Rajasthan Politics: ರಾಜಸ್ಥಾನದ ಬಂಡಾಯ ಶಾಸಕರನ್ನು ಭೇಟಿಯಾದ ಸಿಎಂ ಅಶೋಕ್ ಗೆಹ್ಲೋಟ್; ಸೋನಿಯಾ ಗಾಂಧಿಯಲ್ಲಿ ನಂಬಿಕೆಯಿಡಿ ಎಂದು ಸೂಚನೆ

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಂಗಳವಾರ ತಡರಾತ್ರಿ ತಮ್ಮ ನಿವಾಸದಲ್ಲಿ ರಾಜಸ್ಥಾನದ ಸಚಿವರು ಸೇರಿದಂತೆ 12ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿದ್ದಾರೆ.

Rajasthan Politics: ರಾಜಸ್ಥಾನದ ಬಂಡಾಯ ಶಾಸಕರನ್ನು ಭೇಟಿಯಾದ ಸಿಎಂ ಅಶೋಕ್ ಗೆಹ್ಲೋಟ್; ಸೋನಿಯಾ ಗಾಂಧಿಯಲ್ಲಿ ನಂಬಿಕೆಯಿಡಿ ಎಂದು ಸೂಚನೆ
ಬಂಡಾಯ ಶಾಸಕರ ಜೊತೆ ಅಶೋಕ್ ಗೆಹ್ಲೋಟ್
TV9kannada Web Team

| Edited By: Sushma Chakre

Sep 28, 2022 | 10:09 AM

ಜೈಪುರ: ರಾಜಸ್ಥಾನದಲ್ಲಿ ಎದುರಾಗಿರುವ ರಾಜಕೀಯ ಬಿಕ್ಕಟ್ಟಿನಿಂದ ಕಾಂಗ್ರೆಸ್​ಗೆ ಸಂಕಷ್ಟ ಎದುರಾಗಿದೆ. ಸಚಿನ್ ಪೈಲಟ್ (Sachin Pilot)  ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದಂತೆ ಅಶೋಕ್ ಗೆಹ್ಲೋಟ್ (Ashok Gehlot) ಬಣದ ಸುಮಾರು 90 ಶಾಸಕರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ, ಕಾಂಗ್ರೆಸ್ ಹೈಕಮಾಂಡ್ ಬಂಡಾಯ ಶಾಸಕರ ಮನವೊಲಿಕೆಗೆ ಪ್ರಯತ್ನಿಸುತ್ತಿದೆ. ಈ ನಡುವೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಂಗಳವಾರ ತಡರಾತ್ರಿ ತಮ್ಮ ನಿವಾಸದಲ್ಲಿ ರಾಜಸ್ಥಾನದ ಸಚಿವರು ಸೇರಿದಂತೆ 12ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ. ನೀವೆಲ್ಲರೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯಲ್ಲಿ ನಂಬಿಕೆ ಇಡಬೇಕು ಎಂದು ಗೆಹ್ಲೋಟ್ ಹೇಳಿದ್ದಾರೆ ಎನ್ನಲಾಗಿದೆ.

ರಾಜಸ್ಥಾನದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಸೋನಿಯಾ ಗಾಂಧಿಯವರಿಗೆ ಅಧಿಕಾರ ನೀಡುವ ನಿರ್ಣಯವನ್ನು ಅಂಗೀಕರಿಸುವ ಮೂಲಕ ಅಶೋಕ್ ಗೆಹ್ಲೋಟ್‌ ಅವರಿಂದ ಸಚಿನ್ ಪೈಲಟ್‌ಗೆ ಅಧಿಕಾರ ಹಸ್ತಾಂತರಿಸುವುದನ್ನು ಔಪಚಾರಿಕಗೊಳಿಸಲು ನಡೆಯಬೇಕಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯು 2 ದಿನಗಳ ಬಳಿಕ ನಡೆಯಿತು.

ಇದನ್ನೂ ಓದಿ: Rajasthan Crisis: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು; ಅಶೋಕ್ ಗೆಹ್ಲೋಟ್ ಬಣದ ಶಾಸಕರು ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟ 3 ಬೇಡಿಕೆಗಳೇನು?

ಅಶೋಕ್ ಗೆಹ್ಲೋಟ್ ಬಣದ 90ಕ್ಕೂ ಹೆಚ್ಚು ಶಾಸಕರು ಸಚಿವ ಶಾಂತಿ ಧರಿವಾಲ್ ಅವರ ನಿವಾಸದಲ್ಲಿ ಜಮಾಯಿಸಿದ್ದರು. ಅವರು ಅಶೋಕ್ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಲು ಬಯಸಿದ್ದರು. ಅಥವಾ ಅಶೋಕ್ ಗೆಹ್ಲೋಟ್ ಬಣದವರೇ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಒತ್ತಾಯಿಸಿದ್ದರು. ಈ ಸಭೆಯ ಬಳಿಕ ಸ್ಪೀಕರ್ ಸಿಪಿ ಜೋಶಿ ನಿವಾಸಕ್ಕೆ ತೆರಳಿ ಅವರೆಲ್ಲರೂ ರಾಜೀನಾಮೆ ಪತ್ರ ನೀಡಿದ್ದರು.

ಗೆಹ್ಲೋಟ್ ಬಣದ ಬೇಡಿಕೆಗಳೇನು?:

ಅಶೋಕ್ ಗೆಹ್ಲೋಟ್ ಕಾಂಗ್ರೆಸ್​ ನಿಷ್ಠಾವಂತರಾಗಿದ್ದು, ಮುಂದಿನ ರಾಜಸ್ಥಾನ ಮುಖ್ಯಮಂತ್ರಿಯ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಮುಗಿಯುವವರೆಗೆ ತೆಗೆದುಕೊಳ್ಳಬಾರದು. ಮುಂದಿನ ಚುನಾವಣೆಯ ನಂತರವೇ ಆ ಬಗ್ಗೆ ನಿರ್ಧರಿಸಬೇಕು. ಪ್ರತ್ಯೇಕವಾಗಿ ಬಂಡಾಯ ಶಾಸಕರನ್ನು ಭೇಟಿಯಾಗಿ ಅವರ ಮನವೊಲಿಸಲು ಪ್ರಯತ್ನಿಸಬೇಕೆಂದು ಸೋನಿಯಾ ಗಾಂಧಿ ಅಜಯ್ ಮಾಕನ್, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೂಚಿಸಿದ್ದರು. ಹೀಗಾಗಿ, ಕಾಂಗ್ರೆಸ್ ವೀಕ್ಷಕರು ಅಶೋಕ್ ಗೆಹ್ಲೋಟ್ ಬಣದವರನ್ನು ಒಬ್ಬೊಬ್ಬರನ್ನಾಗಿ ಪ್ರತ್ಯೇಕವಾಗಿ ಭೇಟಿಯಾಗಲು ಮುಂದಾಗಿದ್ದರು. ಆದರೆ, ಅವರು ಒಬ್ಬೊಬ್ಬರಾಗಿ ಭೇಟಿಯಾಗಲು ಸಾಧ್ಯವಿಲ್ಲ, ಎಲ್ಲರೂ ಒಟ್ಟಿಗೇ ಭೇಟಿಯಾಗಲು ಬಯಸುವುದಾಗಿ ಕಾಂಗ್ರೆಸ್ ಹೈಕಮಾಂಡ್​ಗೆ ಹೇಳಿದ್ದಾರೆ. ರಾಜಸ್ಥಾನದ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಾಗ ಅಶೋಕ್ ಗೆಹ್ಲೋಟ್ ಅವರ ಅಭಿಪ್ರಾಯವನ್ನು ಪರಿಗಣಿಸಬೇಕು. 2020ರಲ್ಲಿ ಸಚಿನ್ ಪೈಲಟ್ ಬೆಂಬಲಿಗರ ಬಂಡಾಯದ ಸಂದರ್ಭದಲ್ಲಿ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಅವರ ಬೆಂಬಲಕ್ಕೆ ನಿಂತವರೇ ಹೊಸ ಸಿಎಂ ಆಗಬೇಕು. ಅಶೋಕ್ ಗೆಹ್ಲೋಟ್ ಬಣದವರೇ ಹೊಸ ಮುಖ್ಯಮಂತ್ರಿಯಾಗಬೇಕೇ ವಿನಃ ಸಿಎಂ ಸ್ಥಾನವನ್ನು ಸಚಿನ್ ಪೈಲಟ್​ಗಾಗಲಿ ಅಥವಾ ಅವರ ಬಣದವರಿಗಾಗಲಿ ನೀಡಬಾರದು ಎಂದು ಬಂಡಾಯ ಶಾಸಕರು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ಸಿಎಂ ಆಯ್ಕೆ ಮಾಡುವ ಅಧಿಕಾರ ಕಾಂಗ್ರೆಸ್ ಅಧ್ಯಕ್ಷರಿಗಿದೆ: ಸಚಿನ್ ಪೈಲಟ್ ಬಣ

2020ರ ಕಾಂಗ್ರೆಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರೇ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ಕೆಲವು ಅಶೋಕ್ ಗೆಹ್ಲೋಟ್ ನಿಷ್ಠಾವಂತರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಚಿನ್ ಪೈಲಟ್ ಅವರ ವಿರುದ್ಧ ಇದು ಬಂಡಾಯದ ಕರೆಯಾಗಿದೆ. ಅಶೋಕ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಎರಡೂ ಪಾತ್ರಗಳನ್ನು ನಿಭಾಯಿಸಬಲ್ಲರು. ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿ ಉಳಿಯದಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಗೆಲ್ಲುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸಚಿವ ಗೋವಿಂದ್ ರಾಮ್ ಮೇಘವಾಲ್ ಹೇಳಿದ್ದರು.

ಈ ನಡುವೆ ಸಚಿನ್ ಪೈಲಟ್ ಮಂಗಳವಾರ ಒಬ್ಬರೇ ನವದೆಹಲಿಗೆ ತೆರಳಿದ್ದು, ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಇಬ್ಬರೂ ಮಾಧ್ಯಮಗಳಿಗೆ ರಾಜಸ್ಥಾನದ ರಾಜಕೀಯ ಬೆಳವಣಿಗೆ ಬಗ್ಗೆ ಯಾವುದೇ ಮಾಹಿತಿಗಳನ್ನು ಬಿಟ್ಟುಕೊಟ್ಟಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada