‘ನೈತಿಕ ಮಾನ್ಯತೆ ಇಲ್ಲ’; ಮೋದಿ ಪ್ರಮಾಣ ವಚನ ಸಮಾರಂಭ ಬಹಿಷ್ಕರಿಸಿದ ಟಿಎಂಸಿ ಸಂಸದೆ ಸಾಗರಿಕಾ ಘೋಷ್

ಇಂದು ಸಂಜೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಧಾನ ಮಂತ್ರಿಯಾಗಿ 3ನೇ ಅವಧಿಗೆ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಮೋದಿಯ ಜೊತೆಗೆ 30 ಸಚಿವರು ಕೂಡ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅದರಲ್ಲಿ ಕರ್ನಾಟಕದ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೆಸರು ಕೂಡ ಕೇಳಿಬರುತ್ತಿದೆ.

ನೈತಿಕ ಮಾನ್ಯತೆ ಇಲ್ಲ; ಮೋದಿ ಪ್ರಮಾಣ ವಚನ ಸಮಾರಂಭ ಬಹಿಷ್ಕರಿಸಿದ ಟಿಎಂಸಿ ಸಂಸದೆ ಸಾಗರಿಕಾ ಘೋಷ್
ಸಾಗರಿಕಾ ಘೋಷ್

Updated on: Jun 09, 2024 | 5:40 PM

ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸಂಸದೆ ಸಾಗರಿಕಾ ಘೋಷ್ (Sagarika Gose) ಇಂದು (ಭಾನುವಾರ) ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭದಲ್ಲಿ (PM Narendra Modi Swearing in Ceremony) ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಸಾಗರಿಕಾ ಘೋಷ್, “ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನೈತಿಕ ಮಾನ್ಯತೆಯಿಲ್ಲ. ಹೀಗಾಗಿ, ನಾನು ಆ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತಿದ್ದೇನೆ” ಎಂದಿದ್ದಾರೆ.

ಇಂದು ಸಂಜೆ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರ ಕೊನೆಯ 2 ಅವಧಿಗಿಂತ ಭಿನ್ನವಾಗಿ, ಅವರ ಮೂರನೇ ಅವಧಿಯು ಸಮ್ಮಿಶ್ರ ಸರ್ಕಾರವನ್ನು ಹೊಂದಿರುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 240 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 272 ಬಹುಮತದ ಮಾರ್ಕ್ ಅನ್ನು ತಲುಪಲು 32 ಸ್ಥಾನಗಳ ಕೊರತೆಯಿದೆ. ಹೀಗಾಗಿ, ಮಿತ್ರಪಕ್ಷಗಳ ಸಹಕಾರದಿಂದ ಬಿಜೆಪಿ ಸರ್ಕಾರ ರಚಿಸಲಿದೆ.

ಇದನ್ನೂ ಓದಿ: PM Modi Swearing-in Ceremony Live: ನರೇಂದ್ರ ಮೋದಿಗೆ 3ನೇ ಬಾರಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ

ಪ್ರತಿಪಕ್ಷದ ರಾಜಕಾರಣಿಗಳಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ. ಆದರೆ, ಸಾಗರಿಕಾ ಘೋಷ್ ಪ್ರಕಾರ, ನರೇಂದ್ರ ಮೋದಿ “ಜನರ ಜನಾದೇಶವನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಆ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.

“ಗೌರವಾನ್ವಿತ ರಾಷ್ಟ್ರಪತಿಗಳೇ. ನಿಮ್ಮ ಆತ್ಮೀಯ ಆಹ್ವಾನಕ್ಕೆ ಧನ್ಯವಾದಗಳು. ಜನಾದೇಶವನ್ನು ಕಳೆದುಕೊಂಡಿರುವ ನರೇಂದ್ರ ಮೋದಿ ಅವರ ಪ್ರಮಾಣ ವಚನದ ನೈತಿಕ ನ್ಯಾಯಸಮ್ಮತತೆಯನ್ನು ವಿರೋಧ ಪಕ್ಷದಲ್ಲಿರುವ ನಾವು ಸ್ವೀಕರಿಸದ ಕಾರಣ ನಾನು ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ” ಎಂದು ಸಾಗರಿಕಾ ಘೋಷ್ ಎಕ್ಸ್​ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Modi Cabinet: ಮೋದಿ ಸಂಪುಟದಲ್ಲಿ ಸಚಿವರಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಇಂದು ಪ್ರಮಾಣವಚನ ಸ್ವೀಕಾರ ಸಾಧ್ಯತೆ

ಇಂದು ಸಂಜೆ 7:15ಕ್ಕೆ ರಾಷ್ಟ್ರಪತಿ ಭವನದಲ್ಲಿ ಮೋದಿ ಅವರು ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೂ ಮುನ್ನ ಸಚಿವ ಸಂಪುಟದ ಭಾಗವಾಗಿರುವವರು ಪ್ರಧಾನಿ ನಿವಾಸದಲ್ಲಿ ಚಹಾ ಕೂಟದಲ್ಲಿ ಪಾಲ್ಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us