ದೆಹಲಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವಿಟರ್ ಖಾತೆಯ ದೃಢೀಕರಣ ಬ್ಯಾಡ್ಜ್ ಅಂದರೆ ಬ್ಲ್ಯೂ ಟಿಕ್ (ನೀಲಿ ಟಿಕ್)ನ್ನು ಟ್ವಿಟರ್ ತೆಗೆದುಹಾಕಿತ್ತು. ಸಾಮಾನ್ಯವಾಗಿ ಗಣ್ಯರು, ಸಿನಿಮಾ ಕ್ಷೇತ್ರದಲ್ಲಿರುವ ಪ್ರಮುಖರು, ರಾಜಕಾರಿಗಳ ಸೋಷಿಯಲ್ ಮೀಡಿಯಾ ಖಾತೆಗೆ ಬ್ಲ್ಯೂಟಿಕ್ ಇರುತ್ತದೆ. ಅವರ ಹೆಸರಲ್ಲಿ ಹಲವು ಖಾತೆಗಳು ಇರುವ ಕಾರಣ, ಅಧಿಕೃತ ಖಾತೆಯೆ ಬಗ್ಗೆ ಗೊಂದಲ ಆಗಬಾರದು ಎಂಬ ಕಾರಣಕ್ಕೆ ಈ ದೃಢೀಕರಣ ಬ್ಯಾಡ್ಜ್ನ್ನು ನೀಡಲಾಗುತ್ತದೆ. ಆದರೆ ಸದ್ಯ ಎಂ.ವೆಂಕಯ್ಯನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆ (@MVenkaiahNaidu)ಗೆ ನೀಡಲಾಗಿದ್ದ ಈ ಬ್ಲ್ಯೂಟಿಕ್ ತೆಗೆದುಹಾಕಲ್ಪಟ್ಟಿತ್ತು. ಆದರೆ ಅವರ ಕಚೇರಿಯ ಟ್ವಿಟರ್ ಖಾತೆ (@VPSecretariat)ದ ಬ್ಲ್ಯೂಟಿಕ್ ಇನ್ನೂ ಹಾಗೇ ಉಳಿಸಿತ್ತು.
ಕಾರಣವೇನು?
ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆಯ ದೃಢೀಕರಣ ಬ್ಯಾಡ್ಜ್ ತೆಗೆದುಹಾಕಲ್ಪಟ್ಟಿದ್ದಕ್ಕೆ ಉಪರಾಷ್ಟ್ರಪತಿ ಕಚೇರಿ ಸ್ಪಷ್ಟೀಕರಣ ನೀಡಿದೆ. ವೆಂಕಯ್ಯನಾಯ್ಡು ಅವರ ವೈಯಕ್ತಿಕ ಖಾತೆ ಕಳೆದ ಆರು ತಿಂಗಳಿಂದಲೂ ನಿಷ್ಕ್ರಿಯವಾಗಿತ್ತು. ಅಲ್ಲಿಂದ ಯಾವುದೇ ಟ್ವೀಟ್ಗಳನ್ನೂ ಮಾಡಲಾಗಿಲ್ಲ. ಹಾಗಾಗಿ ಬ್ಲ್ಯೂಟಿಕ್ ತೆಗೆಯಲ್ಪಟ್ಟಿದೆ ಎಂದು ತಿಳಿಸಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಇದನ್ನು ಪರಿಶೀಲಿಸಿದ ಬಳಿಕ ಟ್ವಿಟರ್ ಬ್ಲ್ಯೂಟಿಕ್ ವಾಪಸ್ ಕೊಟ್ಟಿದೆ ಎಂದೂ ಮಾಹಿತಿ ನೀಡಿದೆ.
ಇನ್ನು ಟ್ವಿಟರ್ನ ಈ ಕ್ರಮದ ವಿರುದ್ಧ ಬಿಜೆಪಿ ನಾಯಕ ಸುರೇಶ್ ನಖುವಾ ಕಿಡಿ ಕಾರಿದ್ದಾರೆ. ಭಾರತದ ಸಂವಿಧಾನಕ್ಕೆ ಟ್ವಿಟರ್ ಅವಮಾನ ಮಾಡಿದೆ. ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ವೈಯಕ್ತಿಕ ಖಾತೆಯ ಬ್ಲ್ಯೂಟಿಕ್ ತೆಗೆದಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.
ದೃಢೀಕರಣ ಬ್ಯಾಡ್ಜ್ ಯಾವಾಗ ರದ್ದಾಗುತ್ತದೆ?
ಟ್ವಿಟರ್ ಬ್ಲ್ಯೂಟಿಕ್ ದೃಢೀಕರಣ ಬ್ಯಾಡ್ಜ್ ನೀಡಿದ ಬಳಿಕ ಆ ಅಕೌಂಟ್ ಸಂಪೂರ್ಣವಾಗಿ ಬಳಕೆಯಾಗುತ್ತಿರಬೇಕು ಅಂದರೆ ಸಕ್ರಿಯವಾಗಿರಬೇಕು. ಅದಿಲ್ಲದಿದ್ದರೆ ಅದನ್ನು ತೆಗೆಯುತ್ತದೆ. ಇನ್ನು ಬ್ಲ್ಯೂಟಿಕ್ ಪಡೆದ ಯಾರಾರೂ ಯೂಸರ್ ನೇಮ್ (ಬಳಕೆದಾರರು ಹೆಸರು) ಬದಲಿಸಿಕೊಂಡರೆ, ಆ ಕ್ಷಣಕ್ಕೆ ಟ್ವಿಟರ್ ಬ್ಲ್ಯೂಟಿಕ್ ತೆಗೆದುಹಾಕುತ್ತದೆ.
ಇದನ್ನೂ ಓದಿ: ಕೊಡಗಿನ ಭಾವೀ ಪೈಲಟ್ ಗುಜರಾತ್ನಲ್ಲಿ ಆತ್ಮಹತ್ಯೆ: ಸಾವಿನ ಸುತ್ತ ಅನುಮಾನದ ಹುತ್ತ
Published On - 11:11 am, Sat, 5 June 21