ಭಾರತದಲ್ಲಿ ಎರಡು ಒಮಿಕ್ರಾನ್ ಪ್ರಕರಣ ಪತ್ತೆ; ಎರಡೂ ಪ್ರಕರಣ ಪತ್ತೆಯಾಗಿರುವುದು ಕರ್ನಾಟಕದಲ್ಲಿ

| Updated By: ರಶ್ಮಿ ಕಲ್ಲಕಟ್ಟ

Updated on: Dec 02, 2021 | 5:16 PM

ದೆಹಲಿಯಲ್ಲಿ ಕೇಂದ್ರದ ಆರೋಗ್ಯ ಇಲಾಖೆಯ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ದೇಶದಲ್ಲಿ ಸದ್ಯ ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾತ್ರ ಹೆಚ್ಚಿನ ಕೊರೊನಾ ಸಕ್ರಿಯ ಪ್ರಕರಣಗಳಿವೆ ಎಂದಿದ್ದಾರೆ.

ಭಾರತದಲ್ಲಿ ಎರಡು ಒಮಿಕ್ರಾನ್ ಪ್ರಕರಣ ಪತ್ತೆ; ಎರಡೂ ಪ್ರಕರಣ ಪತ್ತೆಯಾಗಿರುವುದು ಕರ್ನಾಟಕದಲ್ಲಿ
ಲವ್ ಅಗರವಾಲ್
Follow us on

ದೆಹಲಿ:ಭಾರತದಲ್ಲಿ ಎರಡು ಒಮಿಕ್ರಾನ್ (Omicron) ಪ್ರಕರಣ ಪತ್ತೆಯಾಗಿದ್ದು  ಎರಡು ಪ್ರಕರಣಗಳು ಕರ್ನಾಟಕದಲ್ಲೇ (Karnataka) ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕರ್ನಾಟಕದಲ್ಲಿನ 66 ವರ್ಷದ ವೃದ್ಧ, 46 ವರ್ಷದ ವ್ಯಕ್ತಿಗೆ ಒಮಿಕ್ರಾನ್ ಇರುವುದಾಗಿ ಪತ್ತೆಯಾಗಿದೆ ಎಂದು ಲವ್ ಅಗರವಾಲ್  ಹೇಳಿದ್ದಾರೆ. ದೆಹಲಿಯಲ್ಲಿ ಕೇಂದ್ರದ ಆರೋಗ್ಯ ಇಲಾಖೆಯ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ (Lav Agarwal) ದೇಶದಲ್ಲಿ ಸದ್ಯ ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾತ್ರ ಹೆಚ್ಚಿನ ಕೊರೊನಾ ಸಕ್ರಿಯ ಪ್ರಕರಣಗಳಿವೆ. ದೇಶದ 18  ಜಿಲ್ಲೆಯಲ್ಲಿ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ.5-10  ರಷ್ಟು ಇದೆ. 15 ಜಿಲ್ಲೆಯಲ್ಲಿ ವಾರದ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ.10 ಕ್ಕಿಂತ ಜಾಸ್ತಿ ಇದೆ ಎಂದು ಹೇಳಿದ್ದಾರೆ. ದೇಶದಲ್ಲಿ ಇದುವರೆಗೂ 125 ಕೋಟಿ ಗಿಂತ ಹೆಚ್ಚು ಡೋಸ್ ನೀಡಲಾಗಿದೆ. ಈ  ಪೈಕಿ ಶೇ 84.3 ವಯಸ್ಕ ಜನರಿಗೆ ಸಿಂಗಲ್ ಡೋಸ್ ಲಸಿಕೆ ಮತ್ತು ದೇಶದ ಶೇಕಡಾ 49 ರಷ್ಟು ಜನರಿಗೆ ಎರಡು ಡೋಸ್ ಲಸಿಕೆ ನೀಡಲಾಗಿದೆ ಎಂದಿದ್ದಾರೆ. ದೇಶದಲ್ಲಿ ಹರ್ ಘರ್ ದಸ್ತಕ್ ಅಭಿಯಾನ ನಡೆಸಲಾಗುತ್ತಿದೆ. ಬೇರೆ ಬೇರೆ ರಾಜ್ಯಗಳು ಒಳ್ಳೆಯ ಕ್ಯಾಂಪೇನ್ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ.


ಯುರೋಪ್​​ನಲ್ಲಿ  ಹೆಚ್ಚಿನ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ದಕ್ಷಿಣ ಏಷ್ಯಾದಲ್ಲಿ ವಾರದಲ್ಲಿ 1.1ಲಕ್ಷ ಪ್ರಕರಣಗಳು ಪತ್ತೆಯಾಗಿದೆ. ದಕ್ಷಿಣ ಏಷ್ಯಾದಲ್ಲಿ ಭಾರತ ಕೂಡ ಸೇರಿದೆ. ಜರ್ಮನಿಯಲ್ಲಿ ನಿತ್ಯ 75 ಸಾವಿರ ಕೊರೊನಾ ಕೇಸ್ ಪತ್ತೆಯಾಗುತ್ತಿದ್ದು ಇಂಗ್ಲೆಂಡ್ನಲ್ಲಿ ನಿತ್ಯ 47 ಸಾವಿರ ಕೇಸ್ ಪತ್ತೆಯಾಗುತ್ತಿವೆ. 2 ತಿಂಗಳಲ್ಲಿ ಯುರೋಪ್ನಲ್ಲಿ ಕೇಸ್, ಸಾವು ಪ್ರಕರಣಗಳು ದ್ವಿಗುಣವಾಗಿದೆ ಎಂದು ಲವ್ ಅಗರ್ವಾಲ್ ಹೇಳಿದ್ದಾರೆ. ಅದೇ ವೇಳೆ ಫ್ರಾನ್ಸ್​​ನಲ್ಲಿ   ಪ್ರತಿನಿತ್ಯ 50 ಸಾವಿರ, ಬೆಲ್ಜಿಯಂನಲ್ಲಿ ನಿತ್ಯ 20 ಸಾವಿರ ಕೊರೊನಾ ಪ್ರಕರಣ ಪತ್ತೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಪ್ರಕರಣ ಕಡಿಮೆ ಆದಾಗ ಮೈಮರೆತರೆ ಅಪಾಯ ಎದುರಾಗುತ್ತೆ ಎಂದು ಹೇಳಿದ ಅವರು ವಿಶ್ವದಲ್ಲಿ ಒಮಿಕ್ರಾನ್ ಪ್ರಭೇದದ ವೈರಸ್ ಪತ್ತೆಯಾಗಿದೆ ಎಂದಿದ್ದಾರೆ.

ಸುದ್ದಿಗೋಷ್ಠಿಯ  ಮುಖ್ಯಾಂಶಗಳು

ಈ ಸಮಯದಲ್ಲಿ ಕೊವಿಡ್-19 ಲಸಿಕೆ ತೆಗೆದುಕೊಳ್ಳುವುದು ಅಗತ್ಯವಾಗಿದೆ, ಸಂಪೂರ್ಣವಾಗಿ ಲಸಿಕೆಯನ್ನು ಪಡೆಯಲು ವಿಳಂಬ ಮಾಡಬೇಡಿ ಎಂದು ನೀತಿ ಆಯೋಗದ ಸದಸ್ಯ(ಆರೋಗ್ಯ) ವಿಕೆ ಪಾಲ್ ಹೇಳಿದ್ದಾರೆ.

ಎಲ್ಲ ಒಮಿಕ್ರಾನ್ ಸಂಬಂಧಿತ ಪ್ರಕರಣಗಳು ಇಲ್ಲಿಯವರೆಗೆ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿವೆ ಎಂದು ಕಂಡುಬಂದಿದೆ. ಇದುವರೆಗೆ ದೇಶ ಮತ್ತು ಪ್ರಪಂಚದಾದ್ಯಂತ ಅಂತಹ ಎಲ್ಲಾ ಪ್ರಕರಣಗಳಲ್ಲಿ, ಯಾವುದೇ ತೀವ್ರವಾದ ರೋಗಲಕ್ಷಣವನ್ನು ಗುರುತಿಸಲಾಗಿಲ್ಲ. ಅದರ ಉದಯೋನ್ಮುಖ ಸಾಕ್ಷ್ಯವನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಒಮಿಕ್ರಾನ್ ಪ್ರಕರಣದಲ್ಲಿ ಯಾವುದೇ ತೀವ್ರವಾದ ರೋಗಲಕ್ಷಣಗಳು ಇಲ್ಲಿಯವರೆಗೆ ವರದಿಯಾಗಿಲ್ಲ ಎಂದು ಲವ್ ಅಗರವಾಲ್ ಹೇಳಿದ್ದಾರೆ.

ಪತ್ತೆಯಾದ ಪ್ರಕರಣದ ಎಲ್ಲಾ ಸಂಪರ್ಕಗಳನ್ನು ಗುರುತಿಸಲಾಗಿದೆ ಮತ್ತು ಅವರು ಮೇಲ್ವಿಚಾರಣೆಯಲ್ಲಿದ್ದಾರೆ. ಪ್ರೋಟೋಕಾಲ್ ಅನ್ನು ಅನುಸರಿಸಲಾಗುತ್ತಿದೆ. ಹೈ ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರು ಆಗಮನದ ನಂತರ RT-PCR ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಕೊವಿಡ್‌ಗೆ ಪಾಸಿಟಿವ್ ಕಂಡುಬಂದರೆ, ಅವರಿಗೆ ಕ್ಲಿನಿಕಲ್ ಮ್ಯಾನೇಜ್‌ಮೆಂಟ್ ಪ್ರೋಟೋಕಾಲ್ ಅಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ, 7 ದಿನಗಳ ಕಾಲ ಹೋಮ್ ಕ್ವಾರಂಟೈನ್ ಮಾಡಲಾಗುವುದು. ಸುಮಾರು 29 ದೇಶಗಳು ಇಲ್ಲಿಯವರೆಗೆ ಒಮಿಕ್ರಾನ್ ನ 373 ಪ್ರಕರಣಗಳನ್ನು ವರದಿ ಮಾಡಿದೆ.

ಕಳೆದ ಒಂದು ವಾರದಲ್ಲಿ ವಿಶ್ವದಲ್ಲಿ ಶೇ70 ಪ್ರಕರಣಗಳನ್ನು ಯುರೋಪ್ ವರದಿ ಮಾಡಿದೆ. ನವೆಂಬರ್ 28 ಕ್ಕೆ ಕೊನೆಗೊಂಡ ವಾರದಲ್ಲಿ, ಯುರೋಪಿಯನ್ ಪ್ರದೇಶದಲ್ಲಿ ಸುಮಾರು 2.75 ಲಕ್ಷ ಹೊಸ ಪ್ರಕರಣಗಳು ಮತ್ತು 31,000 ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ. ಇದಕ್ಕೆ ಹೋಲಿಸಿದರೆ, ಭಾರತ ಮತ್ತು ಇತರ 11 ದೇಶಗಳನ್ನು ಒಳಗೊಂಡಿರುವ ಆಗ್ನೇಯ ಏಷ್ಯಾದ ಪ್ರದೇಶವು ಕಳೆದ ಒಂದು ವಾರದಲ್ಲಿ ಕೇವಲ 1.2 ಲಕ್ಷ ಪ್ರಕರಣಗಳನ್ನು ವರದಿ ಮಾಡಿದೆ. ಅಂದರೆ ವಿಶ್ವದ ಪ್ರಕರಣಗಳಲ್ಲಿ ಕೇವಲ ಶೇ 3.1 ಮಾತ್ರ. ಆಗ್ನೇಯ ಏಷ್ಯಾದ ಪ್ರದೇಶದಲ್ಲಿ ಪ್ರಕರಣಗಳ ಇಳಿಕೆ ವರದಿಯಾಗುತ್ತಿದೆ ಎಂದು ಲವ್ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಆರೋಗ್ಯ ಸಚಿವಾಲಯವು ಸ್ಥಾಪಿಸಿದ 37 ಪ್ರಯೋಗಾಲಯಗಳ INSACOG ಒಕ್ಕೂಟದ ಜೀನೋಮ್ ಅನುಕ್ರಮ ಪ್ರಯತ್ನದ ಮೂಲಕ ಇದುವರೆಗೆ ಕರ್ನಾಟಕದಲ್ಲಿ ಒಮಿಕ್ರಾನ್ ನ ಎರಡು ಪ್ರಕರಣಗಳು ಪತ್ತೆಯಾಗಿವೆ. ನಾವು ಭಯಪಡುವ ಅಗತ್ಯವಿಲ್ಲ, ಆದರೆ ಅರಿವು ಸಂಪೂರ್ಣವಾಗಿ ಅವಶ್ಯಕವಾಗಿದೆ. ಕೊವಿಡ್ ಸೂಕ್ತ ನಡವಳಿಕೆಯ ಅಗತ್ಯವಿದೆ ಎಂದು ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ ಹೇಳಿದ್ದಾರೆ.



ಇದನ್ನೂ ಓದಿ: ಒಮಿಕ್ರಾನ್​ ಹೈರಿಸ್ಕ್​ ದೇಶಗಳಿಂದ ಬಂದ 6 ಮಂದಿಯಲ್ಲಿ ಕೊವಿಡ್​ 19 ದೃಢ; ಎಲ್ಲರ ಮಾದರಿಗಳೂ ಲ್ಯಾಬ್​​ಗೆ ರವಾನೆ

Published On - 4:39 pm, Thu, 2 December 21