AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಸೀದಿಯೊಳಗೆ ಲಾಕ್, ವಿಡಿಯೋ ಕಾಲ್, ಗುಂಡಿನ ದಾಳಿ; ಎಲ್​ಇಟಿ ಉಗ್ರ ಲತೀಫ್ ಭಟ್​ ಅಂತಿಮ ಕ್ಷಣ ಹೇಗಿತ್ತು?

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮಸೀದಿಯೊಂದರಲ್ಲಿ ಭದ್ರತಾ ಪಡೆಗಳಿಂದ ಸುತ್ತುವರಿಯಲ್ಪಟ್ಟಿದ್ದ ಕಾಶ್ಮೀರ ಕಣಿವೆಯ ಸ್ಥಳೀಯ ಉಗ್ರ ಹಾಗೂ ಲಷ್ಕರ್-ಎ-ತೊಯ್ಬಾ (ಎಲ್​ಇಟಿ) ಕಮಾಂಡರ್ ಮೊಹಮ್ಮದ್ ಲತೀಫ್ ಭಟ್ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ. ಆತನನ್ನು ಹತ್ಯೆ ಮಾಡುವ ಮುನ್ನ ಭದ್ರತಾ ಅಧಿಕಾರಿಗಳು ಆತನಿಗೆ ಶರಣಾಗುವಂತೆ ನಡೆಸಿದ ದೀರ್ಘಕಾಲದ ವಿಡಿಯೋ ಕರೆ, ಉಗ್ರನ ಹಠಮಾರಿ ನಿಲುವು ಹಾಗೂ ಮಸೀದಿಗೆ ಹಾನಿಯಾಗದಂತೆ ಅಶ್ರುವಾಯು ಪ್ರಯೋಗಿಸಿ ಆತನನ್ನು ಹೊರಗೆಳೆದು ಹತ್ಯೆ ಮಾಡಿದ ಅಂತಿಮ ಕ್ಷಣಗಳ ರೋಚಕ ವಿವರಗಳು ಇದೀಗ ಬಹಿರಂಗವಾಗಿವೆ.

ಮಸೀದಿಯೊಳಗೆ ಲಾಕ್, ವಿಡಿಯೋ ಕಾಲ್, ಗುಂಡಿನ ದಾಳಿ; ಎಲ್​ಇಟಿ ಉಗ್ರ ಲತೀಫ್ ಭಟ್​ ಅಂತಿಮ ಕ್ಷಣ ಹೇಗಿತ್ತು?
ಲತೀಫ್ ಭಟ್Image Credit source: PTI
ಸುಷ್ಮಾ ಚಕ್ರೆ
|

Updated on: Nov 18, 2026 | 4:27 PM

Share

ಶ್ರೀನಗರ, ನವೆಂಬರ್ 18: ಕಳೆದ ವಾರವಷ್ಟೇ ಭದ್ರತಾ ಪಡೆಗಳ ಬಲೆಗೆ ಬಿದ್ದು ಪರಾರಿಯಾಗಿದ್ದ 22 ವರ್ಷದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಲತೀಫ್ ಭಟ್ ಇಂದು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನ ಮಸೀದಿಯೊಂದರಲ್ಲಿ ಅಡಗಿಕೊಂಡಿದ್ದ ವೇಳೆ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ. ಆತನನ್ನು ಹತ್ಯೆ ಮಾಡುವ ಮುನ್ನ ಭದ್ರತಾ ಅಧಿಕಾರಿಗಳು ಆತನಿಗೆ ವಿಡಿಯೋ ಕರೆ ಮಾಡಿ ಶರಣಾಗುವಂತೆ ಮನವಿ ಮಾಡಿದ್ದರು. ಆದರೆ ಆತ ಶರಣಾಗಲು ನಿರಾಕರಿಸಿದ್ದನು.

ದೀರ್ಘಕಾಲದ ವಿಡಿಯೋ ಕರೆ, ಶರಣಾಗುವಂತೆ ಪದೇ ಪದೇ ಮಾಡಿದ ಮನವಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟರೆ ಬದುಕುಳಿಯುವ ಭರವಸೆ ಮೂಲಕ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳು ಲಷ್ಕರ್-ಎ-ತೊಯ್ಬಾ (ಎಲ್​ಇಟಿ) ಕಮಾಂಡರ್ ಲತೀಫ್ ಭಟ್‌ನನ್ನು ಶರಣಾಗುವಂತೆ ಮನವೊಲಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದವು. ಆದರೆ ಕುಲ್ಗಾಮ್‌ನ ಮಸೀದಿಯೊಂದರ ಒಳಗೆ ಅಡಗಿಕೊಂಡಿದ್ದ ಲತೀಫ್ ಭಟ್ ಶರಣಾಗಲು ನಿರಾಕರಿಸಿದನು. “ನನ್ನೊಂದಿಗೆ ಅಲ್ಲಾನನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲ” ಎಂದು ಭದ್ರತಾ ಪಡೆಗಳಿಗೆ ಹೇಳುವ ಮೂಲಕ ಆತ ತನ್ನ ಶರಣಾಗತಿಯ ಕೊನೆಯ ಅವಕಾಶವನ್ನೂ ತಿರಸ್ಕರಿಸಿದನು.

ಕಾಶ್ಮೀರ ಕಣಿವೆಯ ಕೊನೆಯ ಉಗ್ರ:

ಕಳೆದ ವರ್ಷ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ್ದ ಕುಲ್ಗಾಮ್‌ನ ಖ್ರೇವಾನ್ ನಿವಾಸಿ ಲತೀಫ್ ಭಟ್, ಪ್ರಸ್ತುತ ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿದ್ದ ಕೊನೆಯ ಸ್ಥಳೀಯ ಉಗ್ರನಾಗಿದ್ದನು. ನವೆಂಬರ್ 11ರಂದು ಕುಲ್ಗಾಮ್‌ನ ಮೀರ್ ಬಜಾರ್ ಬಳಿಯ ಅಖ್ರಾನ್ ಗ್ರಾಮದಲ್ಲಿ ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲೆ ನಡೆದ ದಾಳಿ ಸೇರಿದಂತೆ ಮೂರ್ನಾಲ್ಕು ಭೀಕರ ದಾಳಿಗಳಲ್ಲಿ ಈತ ಭಾಗಿಯಾಗಿದ್ದನು. 2 ದಿನಗಳ ಹಿಂದೆ ಕುಲ್ಗಾಮ್‌ನ ಲಾರೂ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಈತನ ಸಹಚರ ಉಮರ್ ನಾಸಿರ್ ಹತನಾಗಿದ್ದ, ಲತೀಫ್ ಪರಾರಿಯಾಗಿದ್ದನು.

ಇದನ್ನೂ ಓದಿ: ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ, ಲಷ್ಕರ್ ಕಮಾಂಡರ್ ಲತೀಫ್ ಭಟ್ ಸೇರಿ ಇಬ್ಬರು ಉಗ್ರರ ಹತ್ಯೆ

ಮಸೀದಿಯೊಳಗೆ ಅಡಗಿಕೊಂಡಿದ್ದ ಉಗ್ರನಿಗೆ ವಿಡಿಯೋ ಕರೆ:

ಇಂದು ಮುಂಜಾನೆ ಭದ್ರತಾ ಪಡೆಗಳು ಕುಲ್ಗಾಮ್‌ನಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದಾಗ, ಲತೀಫ್ ಸ್ಥಳೀಯ ಮಸೀದಿಯೊಂದರ ಒಳಗೆ ಪ್ರವೇಶಿಸಿ ಮುಂಜಾನೆ 2.45ರ ಸುಮಾರಿಗೆ ಗುಂಡಿನ ದಾಳಿ ಆರಂಭಿಸಿದನು. ಆತನ ಪ್ರಾಣ ಉಳಿಸುವ ಉದ್ದೇಶದಿಂದ ಕುಲ್ಗಾಮ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ  ಅನಾಯತ್ ಅಲಿ ಅವರು ಖುದ್ದಾಗಿ ವಿಡಿಯೋ ಕರೆ ಮಾಡಿ ದೀರ್ಘಕಾಲ ಮಾತನಾಡಿದರು. “ನೀನು ಇನ್ನೂ ಚಿಕ್ಕವನು, ನಿನ್ನ ಮುಂದೆ ಇಡೀ ಜೀವನವಿದೆ. ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗು, ನಾವು ನಿನ್ನೊಂದಿಗಿದ್ದೇವೆ” ಎಂದು ಅಧಿಕಾರಿಗಳು ಭರವಸೆ ನೀಡಿದರು.

‘ನನ್ನೊಂದಿಗೆ ಅಲ್ಲಾ ಇದ್ದಾನೆ’ ಎಂದ ಉಗ್ರ:

ಆದರೆ, ಪೊಲೀಸ್ ಅಧಿಕಾರಿಗಳ ಸತತ ಮನವೊಲಿಕೆಯ ಹೊರತಾಗಿಯೂ ಲತೀಫ್ ಶರಣಾಗಲು ಒಪ್ಪಲಿಲ್ಲ. ವಿಡಿಯೋ ಕರೆಯಲ್ಲಿ ಮಾತನಾಡಿದ ಆತ, “ನಾನು ಅಲ್ಲಾನನ್ನು ಭೇಟಿಯಾಗಲು ಹೋಗುತ್ತಿದ್ದೇನೆ, ನನಗೆ ತುಂಬಾ ಸಂತೋಷವಾಗಿದೆ. ನನ್ನೊಂದಿಗೆ ಸರ್ವಶಕ್ತನಾದ ಅಲ್ಲಾ ಮಾತ್ರ ಇದ್ದಾನೆ” ಎಂದು ಹೇಳುವ ಮೂಲಕ ತನ್ನ ಜೀವ ಉಳಿಸಿಕೊಳ್ಳುವ ಕೊನೆಯ ಅವಕಾಶವನ್ನೂ ತಿರಸ್ಕರಿಸಿದನು.

ಇದನ್ನೂ ಓದಿ: ಲಷ್ಕರ್ ಸೇರಿ ಸರಿಯಾಗಿ ಒಂದು ವರ್ಷಕ್ಕೆ ಅಂತ್ಯ, ಕುಲ್ಗಾಮ್ ಎನ್‌ಕೌಂಟರ್‌ನಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಲತೀಫ್ ಭಟ್ ಹತ್ಯೆ

ಕೊನೆಗೆ, ಬೇರೆ ದಾರಿಯಿಲ್ಲದೆ ಧಾರ್ಮಿಕ ಸ್ಥಳವಾದ ಮಸೀದಿಯ ಪಾವಿತ್ರ್ಯತೆ ಮತ್ತು ಕಟ್ಟಡಕ್ಕೆ ಯಾವುದೇ ಹಾನಿಯಾಗದಂತೆ ಉಗ್ರನನ್ನು ಹತ್ತಿಕ್ಕುವುದು ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿತ್ತು. ಹೀಗಾಗಿ ಭದ್ರತಾ ಪಡೆಗಳು ಅತ್ಯಂತ ಸಂಯಮ ವಹಿಸಿ, ಪ್ರಮಾಣಿತ ಕಾರ್ಯಾಚರಣಾ ವಿಧಾನಗಳಿಗೆ ಅನುಗುಣವಾಗಿ ಮಸೀದಿಯೊಳಗೆ ಅಶ್ರುವಾಯು ಪ್ರಯೋಗಿಸಿದವು. ಹೊಗೆ ಮತ್ತು ಅಶ್ರುವಾಯುವಿನ ತೀವ್ರತೆ ತಾಳಲಾರದೆ ಲತೀಫ್ ಮಸೀದಿಯಿಂದ ಹೊರಗೆ ಓಡಿಬಂದನು. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿ ಆತನನ್ನು ಹತ್ಯೆ ಮಾಡಿದರು. ಇಂದು ಬೆಳಿಗ್ಗೆ 11 ಗಂಟೆಯ ನಂತರ ಆತನ ಮೃತದೇಹ ಹಾಗೂ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿಯಲ್ಲಿ ಕಬ್ಬು ಬೆಳೆಗಾರರಿಗೆ ಬಂಪರ್
ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿಯಲ್ಲಿ ಕಬ್ಬು ಬೆಳೆಗಾರರಿಗೆ ಬಂಪರ್
"ಬಿಜೆಪಿ ಸರ್ಕಾರವಿದ್ದಾಗಲೇ ಪರಿಹಾರ ಕೊಡದವರು ಈಗ ಕೊಡ್ತಾರಾ?"
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ