ಇದು ಸರಿಯಲ್ಲ: ಉತ್ತರ ಪ್ರದೇಶ ಸರ್ಕಾರದ ಬುಲ್​ಡೋಜರ್ ಆಟಾಟೋಪಕ್ಕೆ ಅಲಹಾಬಾದ್ ಹೈಕೋರ್ಟ್ ನಿವೃತ್ತ ಸಿಜೆ ಆಕ್ಷೇಪ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 13, 2022 | 9:59 AM

ಮನೆಗಳನ್ನು ಕೆಡವಲು ಬುಲ್​ಡೋಜರ್ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್, ಅಲಹಾಬಾದ್ ಹೈಕೋರ್ಟ್ ಮತ್ತು ಮಧ್ಯಪ್ರದೇಶ ಹೈಕೋರ್ಟ್​ಗಳಲ್ಲಿ ಹಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ಇದು ಸರಿಯಲ್ಲ: ಉತ್ತರ ಪ್ರದೇಶ ಸರ್ಕಾರದ ಬುಲ್​ಡೋಜರ್ ಆಟಾಟೋಪಕ್ಕೆ ಅಲಹಾಬಾದ್ ಹೈಕೋರ್ಟ್ ನಿವೃತ್ತ ಸಿಜೆ ಆಕ್ಷೇಪ
ಪ್ರಾತಿನಿಧಿಕ ಚಿತ್ರ
Follow us on

ಅಲಹಾಬಾದ್: ಉತ್ತರ ಪ್ರದೇಶ ಸರ್ಕಾರವು ಪ್ರಯಾಗ್​ರಾಜ್​ನಲ್ಲಿ ಭಾನುವಾರ ಮೊಹಮದ್ ಜಾವೇದ್ ಅವರ ಮನೆಯನ್ನು ಬುಲ್​ಡೋಜರ್ ಬಳಸಿ ಕೆಡವಿದ ಕ್ರಮವನ್ನು ಅಲಹಾಬಾದ್ ಹೈಕೋರ್ಟ್​ನ (Allahabad High Court) ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಆಕ್ಷೇಪಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರವು (Uttar Pradesh Govt) ಈವರೆಗೆ ಮಾಡಿದಂತೆ ಒಂದಿಷ್ಟು ನೆಪಗಳನ್ನು ಹೇಳುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮನೆಗಳನ್ನು ಕೆಡವಲು ಬುಲ್​ಡೋಜರ್ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್, ಅಲಹಾಬಾದ್ ಹೈಕೋರ್ಟ್ ಮತ್ತು ಮಧ್ಯಪ್ರದೇಶ ಹೈಕೋರ್ಟ್​ಗಳಲ್ಲಿ ಹಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ಮನೆಗಳನ್ನು ಕೆಡವುವ ಕಾರ್ಯಾಚರಣೆಗೆ ಮುನ್ಸಿಪಲ್ ಮತ್ತು ನಗರ ಯೋಜನಾ ಕಾನೂನುಗಳನ್ನು ಉಲ್ಲಂಘಿಸಿದ ಅಂಶಗಳನ್ನು ನೆಪವಾಗಿ ತೋರಿಸಲಾಗುತ್ತಿದೆ. ಇಂಥ ಕಾರ್ಯಾಚರಣೆಗಳು ಮೂಲಭೂತ ಹಕ್ಕು ಉಲ್ಲಂಘಿಸುವುದಷ್ಟೇ ಅಲ್ಲದೆ, ಮನೆ ಕೆಡವುವ ಕಾರ್ಯಾಚರಣೆ ವೇಳೆ ಅನುಸರಿಸಬೇಕಾದ ನಿಯಮಗಳನ್ನೂ ಲೆಕ್ಕಕ್ಕೆ ಇರಿಸಿಕೊಂಡಿಲ್ಲ ಎನ್ನುವುದನ್ನು ತೋರಿಸುತ್ತದೆ. ಪ್ರತಿಭಟನೆಗಳು ನಡೆದ ನಂತರ ಸಮಾಜದ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ತೆರವು ಕಾರ್ಯಾಚರಣೆ ನಿರ್ವಹಿಸಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನೀವು ಮಾಡಿದ್ದನ್ನು ಒಪ್ಪಲು ಆಗುವುದಿಲ್ಲ. ಈ ಕಟ್ಟಡಗಳು ಅಕ್ರಮ ಎಂದೇ ಅಂದುಕೊಳ್ಳೋಣ, ಆದರೆ ಕೋಟ್ಯಂತರ ಭಾರತೀಯರು ಬದುಕುವ ರೀತಿ ಇದು. ವ್ಯಕ್ತಿಯೊಬ್ಬ ಪೊಲೀಸರ ವಶದಲ್ಲಿದ್ದಾಗ ಅವರ ಮನೆಯನ್ನು ಕೆಡವಿದ್ದನ್ನು ಒಪ್ಪಲು ಸಾಧ್ಯವಿಲ್ಲ. ಇದು ತಾಂತ್ರಿಕ ವಿಚಾರ ಅಲ್ಲ, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಅಂಶ ಎಂದು ಅಲಹಾಬಾದ್ ಹೈಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಥೂರ್ ಹೇಳಿದರು.

ಮಥೂರ್ ಅವರು ಈ ಹಿಂದೆಯೂ ರಾಜ್ಯ ಸರ್ಕಾರದ ಆದೇಶವೊಂದನ್ನು ಪ್ರಸ್ನಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಚಿತ್ರ ಮತ್ತು ಹೆಸರನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಅವಮಾನಿಸಲು ಮುಂದಾಗಿದ್ದ ಲಖನೌ ನಗರಾಡಳಿತದ ವಿವಾದಾತ್ಮಕ ನಿರ್ಧಾರದ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ಆರಂಭಿಸಿದ್ದರು. ಸರ್ಕಾರದ ನಿರ್ಧಾರವು ಕಾನೂನುಬಾಹಿರ ಮತ್ತು ಜನರ ಖಾಸಗಿ ಬದುಕಿನ ಹಕ್ಕು ಉಲ್ಲಂಘಿಸುತ್ತದೆ ಎಂದು ಹೇಳಿದ್ದರು.

ಕಳೆದ ಏಪ್ರಿಲ್ 21ರಂದು ದೆಹಲಿಯ ಜಹಂಗೀರ್​ಪುರಿ ಪ್ರದೇಶದಲ್ಲಿ ಹಿಂಸಾಚಾರ ವರದಿಯಾದ ಒಂದು ದಿನದ ನಂತರ ಉತ್ತರ ದೆಹಲಿ ನಗರಪಾಲಿಕೆ ನಡೆಸುತ್ತಿದ್ದ ಕಟ್ಟಡ ತೆರವು ಕಾರ್ಯಾಚರಣೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತ್ತು. ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರಿದ್ದ ನ್ಯಾಯಪೀಠವು, ‘ತೆರವು ಕಾರ್ಯಾಚರಣೆಗೆ ಮೊದಲು ಅಗತ್ಯ ಕ್ರಮಗಳನ್ನು ಸರಿಸಲಾಗಿದೆಯೇ ಎನ್ನುವುದನ್ನು ಪರಿಶೀಲಿಸಲಾಗುವುದು’ ಎಂದು ಹೇಳಿದ್ದರು. ನ್ಯಾಯಮೂರ್ತಿ ನಾಗೇಶ್ವರರಾವ್ ಈಗ ನಿವೃತ್ತರಾಗಿದ್ದಾರೆ. ಪ್ರಸ್ತುತ ಈ ಪ್ರಕರಣದ ವಿಚಾರಣೆಯನ್ನು ಆಗಸ್ಟ್​ಗೆ ಮುಂದೂಡಲಾಗಿದೆ.

ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವವರ ಮನೆಗಳನ್ನು ಕೆಡವುವ ಸರ್ಕಾರದ ಕ್ರಮಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ಕಳೆದ ಏಪ್ರಿಲ್ ತಿಂಗಳಲ್ಲಿ ತಿರಸ್ಕರಿಸಿತ್ತು. ಆದರೆ ಸರ್ಕಾರದ ಕ್ರಮಗಳಿಂದ ಬಾಧಿತರಾದವರು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಿತ್ತು. ಈ ಅರ್ಜಿಯ ವಿಚಾರಣೆ ಇನ್ನೂ ಬಾಕಿಯಿದೆ.

ದೇಶದ ವಿವಿಧೆಡೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬುಲ್​ಡೋಜರ್​ಗಳನ್ನು ಬಳಸಿ ಹಠಾತ್ ಮನೆ ಉರುಳಿಸುವ ಕಾರ್ಯಾಚರಣೆಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಮಧ್ಯ ಪ್ರದೇಶದಲ್ಲಿ ಪಿಎಂ ಆವಾಸ್ ಯೋಜನೆಯನ್ವಯ ನಿರ್ಮಿಸಲಾಗಿದ್ದ ಮನೆಯನ್ನೂ ಅಧಿಕಾರಿಗಳು ಕೆಡವಿದ್ದರು. ಮನೆಯ ಮಾಲೀಕರಾದ ಮಹಿಳೆಗೆ ಮನವಿ ಸಲ್ಲಿಸಲೂ ಕಾಲಾವಕಾಶ ಕೊಟ್ಟಿರಲಿಲ್ಲ. ಈ ಕುರಿತು ಇಂಡಿಯನ್ ಎಕ್ಸ್​ಪ್ರೆಸ್ ದಿನಪತ್ರಿಕೆ ಪ್ರಕಟಿಸಿದ್ದ ವರದಿ ದೇಶವ್ಯಾಪಿ ಸಂಚಲನ ಮೂಡಿಸಿತ್ತು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ