ಪ್ರಧಾನಿ ಮೋದಿ ನಡೆಸಿದ್ದ ಪರಿಶೀಲನಾ ಸಭೆಗೆ ದೀದಿ ಗೈರಾಗಿದ್ದರ ಹಿಂದಿನ ಸತ್ಯ ತಿಳಿಸಿದ ರಾಜ್ಯಪಾಲ; ಮತ್ತೊಂದು ವಿವಾದ ಸೃಷ್ಟಿ

|

Updated on: Jun 01, 2021 | 4:21 PM

ಸುವೇಂದು ಅಧಿಕಾರಿ ಟಿಎಂಸಿಯ ಮಾಜಿ ನಾಯಕರಾಗಿದ್ದು, ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯವರ ಆಪ್ತನಾಗಿದ್ದರು. ಈ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಯಾಗಿ ನಂದಿಗ್ರಾಮದಿಂದ ಸ್ಪರ್ಧಿಸಿದ್ದರು.

ಪ್ರಧಾನಿ ಮೋದಿ ನಡೆಸಿದ್ದ ಪರಿಶೀಲನಾ ಸಭೆಗೆ ದೀದಿ ಗೈರಾಗಿದ್ದರ ಹಿಂದಿನ ಸತ್ಯ ತಿಳಿಸಿದ ರಾಜ್ಯಪಾಲ; ಮತ್ತೊಂದು ವಿವಾದ ಸೃಷ್ಟಿ
ಜಗದೀಪ್​ ಧನ್​​ಕರ್​​ ಮತ್ತು ಮಮತಾ ಬ್ಯಾನರ್ಜಿ
Follow us on

ಕೋಲ್ಕತ್ತ: ಯಾಸ್​ ಚಂಡಮಾರುತದಿಂದ ಪಶ್ಚಿಮಬಂಗಾಳದಲ್ಲಿ ಉಂಟಾದ ಹಾನಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಪರಿಶೀಲನಾ ಸಭೆಗೆ ಹಾಜರಾಗದ ಮಮತಾ ಬ್ಯಾನರ್ಜಿ ವಿರುದ್ಧ ಅಲ್ಲಿನ ರಾಜ್ಯಪಾಲ ಜಗದೀಪ್​ ಧನಕರ್​ ತೀವ್ರ ಕಿಡಿಕಾರಿದ್ದಾರೆ. ಅವರಿಗೆ ಸಾರ್ವಜನಿಕರ ಸೇವೆಗಿಂತ ಅಹಂಕಾರವೇ ಮುಖ್ಯ ಎಂದು ಹೇಳಿದ್ದಾರೆ. ಈ ಮಾತು ರಾಜ್ಯಪಾಲರ ಬಾಯಿಂದ ಬರುತ್ತಿದ್ದಂತೆ ವಿವಾದ ಸೃಷ್ಟಿಯಾಗಿದೆ. ಮಮತಾ ಬ್ಯಾನರ್ಜಿಯವರು 24/7 ಕಾಲ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದ ಹಿತಾಸಕ್ತಿ ಕಾಪಾಡಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದ್ದಾರೆ. ಆದರೆ ರಾಜ್ಯಪಾಲರ ಬಾಯಲ್ಲಿ ಇಂಥ ಮಾತು ಬಂದಿದ್ದು ನಿಜಕ್ಕೂ ದುರದೃಷ್ಟಕರ ಎಂದು ತೃಣಮೂಲ ಕಾಂಗ್ರೆಸ್ ತಿರುಗೇಟು ನೀಡಿದೆ.

ಮಮತಾ ಬ್ಯಾನರ್ಜಿ ವಿರುದ್ಧ ಟ್ವೀಟ್ ಮಾಡಿರುವ ರಾಜ್ಯಪಾಲ ಜಗದೀಪ್​ ಧನಕರ್​, ಪ್ರಧಾನಿ ನರೇಂದ್ರ ಮೋದಿಯವರ ಸಭೆ ಶುರುವಾಗುವುದಕ್ಕೂ ಕೆಲವೇ ಹೊತ್ತಿಗೆ ಮೊದಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನನಗೆ ಕರೆ ಮಾಡಿದ್ದರು. ಸಭೆಯಲ್ಲಿ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಪಾಲ್ಗೊಂಡರೆ ನಾನು ಭಾಗವಹಿಸುವುದಿಲ್ಲ ಎಂದು ಹೇಳಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಮೇ 28ರಂದು ಸಭೆ ನಡೆಯುವುದಿತ್ತು. ಆದರೆ ಮೇ 27ರಂದು ರಾತ್ರಿ ಮಮತಾ ಬ್ಯಾನರ್ಜಿಯವರಿಂದ ಸಂದೇಶವೊಂದು ಬಂತು. ತುರ್ತು ವಿಚಾರವಿದೆ.. ಮಾತನಾಡಬಹುದೇ ಎಂದು ಕೇಳಿದರು. ನಂತರ ಕರೆ ಮಾಡಿದರು. ಯಾಸ್​ ಚಂಡಮಾರುತದಿಂದಾದ ಹಾನಿಯ ಬಗ್ಗೆ ಪ್ರಧಾನಿ ಮೋದಿ ನಡೆಸಲಿರುವ ಸಭೆಯಲ್ಲಿ ವಿರೋಧಪಕ್ಷದ ನಾಯಕ ಸುವೇಂದು ಅಧಿಕಾರಿ ಪಾಲ್ಗೊಂಡರೆ ನಾವು ಈ ಸಭೆಯನ್ನು ಬಹಿಷ್ಕರಿಸುತ್ತೇವೆ ಎಂದು ಹೇಳಿದ್ದರು. ಅಲ್ಲಿಗೆ ಸಾರ್ವಜನಿಕ ಸೇವೆಗಿಂತ ಅಹಂಕಾರವೇ ಮೇಲುಗೈ ಸಾಧಿಸಿದಂತೆ ಆಯಿತು ಎಂದು ರಾಜ್ಯಪಾಲರು ಟ್ವೀಟ್​​ನಲ್ಲಿ ತಿಳಿಸಿದ್ದಾರೆ.

ಸುವೇಂದು ಅಧಿಕಾರಿ ಟಿಎಂಸಿಯ ಮಾಜಿ ನಾಯಕರಾಗಿದ್ದು, ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯವರ ಆಪ್ತನಾಗಿದ್ದರು. ಈ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಯಾಗಿ ನಂದಿಗ್ರಾಮದಿಂದ ಸ್ಪರ್ಧಿಸಿದ್ದರು. ಅವರನ್ನು ಸೋಲಿಸಲೆಂದು ಮಮತಾ ಬ್ಯಾನರ್ಜಿ ತಮ್ಮ ಸ್ವಕ್ಷೇತ್ರ ಭವಾನಿಪುರವನ್ನು ಬಿಟ್ಟು ನಂದಿಗ್ರಾಮದಲ್ಲಿ ಸ್ಪರ್ಧಿಸಿ, ಸುವೇಂದು ಅಧಿಕಾರಿ ವಿರುದ್ಧ ಸೋತಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್ ಮುಗಿದ ನಂತರ ಆರಂಭವಾಗುವ ಸಾರಿಗೆ ಸೇವೆಯಲ್ಲಿ ಲಸಿಕೆ ಪಡೆದ ಸಿಬ್ಬಂದಿಗಳಿಗೆ ಆದ್ಯತೆ: ಡಿಸಿಎಂ ಲಕ್ಷ್ಮಣ ಸವದಿ