ಅರುಣಾಚಲ ಪ್ರದೇಶದ 17 ವರ್ಷದ ಬಾಲಕ ಮಿರಾಮ್ ಟ್ಯಾರೋನ್(Miram Taron)ನನ್ನು ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿ(China PLA) ಇತ್ತೀಚೆಗೆ ಅಪಹರಣ ಮಾಡಿ, ನಂತರ ಭಾರತಕ್ಕೆ ಹಸ್ತಾಂತರ ಮಾಡಿತ್ತು. ಎಲ್ಎಸಿ (ವಾಸ್ತವಿಕ ನಿಯಂತ್ರಣ ರೇಖೆ)ಯಿಂದ ಈ ಬಾಲಕ ನಾಪತ್ತೆಯಾಗಿದ್ದ. ನಂತರ ಈತ ಕಾನೂನು ಬಾಹಿರವಾಗಿ ಚೀನಾದ ಭೂಪ್ರದೇಶ ಪ್ರವೇಶಿಸಿದ್ದಾನೆ ಎಂದು ಆರೋಪಿಸಿ, ಆತನನ್ನು ಚೀನಾ ಸೇನೆ (China Army) ಅಪಹರಿಸಿತ್ತು. ಬಳಿಕ ಯುವಕನ ಬಗ್ಗೆ ಭಾರತೀಯ ಸೇನೆ ಚೀನಾ ಸೇನೆಯನ್ನು ಕೇಳಿ, ಆತನನ್ನು ಬಿಡುವಂತೆ ಹೇಳಿತ್ತು. ಆತನನ್ನು ಅಪಹರಿಸಿ 9 ದಿನಗಳ ನಂತರ ಜನವರಿ 27ರಂದು ಚೀನಾ ಸೇನೆ ಮಿರಾಮ್ ಟ್ಯಾರೋನ್ನನ್ನು ವಾಪಸ್ ಕಳಿಸಿದೆ.
ಹೀಗೆ ಚೀನಾ ಸೇನೆಯ ವಶದಲ್ಲಿದ್ದು ವಾಪಸ್ ಬಂದ ಮಿರಾಮ್ ಟ್ಯಾರೋನ್ರನ್ನು ಇಂಡಿಯಾ ಟುಡೆ ಸಂದರ್ಶಿಸಿದೆ. ಈ ವೇಳೆ ಆತ ತಾನು ಪಟ್ಟ ಪಾಡುಗಳನ್ನು ಹೇಳಿಕೊಂಡಿದ್ದಾನೆ. ಚೀನಾ ಸೇನೆ ನನ್ನನ್ನು ಕಟ್ಟಿ ಹಾಕಿತ್ತು, ವಿದ್ಯುತ್ ಶಾಕ್ ನೀಡಿತ್ತು ಎಂಬ ಸತ್ಯವನ್ನು ಹೊರಹಾಕಿದ್ದಾನೆ. ಈ ಮೂಲಕ ಚೀನಾ ಸೇನೆಯ ಕರಾಳ ಮುಖದ ದರ್ಶನ ಮಾಡಿಸಿದ್ದಾನೆ. ಮೊದಲ ದಿನ ನನಗೆ ತುಂಬ ಹಿಂಸೆ ನೀಡಿದರು. ಚೀನಾ ಸೈನಿಕರ ಬಳಿ ಸಿಕ್ಕಿಬಿದ್ದ ನಂತರ ಅವರು ನನ್ನ ಕೈ ಕಟ್ಟಿದರು. ದಟ್ಟವಾದ ಅರಣ್ಯದೊಳಗೆ ಕರೆದುಕೊಂಡು ಹೋದರು. ವಿದ್ಯುತ್ ಶಾಕ್ ನೀಡಿದರು ಎಂದು ತಿಳಿಸಿದ್ದಾರೆ.
ನಾನು ಮತ್ತು ನನ್ನ ಸ್ನೇಹಿತರು ಬೇಟೆಯಾಡುತ್ತ ಹೋದರು. ಆಗ ನನ್ನನ್ನು ಚೀನಾ ಪಿಎಲ್ಎ ಸೈನಿಕರು ಬಂಧಿಸಿದರು. ನನಗೆ ಪ್ರಾರಂಭದಲ್ಲಿ ಅವರು ಭಾರತೀಯ ಸೈನಿಕರೋ, ಚೀನಾದವರೋ ಎಂದು ಸ್ಪಷ್ಟವಾಗಲಿಲ್ಲ. ಯಾಕೆಂದರೆ ಕತ್ತಲಿತ್ತು. ಅದಾದ ನಂತರ ಚೀನಾ ಸೈನಿಕರು ಎಂಬುದು ತಿಳಿಯಿತು. ನನ್ನ ಕೈ ಕಟ್ಟಿದ್ದಷ್ಟೇ ಅಲ್ಲ, ತಲೆಗೆ ಕೂಡ ಬಟ್ಟೆಯಿಂದ ಮುಚ್ಚಿದ್ದರು. ಚೈನೀಸ್ ಆರ್ಮಿ ಕ್ಯಾಂಪ್ಗೆ ಕರೆದುಕೊಂಡ ಬಳಿಕ ಹೊಡೆದಿದ್ದಾರೆ. ಆದರೆ ಊಟ, ನೀರು ಎಲ್ಲ ಕೊಟ್ಟಿದ್ದಾರೆ ಎಂದು ಮಿರಾಮ್ ತಿಳಿಸಿದ್ದಾನೆ.
ಮಿರಾಮ್ ಟ್ಯಾರೋನ್ ಜನವರಿ 18ರಂದು ನಾಪತ್ತೆಯಾಗಿದ್ದ. ಅದಾದ ನಂತರ ಜನವರಿ 19ರಂದು ಈ ಬಗ್ಗೆ ಮೊದಲು ಧ್ವನಿಯೆತ್ತಿದವರು ಅರುಣಾಚಲ ಪ್ರದೇಶ ಬಿಜೆಪಿ ಸಂಸದ ತಪೀರ್ ಗಾವೋ. ಚೀನಾ ಸೈನಿಕರು ಮಿರಾಮ್ನನ್ನು ಮೇಲಿನ ಸಿಯಾಂಗ್ ಜಿಲ್ಲೆಯಿಂದ ಅಪಹರಿಸಿದ್ದಾರೆ ಎಂದು ಆರೋಪಿಸಿದ್ದರು. ಅದಾದ ಬಳಿಕ ಕಾಂಗ್ರೆಸ್ ನಾಯಕ ನಿನೋಂಗ್ ಎರಿಂಗ್ ಕೂಡ ಇದೇ ಆರೋಪ ಮಾಡಿದ್ದರು. ಅಷ್ಟೇ ಅಲ್ಲ, ಹುಡುಗನನ್ನು ಚೀನಾ ಸೇನೆ ಅಪಹರಿಸಿದ್ದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೃಢಪಡಿಸಿದ್ದಾಗಿಯೂ ಹೇಳಿದ್ದರು. ಅದಾದ ನಂತರ ತಕ್ಷಣ ಭಾರತೀಯ ಸೇನೆ ಚುರುಕಾಗಿ ಕೆಲಸ ಮಾಡಿತ್ತು. ಚೀನಾ ಆರ್ಮಿಗೆ ವಿಷಯ ತಿಳಿಸಿ, ಮಿರಾಮ್ ಬಗ್ಗೆ ವಿಚಾರಿಸಿತ್ತು.
ಅಂತೂ 9 ದಿನಗಳ ನಿಂತರ ಚೀನಾ ಸೇನೆ ಮಿರಾಮ್ನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ಜನವರಿ 27ರಂದು ಎಲ್ಲ ರೀತಿಯ ಪ್ರಕ್ರಿಯೆಗಳೂ ಮುಗಿದು ಮಿರಾಮ್ ಭಾರತ ಸೇರಿಕೊಂಡಿದ್ದರು. ಅಂದು ಕೇಂದ್ರ ಸಚಿವ ಕಿರಣ್ ರಿಜಿಜು ಫೋಟೋಗಳನ್ನು ಶೇರ್ ಮಾಡಿಕೊಂಡು ಟ್ವೀಟ್ ಕೂಡ ಮಾಡಿದ್ದರು. ಹಾಗೇ, ಗಡಿಭಾಗದಲ್ಲಿರುವ ಜನರು ತುಂಬ ಎಚ್ಚರಿಕೆಯಿಂದ ಇರಬೇಕು ಎಂದೂ ಮನವಿ ಮಾಡಿದ್ದರು.
ಇದನ್ನೂ ಓದಿ: ಏಕಾಏಕಿ ಹೊತ್ತಿ ಉರಿದ ಬಿಎಂಟಿಸಿ ಬಸ್; ಅದೃಷ್ಟವಶಾತ್ ಪ್ರಯಾಣಿಕರು ಪಾರು