ನಕ್ಸಲರಿಂದ ಬೆದರಿಕೆ; ಪದ್ಮಶ್ರೀ ಪ್ರಶಸ್ತಿ ವಾಪಾಸ್ ನೀಡಲು ವೈದ್ಯ ಹೇಮಚಂದ್ ಮಾಂಝಿ ನಿರ್ಧಾರ

|

Updated on: May 27, 2024 | 7:43 PM

Hemchand Manjhi: ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ಸಾಂಪ್ರದಾಯಿಕ ವೈದ್ಯ ಹೇಮಚಂದ್ ಮಾಂಝಿ ಅವರಿಗೆ ನಕ್ಸಲರಿಂದ ಜೀವ ಬೆದರಿಕೆ ಉಂಟಾದ ಹಿನ್ನೆಲೆಯಲ್ಲಿ ಅವರು ಪದ್ಮಶ್ರೀ ಪ್ರಶಸ್ತಿಯನ್ನು ವಾಪಾಸ್ ನೀಡಲು ನಿರ್ಧರಿಸಿದ್ದಾರೆ.

ನಕ್ಸಲರಿಂದ ಬೆದರಿಕೆ; ಪದ್ಮಶ್ರೀ ಪ್ರಶಸ್ತಿ ವಾಪಾಸ್ ನೀಡಲು ವೈದ್ಯ ಹೇಮಚಂದ್ ಮಾಂಝಿ ನಿರ್ಧಾರ
ಹೇಮಚಂದ್ ಮಾಂಝಿ
Follow us on

ನವದೆಹಲಿ: ಇತ್ತೀಚಿನ ತಿಂಗಳುಗಳಲ್ಲಿ ಹೇಮಚಂದ್ ಮಾಂಝಿ (Hemchand Manjhi) ಅವರು ನಕ್ಸಲೈಟ್ ಬಣಗಳಿಂದ ಅನೇಕ ಬೆದರಿಕೆಗಳನ್ನು ಸ್ವೀಕರಿಸಿದ್ದಾರೆ. ಈ ಬೆದರಿಕೆಗಳಿಂದ ತನ್ನ ಸುರಕ್ಷತೆ ಮತ್ತು ತನ್ನ ಕುಟುಂಬದ ಭದ್ರತೆಯನ್ನು ಕಾಪಾಡಿಕೊಳ್ಳಲು ಪದ್ಮಶ್ರೀ ಪ್ರಶಸ್ತಿಯನ್ನು (Padma shri Award) ವಾಪಾಸ್ ನೀಡಲು ಅವರು ನಿರ್ಧರಿಸಿದ್ದಾರೆ. ಛತ್ತೀಸ್​ಗಢದ ನಾರಾಯಣಪುರ ಜಿಲ್ಲೆಯ ಸಾಂಪ್ರದಾಯಿಕ ವೈದ್ಯರಾಗಿರುವ ಹೇಮಚಂದ್ ಮಾಂಝಿ ಅವರು ನಕ್ಸಲೀಯರ ಬೆದರಿಕೆಯ ಹಿನ್ನೆಲೆಯಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುವ ನಿರ್ಧಾರವನ್ನು ಇಂದು (ಸೋಮವಾರ) ಪ್ರಕಟಿಸಿದ್ದಾರೆ.

ವೈದ್ಯರಾಜ್ ಎಂದೇ ಜನಪ್ರಿಯರಾಗಿರುವ ಹೇಮಚಂದ್ ಮಾಂಝಿ, ತಮಗೆ ಹೆಚ್ಚುತ್ತಿರುವ ಬೆದರಿಕೆಗಳಿಂದಾಗಿ ತಮ್ಮ ವೈದ್ಯಕೀಯ ಅಭ್ಯಾಸವನ್ನು ನಿಲ್ಲಿಸಲು ಯೋಜಿಸಿದ್ದಾರೆ. 72 ವರ್ಷದ ಹೇಮಚಂದ್ ಮಾಂಝಿ ಅವರು ಸಾಂಪ್ರದಾಯಿಕ ಔಷಧಕ್ಕೆ ನೀಡಿದ ಕೊಡುಗೆಗಳಿಗಾಗಿ ಕಳೆದ ತಿಂಗಳು ಭಾರತದ 4ನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.

ಇದನ್ನೂ ಓದಿ: Padma Awards 2024: ಚಿರಂಜೀವಿ, ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ರಾಷ್ಟ್ರಪತಿಯಿಂದ ಪದ್ಮ ಪ್ರಶಸ್ತಿ ಪ್ರದಾನ

ಆದರೆ, ಭಾನುವಾರ ರಾತ್ರಿ ನಕ್ಸಲೀಯರು ಚಮೇಲಿ ಮತ್ತು ಗೌರ್ದಂಡ್ ಗ್ರಾಮಗಳಲ್ಲಿ ನಿರ್ಮಾಣ ಹಂತದಲ್ಲಿದ್ದ 2 ಮೊಬೈಲ್ ಟವರ್‌ಗಳಿಗೆ ಬೆಂಕಿ ಹಚ್ಚಿದ್ದು, ಮಾಂಝಿಗೆ ಬೆದರಿಕೆ ಹಾಕುವ ಬ್ಯಾನರ್ ಮತ್ತು ಕರಪತ್ರಗಳನ್ನು ಬಿಟ್ಟು ಹೋಗಿದ್ದಾರೆ. ಕರಪತ್ರಗಳಲ್ಲಿ ಮಾಂಝಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋವನ್ನು ಹಾಕಲಾಗಿತ್ತು.

ಮಾಂಝಿ ಮೇಲಿರುವ ಆರೋಪವೇನು?:

ಸಾಂಪ್ರದಾಯಿಕ ವೈದ್ಯರಾಗಿರುವ ಹೇಮಚಂದ್ ಮಾಂಝಿ ಅವರು ಛೋಟೆಡೊಂಗರ್‌ನಲ್ಲಿನ ಆಮ್ಡೈ ಘಾಟಿ ಕಬ್ಬಿಣದ ಅದಿರು ಯೋಜನೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಮತ್ತು ಅದಕ್ಕೆ ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂದು ನಕ್ಸಲರು ಆರೋಪಿಸಿದ್ದಾರೆ. ಆ ಆರೋಪಗಳನ್ನು ಮಾಂಝಿ ಅವರು ನಿರಾಕರಿಸಿದ್ದಾರೆ. ಮಾಂಝಿ ಅವರು ಇಂದು ಈ ಬಗ್ಗೆ ಮಾತನಾಡಿದ್ದು, ನಾನು ಈ ವಿಷಯದಲ್ಲಿ ಮುಗ್ಧ. ನಾನು ಯಾವುದೇ ಗಣಿಗಾರಿಕೆಯೊಂದಿಗೆ ಭಾಗಿಯಾಗಿಲ್ಲ ಎಂದಿದ್ದಾರೆ.

“ನನ್ನ ಕುಟುಂಬದೊಂದಿಗೆ ಚರ್ಚಿಸಿದ ನಂತರ ನಾನು ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಲು ಮತ್ತು ನನ್ನ ಅಭ್ಯಾಸವನ್ನು ನಿಲ್ಲಿಸಲು ನಿರ್ಧರಿಸಿದ್ದೇನೆ” ಎಂದು ಮಾಂಝಿ ಪಿಟಿಐಗೆ ತಿಳಿಸಿದ್ದಾರೆ. ವಿವಿಧ ಕಾಯಿಲೆಗಳಿಗೆ, ವಿಶೇಷವಾಗಿ ಕ್ಯಾನ್ಸರ್‌ಗೆ ಗಿಡಮೂಲಿಕೆ ಪರಿಹಾರಗಳನ್ನು ಒದಗಿಸುವುದು ಸೇರಿದಂತೆ ಅವರ ಜೀವಮಾನದ ಸೇವೆಗಾಗಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು.

ಇದನ್ನೂ ಓದಿ: Padma Awards 2024 Winners List: ಕರ್ನಾಟಕದ ಇಬ್ಬರು ಸೇರಿದಂತೆ 34 ಸಾಧಕರಿಗೆ ಪದ್ಮಶ್ರೀ, ಇಲ್ಲಿದೆ ಪುರಸ್ಕೃತರ ಪಟ್ಟಿ

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಾಂಝಿ ಅವರ ಸೋದರಳಿಯ ಕೋಮಲ್ ಮಾಂಝಿ ಅವರನ್ನು ಆಮದೈ ಘಾಟಿ ಯೋಜನೆಯ ಏಜೆಂಟ್ ಎಂದು ಆರೋಪಿಸಿ ನಕ್ಸಲೀಯರು ಕೊಂದಿದ್ದರು. ಇದರ ನಂತರ, ಮಾಂಝಿ ಮತ್ತು ಅವರ ಕುಟುಂಬವು ಪೊಲೀಸ್ ರಕ್ಷಣೆಯಲ್ಲಿ ವಾಸಿಸುವ ಸುರಕ್ಷತೆಗಾಗಿ ನಾರಾಯಣಪುರ ಪಟ್ಟಣಕ್ಕೆ ಸ್ಥಳಾಂತರಗೊಂಡಿತ್ತು.

ಜೈಸ್ವಾಲ್ ನೆಕೋ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ಮಂಜೂರು ಮಾಡಲಾದ ಆಮ್ಡೈ ಘಾಟಿ ಕಬ್ಬಿಣದ ಅದಿರು ಗಣಿಯು ನಕ್ಸಲೀಯರಿಂದ ದೀರ್ಘಕಾಲದ ವಿರೋಧವನ್ನು ಎದುರಿಸುತ್ತಿದೆ. ಮಾಂಝಿ ಅವರ ಪ್ರಶಸ್ತಿಯನ್ನು ಹಿಂದಿರುಗಿಸುವ ನಿರ್ಧಾರವು ಸ್ಥಳೀಯ ಸಮುದಾಯಗಳು ಮತ್ತು ಸಾರ್ವಜನಿಕ ಸೇವೆಗೆ ಮೀಸಲಾದ ವ್ಯಕ್ತಿಗಳ ಮೇಲೆ ನಕ್ಸಲೀಯ ಬೆದರಿಕೆಗಳ ತೀವ್ರ ಪರಿಣಾಮವನ್ನು ಎತ್ತಿ ತೋರಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ