ದೆಹಲಿ: ಕೊರೊನಾ ವೈರಾಣು ಇಡೀ ಜಗತ್ತನ್ನೇ ವ್ಯಾಪಿಸಿ ಸುಮಾರು ಒಂದೂವರೆ ವರ್ಷ ಕಳೆದಿದೆ. ಆದರೆ, ಇದುವರೆಗೂ ಕೊರೊನಾ ಮೂಲ ಯಾವುದೆಂದು ಕಂಡು ಹಿಡಿಯಲು ವಿಜ್ಞಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಚೀನಾದ ವುಹಾನ್ ಪ್ರಯೋಗಾಲಯದಲ್ಲಿ ಸೃಷ್ಟಿಯಾದ ವೈರಾಣುವೇ ಈ ಅನಾಹುತಗಳಿಗೆ ಕಾರಣವೆಂಬ ಊಹಾಪೋಹಗಳಿದ್ದರೂ ಅದು ದೃಢಪಟ್ಟಿಲ್ಲ. ಅನೇಕ ರಾಷ್ಟ್ರಗಳ ನಿರಂತರ ಅಧ್ಯಯನದ ಹೊರತಾಗಿಯೂ ಕೊರೊನಾದ ಬೇರು ಎಲ್ಲಿದೆ ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ. ಈ ಸಂದರ್ಭದಲ್ಲೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಜಿ ಮುಖ್ಯ ವಿಜ್ಞಾನಿ ಡಾ.ರಮಣ್ ಆರ್ ಗಂಗಾಖೇದ್ಕರ್ ಸಹ ಕೊರೊನಾ ಕೃತಕವಾಗಿ ಸೃಷ್ಟಿಗೊಂಡ ವೈರಾಣುವೆನ್ನಲು ಪುರಾವೆಗಳಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊರೊನಾ ವೈರಾಣು ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿದೆ ಎನ್ನುವುದಕ್ಕಾಗಲೀ, ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ ಎನ್ನುವುದಕ್ಕಾಗಲೀ ನಿಖರ ಪುರಾವೆಗಳೇ ಲಭ್ಯವಿಲ್ಲ. ಈ ಹಂತದಲ್ಲಿ ವೈರಾಣುವಿನ ಮೂಲದ ಬಗ್ಗೆ ಇದಮಿತ್ತಂ ಎಂದು ತಿಳಿಸಲಾಗದು. ಇನ್ನೂ ಅಧ್ಯಯನ ನಡೆದು ವರದಿ ಕೈ ಸೇರುವ ತನಕ ಕಾಯಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ, ವರ್ಷಂಪ್ರತಿ ಬಿಎಸ್ಎಲ್4 ಪ್ರಯೋಗಾಲಯಗಳಿಂದ ಹಿಡಿದು ವಿವಿಧ ಪ್ರಯೋಗ ಶಾಲೆಗಳಲ್ಲಿ ಅನೇಕ ಅವಘಡಗಳು ಘಟಿಸುತ್ತಲೇ ಇರುತ್ತವೆ. ಇದರ ಬಗ್ಗೆ ಜಾಗತಿಕ ಮಟ್ಟದ ಅಂಕಿ ಅಂಶಗಳನ್ನು ಗಮನಿಸಿದರೆ ಸ್ಪಷ್ಟ ಚಿತ್ರಣ ಸಿಗುತ್ತದೆ. ಹಾಗಾಗಿ ಪ್ರಯೋಗಾಲಯದಿಂದ ಹೀಗಾಗಿದ್ದರೂ ಅದು ಹೊಸ ಘಟನೆ ಎಂದೇನೂ ಆಗಲಾರದು ಎಂದು ಹೇಳಿದ್ದಾರೆ.
ಇದೆಲ್ಲದರ ಜತೆಗೆ ಕೊರೊನಾ ಲಸಿಕೆ ಲಭ್ಯತೆ ಬಗ್ಗೆ ಮಾತನಾಡಿರುವ ಅವರು ಭಾರತದಲ್ಲಿ ಕೊರೊನಾ ಲಸಿಕೆ ಅಭಾವ ಸೃಷ್ಟಿಯಾದ ಬೆನ್ನಲ್ಲೇ ಹೊರ ದೇಶಗಳಿಂದ ಲಸಿಕೆ ತರಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ದೇಶದಲ್ಲಿ ತಯಾರಿಸುವ ಲಸಿಕೆಗಳಿಗೂ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಹೇಳಿರುವ ಅವರು, ಈ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಂಚಲು ಒತ್ತು ನೀಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಸದ್ಯ ಕೊರೊನಾ ಎರಡನೇ ಅಲೆ ಇಳಿಮುಖವಾಗುವ ಹಂತದಲ್ಲಿದೆ. ನಾವೀಗ ಈ ಪರಿಸ್ಥಿತಿಯ ಲಾಭ ಪಡೆದುಕೊಂಡು ವೈದ್ಯಕೀಯ ವ್ಯವಸ್ಥೆ ಬಲಪಡಿಸುವತ್ತ ಹೆಚ್ಚು ಗಮನ ನೀಡಬೇಕಿದೆ. ಆ ಮೂಲಕ ಮೂರನೇ ಅಲೆ ಮಾಡಬಹುದಾದ ಹಾನಿಯನ್ನು ತಡೆಯಲು ಸಿದ್ಧತೆ ಮಾಡಿಕೊಳ್ಳಬೇಕು. ಒಂದುವೇಳೆ, ಈಗಿನಿಂದಲೇ ಎಚ್ಚೆತ್ತುಕೊಂಡು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡರೆ ಮೂರನೇ ಅಲೆಯ ಹಾನಿಯನ್ನು ಯಶಸ್ವಿಯಾಗಿ ತಡೆಯುವುದು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:
ಸಾಂಕ್ರಾಮಿಕ ರೋಗದಲ್ಲಿ ವುಹಾನ್ನ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಪಾತ್ರವು ಚೀನಾವನ್ನು ಹೊಣೆಯಾಗಿಸುವ ಮೊದಲ ಹೆಜ್ಜೆ
ಜಗತ್ತಿನ ವಿರುದ್ಧ ಜೈವಿಕ ಅಸ್ತ್ರವಾಗಿ ಕೊರೊನಾ ವೈರಸ್ ಬಳಕೆ.. ಬಯಲಾಯ್ತು ಚೀನಾದ ಕುತಂತ್ರ!