ನವದೆಹಲಿ: ಪಿಎಂ ಕೇರ್ಸ್ ಹಣ ಸೋರಿಕೆ ಆಗುತ್ತಿದೆ ಎನ್ನುವ ಆರೋಪವನ್ನು ಪ್ರತಿಪಕ್ಷಗಳು ಈ ಮೊದಲಿನಿಂದಲೂ ಮಾಡುತ್ತಲೇ ಬಂದಿವೆ. ಈವರೆಗೆ ಕೇಂದ್ರ ಸರ್ಕಾರ ಈ ಬಗ್ಗೆ ಮೌನ ತಾಳುತ್ತಲೇ ಬಂದಿತ್ತು. ಆದರೆ, ಈಗ ಪ್ರತಿಪಕ್ಷಗಳ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಪಿಎಂ ಕೇರ್ಸ್ ಮೇಲೆ ನಮ್ಮ ನಿಯಂತ್ರಣ ಇಲ್ಲ ಎಂದಿದೆ.
ಪಿಎಂ ಕೇರ್ಸ್ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎನ್ನುವ ಆರೋಪವನ್ನು ವಿಪಕ್ಷಗಳು ಮಾಡಿದ್ದವು. ಅಲ್ಲದೆ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆದಿದ್ದವು. ಈ ಎಲ್ಲ ಚರ್ಚೆಗಳಿಗೆ ಕೇಂದ್ರ ಸರ್ಕಾರ ಇತಿಶ್ರೀ ಹಾಡಿದೆ.
ಪಿಎಂ ಕೇರ್ಸ್ ಮೇಲೆ ಕೇಂದ್ರ, ರಾಜ್ಯ ಸರ್ಕಾರಗಳ ನೇರ ಅಥವಾ ಪರೋಕ್ಷ ನಿಯಂತ್ರಣವಿರುವುದಿಲ್ಲ. ಈ ಹಣವನ್ನು ಸಾಂಕ್ರಾಮಿಕ ರೋಗ, ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಪರಿಹಾರ ಕಾಮಗಾರಿಗಳಿಗೆ ಬಳಕೆ ಮಾಡಲಾಗುತ್ತದೆ. ಟ್ರಸ್ಟ್‌ನ ಸದಸ್ಯರು ಕೂಡ ಟ್ರಸ್ಟ್‌ಗೆ ಹಣ ದೇಣಿಗೆ ನೀಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಪಿಎಂ ಕೇರ್ಸ್ ಟ್ರಸ್ಟ್‌ನ ಅಧ್ಯಕ್ಷರಾಗಿರುತ್ತಾರೆ. ಪ್ರಧಾನಿಯವರು ಟ್ರಸ್ಟ್‌ನ ಉಪಾಧ್ಯಕ್ಷರನ್ನೂ ನೇಮಿಸಬಹುದು. ಗೃಹ, ರಕ್ಷಣಾ, ಹಣಕಾಸು ಖಾತೆ ಸಚಿವರು ಈ ಟ್ರಸ್ಟ್‌ನ ಸದಸ್ಯರಾಗಿರುತ್ತಾರೆ, ಎಂದು ತಿಳಿಸಿದೆ.
ಪಿಎಂ ಕೇರ್ಸ್ ನಿಧಿಯಲ್ಲಿ ಪಾರದರ್ಶಕತೆಯಿಲ್ಲವೆಂದು ಟೀಕೆಗಳು ಕೇಳಿ ಬಂದಿದ್ದವು. ಆಪರೇಷನ್ ಕಮಲಕ್ಕೆ ಪಿಎಂ ಕೇರ್ಸ್ ಹಣ ಬಳಕೆ ಮಾಡಿಕೊಳ್ಳಲಾಗಿತ್ತು ಎನ್ನುವ ಗಂಭೀರ ಆರೋಪವನ್ನು ವಿಪಕ್ಷಗಳು ಮಾಡಿದ್ದವು.