ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಸಾದವಾಗಿ ನೀಡುವ ಲಡ್ಡಿನಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಮಾಡಲಾಗಿದೆ ಎನ್ನುವ ವಿಚಾರ ಸಾಬೀತಾಗುತ್ತಿದ್ದಂತೆ. ಪ್ರಮುಖ ದೇವಸ್ಥಾನದ ಪ್ರಸಾದದ ಗುಣಮಟ್ಟವನ್ನು ಪರಿಶೀಲಿಸಲು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೂಚನೆ ನೀಡಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದ ಕನಕ ದುರ್ಗಮ್ಮ ದೇವಸ್ಥಾನ, ಶ್ರೀಶೈಲ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನ, ಅನ್ನವರಂ ಸತ್ಯನಾರಾಯಣ ಸ್ವಾಮಿ ದೇವಸ್ಥಾನ, ಸಿಂಹಾಚಲಂ ಅಪ್ಪಣ ದೇವಸ್ಥಾನದ ಪ್ರಸಾದದ ಗುಣಮಟ್ಟ ಪರೀಕ್ಷೆಗೆ ಸೂಚನೆ ನೀಡಲಾಗಿದೆ.
ದೇವಸ್ಥಾನಗಳಲ್ಲಿ ಬಳಕೆ ಆಗುತ್ತಿರುವ ತುಪ್ಪದ ಗುಣಮಟ್ಟ ಪರೀಕ್ಷೆಗೆ ಮುಂದಾಗಿದ್ದಾರೆ, ಶೀಘ್ರವೇ ಪ್ರಸಾದದ ಗುಣಮಟ್ಟದ ವರದಿ ಸಲ್ಲಿಸಲು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಸೂಚಿಸಿದ್ದಾರೆ.
ದೇವಾಲಯಗಳಲ್ಲಿ ಹಸುವಿನ ತುಪ್ಪದಿಂದ ಪ್ರಸಾದವನ್ನು ತಯಾರಿಸಲಾಗುತ್ತದೆಯೇ?, ಗುಣಮಟ್ಟದ ಮಾನದಂಡಗಳನ್ನು ಎಷ್ಟರ ಮಟ್ಟಿಗೆ ಅನುಸರಿಸಲಾಗುತ್ತಿದೆ ಎಂಬುದರ ಕುರಿತು ಸರ್ಕಾರ ಪರೀಕ್ಷೆ ನಡೆಸುತ್ತಿದೆ.
ಇಂದು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಪ್ರಾಯಶ್ಚಿತ್ತ ದೀಕ್ಷೆ ಪಡೆಯಲಿದ್ದಾರೆ, ಗುಂಟೂರು ಜಿಲ್ಲೆಯ ನಂಬೂರಿನ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ದಲ್ಲಿ ದೀಕ್ಷೆ ಸ್ವೀಕರಿಸಲಿದ್ದಾರೆ. ಇಂದಿನಿಂದ 10 ದಿನಗಳ ಕಾಲ ಪವನ್ ಕಲ್ಯಾಣ್ ದೀಕ್ಷಿಯಲ್ಲಿರಲಿದ್ದಾರೆ. ಬಳಿಕ ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಭೇಟಿ ನೀಡಿ ವ್ರತ ಪೂರೈಸಲಿದ್ದಾರೆ.
ಮತ್ತಷ್ಟು ಓದಿ: ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಬಳಕೆ, ಚಂದ್ರಬಾಬು ನಾಯ್ಡು ಗಂಭೀರ ಆರೋಪ
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಚಂದ್ರುಬಾಬು ನಾಯ್ಡು ತಿರುಪತಿ ದೇವಸ್ಥಾನದ ನೈವೇದ್ಯದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಆರೋಪಕ್ಕೂ ಮೊದಲು ಇದರಲ್ಲಿ ಕರ್ಪೂರವನ್ನು ಬಳಸಲಾಗುತ್ತಿದ್ದು ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎಂದು ಕರ್ಪೂರ ಬಳಕೆಯನ್ನು ಲಡ್ಡು ತಯಾರಿಕೆಯಿಂದ ತೆಗೆದು ಹಾಕಲಾಗಿದೆ.
ಕಳೆದ ಚುನಾವಣೆಯಲ್ಲಿ ಟಿಡಿಪಿ ನೇತೃತ್ವದ ಸರ್ಕಾರ ಜನಸೇನಾ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿತ್ತು. ಬುಧವಾರ ನಡೆದ ಎನ್ ಡಿಎ ಪಕ್ಷದ ಸಭೆಯಲ್ಲಿ ಚಂದ್ರಬಾಬು ನಾಯ್ಡು ಅವರು ಹಿಂದಿನ ಸರ್ಕಾರದ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಆರೋಪವನ್ನು ಕಟುವಾಗಿ ತಳ್ಳಿಹಾಕಿದೆ.
ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಕೆ ಮಾಡಿದ್ದರು, ದೇವಸ್ಥಾನದ ಪಾವಿತ್ರ್ಯತೆ ಕಾಪಾಡಲು ಪ್ರಯತ್ನಿಸುತ್ತಿದ್ದೇವೆ, ದೇವಾಲಯದ ಸಂಪ್ರದಾಯಗಳನ್ನು ಮರುಸ್ಥಾಪಿಸುವುದರ ಜೊತೆಗೆ, ದೇವಾಲಯವನ್ನು ಉಳಿಸಿಕೊಳ್ಳಲು ಸರ್ಕಾರವು ಪ್ರಯತ್ನಿಸುತ್ತಿದೆ ಎಂದರು.
ಈ ಆರೋಪಗಳ ನಡುವೆ, ಹಿರಿಯ ವೈಎಸ್‌ಆರ್ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ವೈವಿ ಸುಬ್ಬಾ ರೆಡ್ಡಿ ಅವರು ನಾಯ್ಡು ಅವರ ಹೇಳಿಕೆಯನ್ನು ದೇವಾಲಯದ ಪವಿತ್ರತೆ ಮತ್ತು ಅಸಂಖ್ಯಾತ ಹಿಂದೂಗಳ ನಂಬಿಕೆಯ ಮೇಲಿನ ದಾಳಿ ಎಂದು ಬಣ್ಣಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ