ ದಾಖಲೆಗಳ ಪ್ರಕಾರ, ಹತ್ಯೆಗೀಡಾದ ಇಬ್ಬರೂ ಉಗ್ರರು ಎಂದು ಖಚಿತಪಡಿಸಲಾಗಿದೆ. ಅವರು ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ)ನೊಂದಿಗೆ ಸಂಪರ್ಕ ಹೊಂದಿದ್ದರು. ಹತ್ಯೆಗೀಡಾದ ಇಬ್ಬರೂ ಭಯೋತ್ಪಾದಕರು ಪೊಲೀಸ್ ಮತ್ತು ಭದ್ರತಾ ಪಡೆಗಳ ಮೇಲಿನ ದಾಳಿ ಮತ್ತು ನಾಗರಿಕ ದೌರ್ಜನ್ಯ ಸೇರಿದಂತೆ ಹಲವಾರು ಭಯೋತ್ಪಾದಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಜಂಟಿ ಶೋಧ ತಂಡವು ಶಂಕಿತ ಸ್ಥಳವನ್ನು ಸಮೀಪಿಸುತ್ತಿದ್ದಂತೆ ಅಡಗಿಕೊಂಡಿದ್ದ ಭಯೋತ್ಪಾದಕರಲ್ಲಿ ಒಬ್ಬ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಜನರ ಮೇಲೆ ಮತ್ತು ಸೇನಾ ಪಡೆಯ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದ. ಆಗ ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತಾದರೂ ಓರ್ವ ಸೇನಾ ಯೋಧ ಮತ್ತು ಇಬ್ಬರು ನಾಗರಿಕರಿಗೆ ಗುಂಡೇಟಿನಿಂದ ಗಾಯಗಳಾಗಿವೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ನಂತರದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಜೆಇಎಂ ಜೊತೆ ಸಂಬಂಧ ಹೊಂದಿರುವ ಅಬು ಹುರಾಹ್ ಎಂದು ಗುರುತಿಸಲಾದ ಪಾಕಿಸ್ತಾನಿ ಭಯೋತ್ಪಾದಕನನ್ನು ಕೊಲ್ಲಲಾಗಿದೆ.

ಇದನ್ನೂ ಓದಿ: Jaish-e-Mohammed terrorists: ಇಬ್ಬರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರ ಎನ್‌ಕೌಂಟರ್‌ ಮಾಡಿದ ಭದ್ರತಾ ಪಡೆ

ಎನ್‌ಕೌಂಟರ್‌ ನಡೆದ ಎರಡೂ ಸ್ಥಳಗಳಿಂದ ಎಕೆ -56, 2 ಎಕೆ -47, ಪಿಸ್ತೂಲ್, ಗ್ರೆನೇಡ್, 4 ಮ್ಯಾಗಜೀನ್‌ಗಳು ಮತ್ತು ಪಿಸ್ತೂಲ್ ಮ್ಯಾಗಜೀನ್ ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಎಲ್ಲಾ ವಸ್ತುಗಳನ್ನು ಹೆಚ್ಚಿನ ತನಿಖೆಗಾಗಿ ಪ್ರಕರಣದ ದಾಖಲೆಗಳಿಗೆ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಆಯಾ ಪೊಲೀಸ್ ಠಾಣೆಗಳಲ್ಲಿ ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ತನಿಖೆಯನ್ನು ಪ್ರಾರಂಭಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ