ಆಂಧ್ರ ಜಿನ್ನಾ ಟವರ್ ವಿವಾದ; ಇಡೀ ಟವರ್ಗೆ ಕೇಸರಿ-ಬಿಳಿ-ಹಸಿರು ಬಣ್ಣ ಬಳಿಸಿದ ಶಾಸಕ, ನಾಳೆ ಧ್ವಜಾರೋಹಣ
ಜನವರಿ 26ರ ಗಣರಾಜ್ಯೋತ್ಸವದಂದು ಬಲಪಂಥೀಯ ಸಂಘಟನೆಯ ಒಂದಷ್ಟು ಜನರು ಜಿನ್ನಾ ಟವರ್ಗೆ ನುಗ್ಗಿ, ಅಲ್ಲಿ ಧ್ವಜಾರೋಹಣ ನಡೆಸಲು ಮುಂದಾಗಿದ್ದರು. ಆದರೆ ಇದರಿಂದ ಗಲಾಟೆಯಾಗುವ ಸಾಧ್ಯತೆ ಹೆಚ್ಚಾಗಿದ್ದುದರಿಂದ ಪೊಲೀಸರು ಅವರನ್ನು ತಡೆದಿದ್ದರು
ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಜಿನ್ನಾ ಟವರ್ನ್ನು (Jinnah Tower) ತ್ರಿವರ್ಣಗಳಿಂದ (ಕೇಸರಿ-ಬಿಳಿ-ಹಸಿರು) ಪೇಂಟಿಂಗ್ ಮಾಡಲಾಗಿದೆ. ಜನವರಿ 26ರಂದು ಇಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಸಂಬಂಧ ವಿವಾದ ಸೃಷ್ಟಿಯಾಗಿತ್ತು. ಅದರ ಬೆನಲ್ಲೇ ಈ ಟವರ್ಗೆ ಕೇಸರಿ-ಬಿಳಿ-ಹಸಿರು ಬಣ್ಣ (Tricolour )ಬಳಿಯಲಾಗಿದ್ದು, ನಾಳೆ (ಫೆ.3) ಇಲ್ಲಿ ಧ್ವಜಾರೋಹಣ ಮಾಡಲಾಗುವುದು ಎಂದು ಗುಂಟೂರು ಪೂರ್ವ ಕ್ಷೇತ್ರದ ಶಾಸಕ ಮೊಹಮ್ಮದ್ ಮುಸ್ತಫಾ ಹೇಳಿದ್ದಾರೆ. ಜನವರಿ 26ರ ಗಣರಾಜ್ಯೋತ್ಸವದಂದು ಬಲಪಂಥೀಯ ಸಂಘಟನೆಯ ಒಂದಷ್ಟು ಜನರು ಜಿನ್ನಾ ಟವರ್ಗೆ ನುಗ್ಗಿ, ಅಲ್ಲಿ ಧ್ವಜಾರೋಹಣ ನಡೆಸಲು ಮುಂದಾಗಿದ್ದರು. ಆದರೆ ಇದರಿಂದ ಗಲಾಟೆಯಾಗುವ ಸಾಧ್ಯತೆ ಹೆಚ್ಚಾಗಿದ್ದುದರಿಂದ ಪೊಲೀಸರು ಅವರನ್ನು ತಡೆದಿದ್ದರು.
ಆದರೆ ಈಗ ಆಂಧ್ರದ ಆಡಳಿತ ಪಕ್ಷ ವೈಎಸ್ಆರ್ಸಿಪಿಯ ಶಾಸಕ ಮುಸ್ತಫಾ ಅವರೇ ಖುದ್ದಾಗಿ ನಿಂತು ಇಡೀ ಟವರ್ಗೆ ಪೇಂಟಿಂಗ್ ಮಾಡಿಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಈ ಟವರ್ಗೆ ರಾಷ್ಟ್ರಧ್ವಜ ಮಾದರಿಯಲ್ಲಿ ಪೇಂಟಿಂಗ್ ಮಾಡಬೇಕು ಎಂದು ಅನೇಕರು ಮನವಿ ಮಾಡಿದ್ದರು. ಅದರಂತೆ ಬಣ್ಣ ಬಳಿಯಲಾಗಿದೆ. ಅಲ್ಲದೆ, ರಾಷ್ಟ್ರಧ್ವಜ ಹಾರಿಸಲು ಟವರ್ ಬಳಿಯೇ ಒಂದು ಕಂಬವನ್ನೂ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಹಲವು ಮುಸ್ಲಿಂ ಮುಖಂಡರೂ ಹೋರಾಡಿದ್ದಾರೆ. ಆದರೆ ಸ್ವಾತಂತ್ರ್ಯ ಬಂದ ನಂತರ ಅದೆಷ್ಟೋ ಜನರು ಪಾಕಿಸ್ತಾನಕ್ಕೆ ಹೋಗಿ ನೆಲೆಸಿದರು. ನಾವು ಭಾರತೀಯರಾಗಿ ಇಲ್ಲಿಯೇ ಜೀವನ ನಡೆಸುತ್ತಿದ್ದೇವೆ. ನಮ್ಮ ತಾಯ್ನಾಡಾದ ಭಾರತದ ಬಗ್ಗೆ ನಮಗೂ ಅಪಾರ ಪ್ರೀತಿ-ಗೌರವ ಇದೆ ಎಂದು ಹೇಳಿದ್ದಾರೆ.
ಜನವರಿ 26ರಂದು ಹಿಂದು ವಾಹಿನಿ ಎಂಬ ಗುಂಪಿನ ಜನರು ಟವರ್ಗೆ ಪ್ರವೇಶಿಸಿ, ಅಲ್ಲಿ ರಾಷ್ಟ್ರಧ್ವಜ ಹಾರಿಸಲು ಮುಂದಾಗಿದ್ದರು. ಆದರೆ ಪೊಲೀಸರು ತಡೆದಿದ್ದರು. ಪೊಲೀಸರು ತಡೆಯುತ್ತಿದ್ದಂತೆ ಪ್ರತಿಭಟನೆಯೂ ಶುರುವಾಗಿತ್ತು. ಹಿಂದು ವಾಹಿನಿ ಗುಂಪಿನವರು ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳನ್ನೂ ಕೂಗಿದ್ದರು. ಈ ಟವರ್ ಹೆಸರು ಇತ್ತೀಚೆಗೆ ಇನ್ನಷ್ಟು ವಿರೋಧಕ್ಕೆ ಗುರಿಯಾಗಿದೆ. ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಹೆಸರಿನ ಬದಲಿಗೆ ನಮ್ಮ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅಥವಾ ದಲಿತ ಕವಿ ಗುರಾಮ್ ಜಶುವಾ ಹೆಸರಿಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
Andhra Pradesh: Guntur’s Jinnah Tower, on which Hindu Vahini activists tried to unfurl the national flag on January 26, was painted in Tricolour by ruling YSRCP MLA Mohammad Mustafa on Tuesday. pic.twitter.com/Q6Mdi1k8ZO
— ANI (@ANI) February 2, 2022
ಇನ್ನೊಂದೆಡೆ ಕಳೆದ ವಾರ ಹೇಳಿಕೆ ನೀಡಿದ್ದ ವೈಎಸ್ಆರ್ಸಿಪಿ ಎಂಎಲ್ಸಿ ಅಪ್ಪಿ ರೆಡ್ಡಿ, ಈ ಜಿನ್ನಾ ಟವರ್ ಎಂಬುದು ಇಷ್ಟು ವರ್ಷಗಳ ಕಾಳ ಶಾಂತಿ-ಸಾಮರಸ್ಯದ ಪ್ರತೀಕವಾಗಿಯೇ ಇತ್ತು. ಇದೀಗ ಬಿಜೆಪಿ ಟವರ್ ವಿಚಾರದಲ್ಲಿ ಕೋಮು ಸೌಹಾರ್ದತೆ ಕದಡುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನು ನೆಲಸಮಗೊಳಿಸುವ ಬಗ್ಗೆ ಬಿಜೆಪಿಯವರು ಪದೇಪದೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಹಾಗಾಗಿ ಇಲ್ಲಿ ಸುರಕ್ಷತಾ ಬೇಲಿಗಳನ್ನು ಹಾಕಿ, ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ರಾಷ್ಟ್ರಧ್ವಜ ಹಾರಿಸಲು ಬಂದವನ್ನು ಬಂಧಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Ramanujacharya Statue: ರಾಮಾನುಜಾಚಾರ್ಯ ಸಹಸ್ರಾಬ್ದಿ ಕಾರ್ಯಕ್ರಮಗಳ ಆರಂಭಕ್ಕೆ ಭರದ ಸಿದ್ಧತೆ