ದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ಮಾಹಿತಿ ತಂತ್ರಜ್ಞಾನ ನಿಯಮ 2021 ಈ ನೆಲದ ಕಾನೂನು. ಟ್ವಿಟರ್ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್ಗೆ ಸೋಮವಾರ ತಿಳಿಸಿತು. ನಿಯಮಗಳನ್ನು ಪಾಲಿಸುವಲ್ಲಿ ಟ್ವಿಟರ್ ವಿಫಲವಾಗಿದೆ. ಇದರ ಫಲವಾಗಿ ಮೈಕ್ರೊ ಬ್ಲಾಗಿಂಗ್ ತಾಣವು ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಎಂಬ ಕಾರಣಕ್ಕೆ ಪಡೆದುಕೊಂಡಿರುವ ಒಂದಿಷ್ಟು ರಿಯಾಯ್ತಿಗಳನ್ನು ಕಳೆದುಕೊಳ್ಳುತ್ತದೆ ಎಂದು ಸರ್ಕಾರವು ತಿಳಿಸಿದೆ.
ಐಟಿ ನಿಯಮಗಳ ಅನ್ವಯ ಟ್ವಿಟರ್ ಈವರೆಗೂ ದೂರು ವಿಲೇವಾರಿ ಅಧಿಕಾರಿಯನ್ನು ನೇಮಿಸಿಲ್ಲ. ನಿಯಮಗಳು ಜಾರಿಗೆ ಬಂದ ಆರಂಭದ ದಿನಗಳಲ್ಲಿ ಟ್ವಿಟರ್ ಸ್ಥಾನಿಕ ದೂರು ವಿಲೇವಾರಿ ಅಧಿಕಾರಿ ಮತ್ತು ನೋಡೆಲ್ ಸಂಪರ್ಕ ವ್ಯಕ್ತಿಯನ್ನು ನೇಮಿಸಿತ್ತು. ಆದರೆ ನಂತರದ ದಿನಗಳಲ್ಲಿ ಇವರಿಬ್ಬರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು ಎಂದು ಟ್ವಿಟರ್ ಹೇಳಿತ್ತು.
ಭಾರತದಿಂದ ವರದಿಯಾಗುವ ದೂರುಗಳನ್ನು ಅಮೆರಿಕದ ಟ್ವಿಟರ್ ಅಧಿಕಾರಿಗಳೇ ನಿರ್ವಹಿಸುತ್ತಿದ್ದಾರೆ. ಇದು ಹೊಸ ಕಾನೂನಿನ ಪ್ರಕಾರ ಇದು ಐಟಿ ನಿಯಮಗಳ ಉಲ್ಲಂಘನೆ ಎನಿಸಿಕೊಳ್ಳುತ್ತದೆ ಎಂದು ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿತು.
ಜುಲೈ 1ರ ಹೊತ್ತಿಗೆ ಐಟಿ ನಿಯಮಗಳನ್ನು ಟ್ವಿಟರ್ ಸಂಪೂರ್ಣವಾಗಿ ಪಾಲಿಸಬೇಕಿತ್ತು. ಆದರೆ ನಾಲ್ಕು ಅಂಶಗಳಲ್ಲಿ ಟ್ವಿಟರ್ ವಿಫಲವಾಯಿತು. ಮುಖ್ಯ ದೂರು ಪರಿಹಾರ ಅಧಿಕಾರಿಯನ್ನು ನೇಮಿಸಿಲ್ಲ, ಸ್ಥಾನಿಕ ದೂರು ಪರಿಹಾರ ಅಧಿಕಾರಿಯ ಸ್ಥಾನವೂ ಖಾಲಿಯಿದೆ, ನೋಡೆಲ್ ಸಂಪರ್ಕ ವ್ಯಕ್ತಿಯ ಸ್ಥಾನವೂ ಭರ್ತಿಯಾಗಿಲ್ಲ, ದೇಶದಲ್ಲಿ ಸಂಪರ್ಕಕ್ಕೆ ನೀಡಬೇಕಾದ ವಿಳಾಸವನ್ನು ನೀಡಿಲ್ಲ, ಈ ವಿಳಾಸವನ್ನು ಮೇ 29ರ ಒಳಗೆ ನೀಡಬೇಕಿತ್ತು. ಆದರೆ ಈವರೆಗೆ ಟ್ವಿಟರ್ ವೆಬ್ಸೈಟ್ನಲ್ಲಿ ಈ ಮಾಹಿತಿ ಲಭ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತು.
ಐಟಿ ನಿಯಮಗಳ ಉಲ್ಲಂಘನೆಯ ಕಾರಣದಿಂದ ಐಟಿ ಕಾಯ್ದೆ 2001ರ ಅನ್ವಯ ಟ್ವಿಟರ್ಗೆ ಸಿಕ್ಕಿರುವ ಸಾಮಾಜಿಕ ಮಾಧ್ಯಮ ಸ್ಥಾನಮಾನ ಮತ್ತು ಕೆಲ ರಿಯಾಯ್ತಿಗಳು ರದ್ದುಗೊಳ್ಳುತ್ತವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕಳೆದ ವಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದ ಟ್ವಿಟರ್ ಸ್ಥಾನಿಕ ದೂರು ಪರಿಹಾರ ಅಧಿಕಾರಿಯನ್ನು ನೇಮಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಹೇಳಿತ್ತು. ಆರ್ಟಿಕಲ್ 226 ಅನ್ವಯ ರಿಟ್ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸುವಂತಿಲ್ಲ ಎಂದು ಹೇಳಿತ್ತು. ಟ್ವಿಟರ್ನ ಆಡಳಿತ ಸಂಸ್ಥೆಯು ಅಮೆರಿಕದಲ್ಲಿ ನೋಂದಣಿಯಾಗಿದೆ ಎಂದು ತಿಳಿಸಿತ್ತು.
(Twitter Has to Follow Indias Rules It is Mandatory Says Centre to Delhi High Court)
ಇದನ್ನೂ ಓದಿ: Twitter India: ಹಿಂದುಗಳ ಧಾರ್ಮಿಕ ಭಾವನೆಗೆ ಅವಮಾನದ ಆರೋಪ; ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ವಿರುದ್ಧ ದೂರು
ಇದನ್ನೂ ಓದಿ: ಟ್ವಿಟರ್ ವಿರುದ್ಧ ಪೋಕ್ಸೋ, ಐಟಿ ಕಾಯ್ದೆಯಡಿ ದೂರು ದಾಖಲಿಸಿದ ದೆಹಲಿ ಪೊಲೀಸರು; ಎನ್ಸಿಪಿಸಿಆರ್ ವರದಿ ಆಧರಿಸಿ ದೂರು
Published On - 7:15 pm, Mon, 5 July 21