ಡೆಹ್ರಾಡೂನ್: ಏಪ್ರಿಲ್ 1ರಿಂದ 30ರವರೆಗೆ ಹರಿದ್ವಾರದಲ್ಲಿ ನಡೆಯಲಿರುವ ಕುಂಭಮೇಳಕ್ಕೆ ಹೋಗುವವರಿಗೆ ಉತ್ತರಖಾಂಡ ನೂತನ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಒಂದು ಸಮಾಧಾನಕರ ಸುದ್ದಿ ನೀಡಿದ್ದಾರೆ. ಕುಂಭಮೇಳಕ್ಕೆ ಬರುವವರಿಗೆ ಕೊವಿಡ್ 19 ಆರ್ಟಿಪಿಸಿಆರ್ ಟೆಸ್ಟ್ ರಿಪೋರ್ಟ್ ಬೇಕಿಲ್ಲ ಎಂದು ಹೇಳಿದ್ದಾರೆ. ಈಗಂತೂ ದೇಶದಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಯಾವುದೇ ಪ್ರಮುಖ ಯಾತ್ರೆ ಇರಲಿ, ಕೊವಿಡ್ 19 ನೆಗೆಟಿವ್ ರಿಪೋರ್ಟ್ ತನ್ನಿ ಎಂದು ಸಂಬಂಧಪಟ್ಟ ಆಡಳಿತಗಳು ಹೇಳುತ್ತಿವೆ. ಹೀಗಿರುವಾಗ ಕುಂಭಮೇಳಕ್ಕೆ ಬರುವವರು ಕೊವಿಡ್ 19 ನೆಗೆಟಿವ್ ವರದಿ ತರುವುದು ಬೇಡ ಎಂದು ಸಿಎಂ ಹೇಳಿದ್ದು ಅಚ್ಚರಿಗೆ ಕಾರಣವಾಗಿದೆ.
ಕುಂಭಮೇಳದಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಕೊವಿಡ್ 19 ಕಾರಣಕ್ಕೆ ಅದನ್ನು ರದ್ದುಮಾಡಲು ಸಾಧ್ಯವಿಲ್ಲ ಎಂದು ಹಿಂದಿನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕೂಡ ಹೇಳಿದ್ದರು. ಆದರೆ ಕುಂಭಮೇಳ ಸಂಬಂಧ ಎಸ್ಒಪಿ ಹೊರಡಿಸಿದ್ದ ಅವರು, ಇಲ್ಲಿಗೆ ಬರುವವರಿಗೆ ಆರ್ಟಿ-ಪಿಸಿಆರ್ ಟೆಸ್ಟ್ ವರದಿ ಕಡ್ಡಾಯ ಎಂದೂ ಹೇಳಿದ್ದರು. ಆದರೆ ಈಗಿನ ಸಿಎಂ ತಿರತ್ ಸಿಂಗ್, ನೆಗೆಟಿವ್ ವರದಿ ಅಗತ್ಯವಿಲ್ಲ ಎಂದಿದ್ದಾರೆ. ಕೊವಿಡ್-19 ಟೆಸ್ಟ್ ವರದಿ ಅಗತ್ಯತೆ ಕಾಣುತ್ತಿಲ್ಲ. ಕುಂಭಮೇಳಕ್ಕೆ ಆಗಮಿಸಲು ಸಿದ್ಧರಾಗಿರುವ ಜನರಲ್ಲಿನ ಆತಂಕ ದೂರ ಮಾಡಬೇಕಾಗಿದೆ. ಹಾಗಾಗಿ ನೆಗೆಟಿವ್ ರಿಪೋರ್ಟ್ ಬೇಕಿಲ್ಲ ಎಂದು ಸಿಎಂ ತಿಳಿಸಿದ್ದಾರೆ. ಇದು ತಿರತ್ ಸಿಂಗ್ ರಾವತ್ ಅವರು ಮುಖ್ಯಮಂತ್ರಿಯಾದ ಮೇಲೆ ಮಾಧ್ಯಮವೊಂದಕ್ಕೆ ನೀಡಿದ ಮೊದಲ ಸಂದರ್ಶನದಲ್ಲಿ ನೀಡಿದ ಹೇಳಿಕೆಯಾಗಿದೆ.
ಕುಂಭಮೇಳ ಎಂಬುದು 12ವರ್ಷಕ್ಕೊಮ್ಮೆ ಬರುವ ಆಚರಣೆಯಾಗಿದೆ. ಜನರಿಗೆ ಈ ಅವಕಾಶ ತಪ್ಪುವಂತೆ ಮಾಡಬಾರದು. ಕುಂಭಮೇಳಕ್ಕೆ ಲಕ್ಷಾಂತರ ಜನರು ಬರುತ್ತಾರೆ. ಅವರಿಗೆಲ್ಲ ಆರ್ಟಿ ಪಿಸಿಆರ್ ಟೆಸ್ಟ್ ಮಾಡುವುದು, ರಿಪೋರ್ಟ್ ಕೊಡುವುದು ಸುಲಭವೂ ಅಲ್ಲ. ನಮಗೆ ಸಂತರು, ಭಕ್ತರ ಸಂತೋಷವೇ ಮುಖ್ಯ. ಕುಂಭಮೇಳ ನಡೆಯುವ ಸ್ಥಳದಲ್ಲಿ ಕೊವಿಡ್-19 ನಿಯಮಗಳ ಪಾಲನೆ ಬಗ್ಗೆ ನಾವು ಖಂಡಿತ ನಿಗಾ ವಹಿಸುತ್ತೇವೆ ಎಂದೂ ಸಿಎಂ ತಿಳಿಸಿದ್ದಾರೆ.
ಮುಖ್ಯಮಂತ್ರಿಯಾಗುವ ಸುಳಿವು ಇರಲಿಲ್ಲ
ನೀವು ಮುಖ್ಯಮಂತ್ರಿಯಾಗುವ ಬಗ್ಗೆ ನಿಮಗೆ ಮೊದಲೇ ಗೊತ್ತಿತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ ರಾವತ್, ಇಲ್ಲ ಖಂಡಿತವಾಗಿಯೂ ಗೊತ್ತಿರಲಿಲ್ಲ. ಕೇಂದ್ರ ಮಂತ್ರಿಗಳು ಡೆಹ್ರಾಡೂನ್ನಲ್ಲಿ ಸಭೆ ಕರೆದಿದ್ದರು. ನಾನೂ ಎಲ್ಲರಂತೆ ಅಲ್ಲಿಗೆ ಹೋಗಿದ್ದೆ. ಆದರೆ ನನಗೆ ಇಷ್ಟು ದೊಡ್ಡ ಜವಾಬ್ದಾರಿ ಕೊಟ್ಟರು. ಅವರಿಗೆ ಕೃತಜ್ಞತೆಗಳು. ನಾನು ರಾಜ್ಯದಲ್ಲಿ ಶಿಕ್ಷಣ, ಪ್ರವಾಸೋದ್ಯಮ, ಮೂಲಸೌಕರ್ಯ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: Uttarakhand CM: ಉತ್ತರಾಖಂಡ ರಾಜ್ಯಕ್ಕೆ ನೂತನ ಮುಖ್ಯಮಂತ್ರಿಯನ್ನು ಘೋಷಿಸಿದ ಬಿಜೆಪಿ; ತಿರತ್ ಸಿಂಗ್ ರಾವತ್ಗೆ ಸಿಎಂ ಪಟ್ಟ
ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಿರತ್ ಸಿಂಗ್ ರಾವತ್