AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಡ್ ಲಸಿಕೆ ಉಚಿತವಾಗಿ ಪೂರೈಸುವಂತೆ ಕೇಂದ್ರವನ್ನು ಒತ್ತಾಯಿಸಲು ಬಿಜೆಪಿಯೇತರ ಸರ್ಕಾರದ ಮುಖ್ಯಮಂತ್ರಿಗಳಿಗೆ ಪಿಣರಾಯಿ ವಿಜಯನ್ ಪತ್ರ

ದೇಶವು ಎರಡನೇ ಅಲೆಯಿಂದ ತತ್ತರಸಿರುವ ಸಂದರ್ಭದಲ್ಲಿ ಕೆಂದ್ರ ಸರ್ಕಾರವು ರಾಜ್ಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಲಸಿಕೆಗಳನ್ನು ಪೂರೈಸಿ ತನ್ನ ಹೊಣೆಗಾರಿಕೆಯನ್ನು ಹಗುರ ಮಾಡಿಕೊಳ್ಳಲು ಪ್ರಯತ್ನ ಮಾಡದಿರುವುದು ನಿಜಕ್ಕೂ ದುರದೃಷ್ಟಕರ ಎಂದು ವಿಜಯನ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಕೋವಿಡ್ ಲಸಿಕೆ ಉಚಿತವಾಗಿ ಪೂರೈಸುವಂತೆ ಕೇಂದ್ರವನ್ನು ಒತ್ತಾಯಿಸಲು ಬಿಜೆಪಿಯೇತರ ಸರ್ಕಾರದ ಮುಖ್ಯಮಂತ್ರಿಗಳಿಗೆ ಪಿಣರಾಯಿ ವಿಜಯನ್ ಪತ್ರ
ಪಿಣರಾಯಿ ವಿಜಯನ್
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Jun 01, 2021 | 5:35 PM

Share

ತಿರುವನಂತಪುರ: ಕೊವಿಡ್-19 ಸೋಂಕಿನ ವಿರುದ್ಧ ಹೋರಾಡಲು ದೇಶದಲ್ಲಿ ಎದುರಾಗಿರುವ ಲಸಿಕೆಯ ತೀವ್ರ ಅಭಾವದ ಹಿನ್ನೆಲೆಯಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸೋಮವಾರ ಬಿಜೆಪಿಯೇತರ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ಬರೆದು ಕೇಂದ್ರವು ತಮಗೆ ಉಚಿತವಾಗಿ ಲಸಿಕೆ ಒದಗಿಸಲು ಎಲ್ಲರೂ ಒಟ್ಟಾಗಿ ಒತ್ತಾಯಿಸಬೇಕೆಂದು ಆಗ್ರಹಿಸಿದ್ದಾರೆ. ಪತ್ರವನ್ನು ಅವರು ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ, ಒಡಿಷಾ, ಛತ್ತೀಸಗಢ್, ಪಶ್ಚಿಮ ಬಂಗಾಳ, ಜಾರ್ಖಂಡ್, ದೆಹಲಿ, ಪಂಜಾಬ, ರಾಜಸ್ತಾನ ಮತ್ತು ಮಹಾರಾಷ್ಟ್ರ ಮೊದಲಾದ 11 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬರೆದಿದ್ದಾರೆ.

ದೇಶವು ಎರಡನೇ ಅಲೆಯಿಂದ ತತ್ತರಸಿರುವ ಸಂದರ್ಭದಲ್ಲಿ ಕೆಂದ್ರ ಸರ್ಕಾರವು ರಾಜ್ಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಲಸಿಕೆಗಳನ್ನು ಪೂರೈಸಿ ತನ್ನ ಹೊಣೆಗಾರಿಕೆಯನ್ನು ಹಗುರ ಮಾಡಿಕೊಳ್ಳಲು ಪ್ರಯತ್ನ ಮಾಡದಿರುವುದು ನಿಜಕ್ಕೂ ದುರದೃಷ್ಟಕರ ಎಂದು ವಿಜಯನ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

‘ಸಹಕಾರಿ ಒಕ್ಕೂಟದ ಚೇತನದೊಂದಿಗೆ 11 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವೆ. ಲಭ್ಯವಿರುವ ಎಲ್ಲ ಮೂಲಗಳಿಂದ ಕೋವಿಡ್ ಲಸಿಕೆಯನ್ನು ಸಂಗ್ರಹಿಸಿ ಪ್ರತಿಯೊಂದು ರಾಜ್ಯಕ್ಕೆ ಅದನ್ನು ಉಚಿತವಾಗಿ ಪೂರೈಸುವ ಹೊಣೆಗಾರಿಕೆಯಿಂದ ಕೇಂದ್ರ ಸರ್ಕಾರ ನುಣುಚಿಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಈ ದಿಶೆಯಲ್ಲಿ ನಮ್ಮ ಹಕ್ಕುಬದ್ಧ ಬೇಡಿಕೆಯ ಈಡೇರಿಕೆಗೆ ಕೇಂದ್ರ ಕೂಡಲೇ ಕಾರ್ಯಪ್ರವೃತ್ತಗಳ್ಳುವಂತೆ ಮಾಡಲು ನಾವೆಲ್ಲ ಒಂದಾಗಿ ಪ್ರಯತ್ನಿಸಬೇಕಿದೆ,’ ಎಂದು ಪತ್ರ ಬರೆದ ನಂತರ ವಿಜಯನ್ ಅವರು ಟ್ವೀಟ್​ ಮಾಡಿದ್ದಾರೆ.

ಲಸಿಕೆಯನ್ನು ಪಡೆದುಕೊಳ್ಳುವ ಇಡೀ ಭಾರ ಅಥವಾ ಹೆಚ್ಚಿನಮಟ್ಟದ ಭಾರ ರಾಜ್ಯಗಳ ಮೇಲೆ ಬಿದ್ದರೆ ರಾಜ್ಯಗಳ ಆರ್ಥಿಕ ಸ್ಥಿತಿ ದುಸ್ತರಗೊಳ್ಳುತ್ತದೆ ಎಂದು ಸಹ ವಿಜಯನ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ದೇಶದ ಜನಸಂಖ್ಯೆಯ ಹೆಚ್ಚಿನ ಭಾಗ ಲಸಿಕೆ ಪಡೆದುಕೊಂಡಲ್ಲಿ ಮಾತ್ರ ಸಮುದಾಯ ರೋಗ ನಿರೋಧಕ ಶಕ್ತಿ ಪರಣಾಮಕಾರಿಯೆನಿಸುತ್ತದೆ. ಭಾರತದಲ್ಲಿ ಇವತ್ತಿನವರೆಗೆ ಕೇವಲ ಶೇಕಡಾ 3-4 ರಷ್ಟು ಜನ ಮಾತ್ರ ಕೋವಿಡ್​ ಲಸಿಕೆಯ ಎರಡು ಡೋಸ್​ಗಳನ್ನು ಪಡೆದುಕೊಂಡಿದ್ದಾರೆ, ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಲಸಿಕೆ ಉತ್ಪಾದಿಸುವ ಸಂಸ್ಥೆಗಳು ಅದರ ಅಭಾವ ಸ್ಥಿತಿಯ ದುರ್ಲಾಭ ಪಡೆದು ಹಣ ಮಾಡಿಕೊಳ್ಳುವ ಹುನ್ನಾರದಲ್ಲಿದ್ದಾರೆ. ಲಸಿಕೆಯನ್ನು ಪೂರೈಸಲು ರಾಜ್ಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ವಿದೇಶಿ ಪಾರ್ಮಾಸ್ಯೂಟಿಕಲ್ ಕಂಪನನಿಗಳು ಮುಂದೆ ಬರುತ್ತಿಲ್ಲ. ಭಾರತದಲ್ಲಿ ಸಾರ್ವಜನಿಕ ವಲಯದ ಫಾರ್ಮಾಸ್ಯೂಟಿಕಲ್ ಕಂಪನಿಗಳಿದ್ದು ಅವು ಲಸಿಕೆಯನ್ನು ತಯಾರು ಮಾಡುವ ಸಾಮರ್ಥ್ಯ ಹೊಂದಿವೆ, ಎಂದು ವಿಜಯನ್ ಪತ್ರದಲ್ಲಿ ಹೇಳಿದ್ದಾರೆ

ಲಸಿಕೆ ಉತ್ಪಾದಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪೇಟೆಂಟ್ ಕಾಯ್ದೆ ಮತ್ತು ಇನ್ನಿತರ ಕಾಯ್ದೆಗಳು ಲಸಿಕೆ ತಯಾರಿಕೆಯ ಹಾದಿಯಲ್ಲಿ ಅಡೆತಡೆ ಉಂಟುಮಾಡದ ಹಾಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ಕೇಂದ್ರವನ್ನು ಕೋರಿದ್ದಾರೆ. ಕಡ್ಡಾಯ ಪರವಾನಗಿದಯಂಥ ಆದ್ಯತೆಗಳ ಕಡೆ ಕೇಂದ್ರ ಸರ್ಕಾರ ಗಮನಹರಿಸಬೇಕೆಂದು ಎಂದು ವಿಜಯನ್ ಅವರು ಹೇಳಿದ್ದಾರೆ.

ಇದನ್ನೂ ಓದಿ: Corona Vaccine: ಕೊವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಕೊರೊನಾದ ವಿರುದ್ಧ ಪರಿಣಾಮಕಾರಿಯೇ?