AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶದಲ್ಲಿ ನಾಯಕತ್ವ ಬದಲಾವಣೆ?..ಊಹಾಪೋಹಗಳಿಗೆ ತೆರೆ; ಪ್ರಮುಖ ವ್ಯಕ್ತಿಯೊಬ್ಬರ ಪ್ರವೇಶ ನಿಶ್ಚಿತ !

ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಪಂಚಾಯತ್​ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. ಬಿಜೆಪಿ ಬಲವಾಗಿ ಇರುವ ಕ್ಷೇತ್ರಗಳಲ್ಲೇ ಅದು ಸೋಲುಂಡಿದೆ.

ಉತ್ತರ ಪ್ರದೇಶದಲ್ಲಿ ನಾಯಕತ್ವ ಬದಲಾವಣೆ?..ಊಹಾಪೋಹಗಳಿಗೆ ತೆರೆ; ಪ್ರಮುಖ ವ್ಯಕ್ತಿಯೊಬ್ಬರ ಪ್ರವೇಶ ನಿಶ್ಚಿತ !
ಎ.ಕೆ.ಶರ್ಮಾ
TV9 Web
| Updated By: Lakshmi Hegde|

Updated on:Jun 05, 2021 | 9:55 AM

Share

ಉತ್ತರಪ್ರದೇಶದಲ್ಲಿ ನಾಯಕತ್ವ ಬದಲಾವಣೆ ಆಗಲಿದೆಯಾ? ಕೊವಿಡ್​ 19 ಸಂದರ್ಭವನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲ ಎಂಬ ಕಾರಣಕ್ಕೆ ಸಿಎಂ ಯೋಗಿ ಆದಿತ್ಯನಾಥ್​ ಅವರ ಸ್ಥಾನಕ್ಕೆ ತೊಂದರೆ ಬರಲಿದೆಯಾ? ಹೀಗೊಂದಷ್ಟು ಪ್ರಶ್ನೆಗಳು, ಊಹಾಪೋಹಗಳು ಎದ್ದಿದ್ದವು. ಆದರೆ ಈ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ನೀಡಿದೆ. ಉತ್ತರ ಪ್ರದೇಶದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಎದ್ದಿದ್ದ ಎಲ್ಲ ಊಹಾಪೋಹಗಳಿಗೂ ತೆರೆ ಎಳೆದಿದೆ. ಆದರೂ ಶೀಘ್ರದಲ್ಲೇ ಉತ್ತರ ಪ್ರದೇಶ ಸರ್ಕಾರದ ಕ್ಯಾಬಿನೆಟ್​​ನಲ್ಲಿ ಒಂದಷ್ಟು ಬದಲಾವಣೆಗಳಂತೂ ಖಂಡಿತ ಆಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಸದ್ಯಕ್ಕೇನೂ ಯೋಗಿ ಆದಿತ್ಯನಾಥ್​ ಅವರಿಗೆ ಸ್ಥಾನ ಕಳೆದುಕೊಳ್ಳುವ ಭಯವಿಲ್ಲ. ಆದರೆ ಮಾಜಿ ಅಧಿಕಾರಿ, ಪ್ರಧಾನಿ ನರೇಂದ್ರ ಮೋದಿಯವರ ಆಪ್ತರಲ್ಲಿ ಒಬ್ಬರಾದ ಎ.ಕೆ.ಶರ್ಮಾ ಶೀಘ್ರದಲ್ಲೇ ಉತ್ತರ ಪ್ರದೇಶ ಬಿಜೆಪಿ ಸರ್ಕಾರದಲ್ಲಿ ಒಂದು ಉನ್ನತ ಸ್ಥಾನ ಪಡೆಯಲಿದ್ದಾರೆ ಎಂದು ಪಕ್ಷದ ಮೂಲಗಳೇ ತಿಳಿಸಿವೆ. ಮುಂಬರುವ ವಿಧಾನಸಭೆ ಚುನಾವಣೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್​ ಸಿಂಗ್​ ನೇತೃತ್ವದಲ್ಲಿಯೇ ನಡೆಯಲಿದೆ ಎಂದು ಮೂಲಗಳು ಖಚಿತ ಪಡಿಸಿದ್ದು, ಎ.ಕೆ.ಶರ್ಮಾರಿಗೆ ಸರ್ಕಾರದಲ್ಲಿ ಉನ್ನತ ಹುದ್ದೆ ನೀಡುವ ಸಂಬಂಧ ರಾಷ್ಟ್ರೀಯ ಬಿಜೆಪಿ ನಾಯಕರು ಲಖನೌದಲ್ಲಿ ಎರಡು ದಿನ ಪರಿಶೀಲನಾ ಸಭೆ ನಡೆಸಿದ್ದಾರೆ ಎನ್ನಲಾಗಿದೆ.

ಯೋಗಿ ಆದಿತ್ಯನಾಥ್​ ಬಿಜೆಪಿಯ ಪಾಲಿಗೆ ಸ್ಟಾರ್​ ಪ್ರಚಾರಕರು. ಅವರನ್ನೆಂದೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಸಂಪುಟ ವಿಸ್ತರಣೆ ಮಾಡಲಾಗುವುದು. ಹೊಸ ಮಂತ್ರಿಗಳನ್ನು ಸಂಪುಟಕ್ಕೆ ಸೇರ್ಪಡೆ ಮಾಡುವುದು ಅನಿವಾರ್ಯವಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಕೊವಿಡ್​ ಸಂದರ್ಭ ನಿರ್ವಹಣೆಯಲ್ಲಿ ಯೋಗಿ ಆದಿತ್ಯನಾಥ್​ ಎಡವಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ. ಅದರಲ್ಲೂ ಗಂಗಾ ನದಿಯಲ್ಲಿ ಕೊವಿಡ್​ 19 ಸೋಂಕಿತರ ಶವ ತೇಲಿಬರುವುದನ್ನು ನೋಡಿದಮೇಲೆ ಸೋಷಿಯಲ್​ ಮೀಡಿಯಾಗಳಲ್ಲಿ ಈ ಬಗ್ಗೆ ತೀವ್ರ ಟೀಕೆ, ವಾಗ್ದಾಳಿ ವ್ಯಕ್ತವಾಗಿತ್ತು. ಕೇಂದ್ರ ಸರ್ಕಾರವೂ ಎಚ್ಚರಿಕೆ ನೀಡಿತ್ತು. ಅದರೊಂದಿಗೆ ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಪಂಚಾಯತ್​ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. ಬಿಜೆಪಿ ಬಲವಾಗಿ ಇರುವ ಕ್ಷೇತ್ರಗಳಲ್ಲೇ ಅದು ಸೋಲುಂಡಿದೆ. ಈ ಎಲ್ಲ ಕಾರಣಗಳಿಂದ ಯೋಗಿ ಆದಿತ್ಯನಾಥ್​ ಸ್ಥಾನ ಬದಲಾವಣೆಯ ಮಾತುಗಳು ಕೇಳಿಬಂದಿದ್ದವು.

ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮುಂದಿನ ತಿಂಗಳು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ಪಕ್ಷ ಸಂಘಟನೆ, ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸಲಿದ್ದಾರೆ.

ಇದನ್ನೂ ಓದಿ: Petrol Price Today: ಸ್ಥಿರತೆಯಲ್ಲಿ ಇಂಧನ ಬೆಲೆ; ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೀಗಿದೆ

Published On - 9:43 am, Sat, 5 June 21