Delhi Chalo: ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಮೂಲಕ ರೈತರ ಪರೇಡ್!
ಕೇಂದ್ರ ಸರ್ಕಾರದ ಜೊತೆ ಜನವರಿ 4ರಂದು ನಡೆಯಲಿರುವ ಸಭೆಯ ಮುನ್ನವೇ ರೈತ ಒಕ್ಕೂಟವೊಂದು ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ಕಿಸಾನ್ ಪರೇಡ್ ಆಯೋಜಿಸುವುದಾಗಿ ಘೋಷಿಸಿದೆ.
ದೆಹಲಿ: ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ‘ಟ್ರ್ಯಾಕ್ಟರ್ ಕಿಸಾನ್ ಪರೇಡ್’ ನಡೆಸುತ್ತೇವೆ ಎಂದು ದೆಹಲಿ ಚಲೋ ಚಳುವಳಿ ನಿರತ ಕ್ರಾಂತಿಕಾರಿ ಕಿಸಾನ್ ಯೂನಿಯನ್ನ ಅಧ್ಯಕ್ಷ ದರ್ಶನ್ ಪಾಲ್ ತಿಳಿಸಿದ್ದಾರೆ. ಅಲ್ಲದೆ, ಜನವರಿ 23ರಂದು ಎಲ್ಲಾ ರಾಜ್ಯಗಳ ರಾಜ್ಯಪಾಲರ ನಿವಾಸಗಳತ್ತ ಮೆರವಣಿಗೆ ಆಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಅರ್ಧ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂಬ ಹೇಳಿಕೆಯನ್ನು ವ್ಯಂಗ್ಯ ಮಾಡಿರುವ ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್, ‘ಜನವರಿ 26ರ ಒಳಗೆ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಇಲ್ಲದಿದ್ದರೆ ರಾಜಧಾನಿಗೆ ಮುತ್ತಿಗೆ ಹಾಕಲಾಗುವುದು ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ದೇಶದ ಎಲ್ಲಾ ಕೃಷಿ ಕುಟುಂಬಗಳು ಈ ಚಳುವಳಿಗೆ ಓರ್ವ ಸದಸ್ಯರನ್ನಾದರೂ ಕಳುಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅತ್ಯಂತ ಶಾಂತಿಯುತವಾಗಿ ಚಳುವಳಿ ನಡೆಸುತ್ತಿದ್ದೇವೆ. ಇನ್ನು ಮುಂದೆಯೂ ಅಷ್ಟೇ ಶಾಂತಿಯುತವಾಗಿ ಚಳುವಳಿ ಮುಂದುವರೆಸುತ್ತೇವೆ.ಈವರೆಗೆ ಚಳುವಳಿಯಲ್ಲಿ 50ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಅವರಿಗೆ ಗೌರವ ಸಲ್ಲಿಸುವುದಾಗಿ ರೈತ ನಾಯಕ ಅಶೋಕ್ ಧವಳೆ ತಿಳಿಸಿದ್ದಾರೆ.
On 23rd January, we will hold marches towards Governors' Houses in different States, and 'tractor Kisan Parade' will be held on 26th January in Delhi: Krantikari Kisan Union President Darshan Pal#FarmLaws pic.twitter.com/y9h3oPmL0Z
— ANI (@ANI) January 2, 2021
ಹೃದಯಾಘಾತದಿಂದ ಮೃತಪಟ್ಟ ಚಳುವಳಿ ನಿರತ ರೈತ ಘಾಜಿಪುರ್ ಗಡಿಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ 57 ವರ್ಷದ ರೈತ ಮೋಹನ್ ಸಿಂಗ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಮೃತಪಟ್ಟಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇತ್ತ 2022ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಂಜಾಬ್ನ ರೈತರನ್ನು ಸೆಳೆಯಲು ಆಮ್ಆದ್ಮಿ ಪಕ್ಷ ಯತ್ನಿಸುತ್ತಿದೆ. ಆಮ್ಆದ್ಮಿ ಪಕ್ಷದ ಭರ್ಜರಿ ಜಯದಿಂದ ಮಾತ್ರ ಪಂಜಾಬ್ನ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಪಕ್ಷದ ಪಂಜಾಬ್ ಉಸ್ತುವಾರಿ ರಾಘವ್ ಛಡ್ಡಾ ಹೇಳಿದ್ದಾರೆ.
Published On - 2:26 pm, Sat, 2 January 21