ಫೆಬ್ರವರಿ 14, 2019. ಅಂದ್ರೆ ಇಂದಿಗೆ ಎರಡು ವರ್ಷಗಳ ಹಿಂದೆ ಇಡೀ ದೇಶ ಪ್ರೇಮಿಗಳ ದಿನದ ಸಂಭ್ರಮದಲ್ಲಿ ತೇಲುತ್ತಿದ್ರೆ. ಅದೆಲ್ಲಿಂದಲೋ ಒಂದು ಬರ ಸಿಡಿಲು ಬಂದೆರಗಿತ್ತು. ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಜೈಷೇ ಮೊಹಮ್ಮದ್ಗೆ ಸೇರಿದ್ದ ಅದಿಲ್ ಅಹ್ಮದ್ ದಾರ್ ಅನ್ನೋ ದುರುಳ ಸಿಆರ್ಪಿಎಫ್ ಯೋಧರು ಸಂಚರಿಸುತ್ತಿದ್ದ ಬಸ್ಗೆ ಆರ್ಡಿಎಕ್ಸ್ ತುಂಬಿದ್ದ ಕಾರನ್ನ ಡಿಕ್ಕಿ ಹೊಡೆಸಿದ್ದ. ಯಾವಾಗ ಎರಡು ವಾಹನಗಳು ಡಿಕ್ಕಿಯಾದ್ವೋ. ಅಲ್ಲಿಗೆ 40 ಯೋಧರು ಕ್ಷಣಾರ್ಧದಲ್ಲಿ ಹುತಾತ್ಮರಾಗಿದ್ರು. ಅಂದು ನಡೆದ ಆತ್ಮಹತ್ಯಾ ಬಾಂಬರ್ ದಾಳಿ ಜಮ್ಮು-ಕಾಶ್ಮೀರದಲ್ಲಿ ಇದುವರೆಗೆ ಭಾರತೀಯ ಸೇನೆಯ ಮೇಲೆ ನಡೆದ ಅತ್ಯಂತ ದೊಡ್ಡ ದಾಳಿಯಾಗಿದೆ.
ದಾಳಿಯಲ್ಲಿ ಮಂಡ್ಯದ ಮಣ್ಣಿನ ಮಗ ಗುರು ಹುತಾತ್ಮ
ಇವತ್ತಿಗೆ ಎರಡು ವರ್ಷಗಳ ಹಿಂದೆ ನಡೆದ ದಾಳಿಯಲ್ಲಿ ನಮ್ಮ ಕರ್ನಾಟಕದ ಒಬ್ಬ ಯೋಧ ಕೂಡ ಹುತಾತ್ಮನಾಗಿದ್ದ. ಆತ ಬೇರಾರು ಅಲ್ಲ ಮಂಡ್ಯದ ಮಣ್ಣಿನ ಮಗ ಗುರು. ಅಂದು ಜಮ್ಮುವಿನಿಂದ ಶ್ರೀನಗರದ ಕಡೆ 78 ಬಸ್ಗಳಲ್ಲಿ 2,500 ಜನ ಸಿಆರ್ಪಿಎಫ್ ಯೋಧರು ತೆರಳುತ್ತಿದ್ರು. ಜಮ್ಮು-ಕಾಶ್ಮೀರದ ಜನ ನೆಮ್ಮದಿಯಿಂದ ಇರಲು ಇವರ ಕಾರ್ಯ ಅನಿವಾರ್ಯ. ಹೀಗಾಗಿ ಇವರೆಲ್ಲ ತಮಗೆ ವಹಿಸಿದ್ದ ಕಾರ್ಯ ನಿರ್ವಹಿಸಲು ತೆರಳುತ್ತಿದ್ದ ವೇಳೆ ನಡೆದ ಅತ್ಯಂತ ಘನಘೋರ ದಾಳಿ ನಡೆದು ಹೋಗಿತ್ತು.
ಇಂದಿಗೂ ಸಹ ಗಡಿಯಲ್ಲಿ ಇಂತಹ ಲಕ್ಷಾಂತರ ಸೈನಿಕರು ನಮ್ಮ ದೇಶದ ರಕ್ಷಣೆಗಾಗಿ ಹಗರಲಿರುಳು ಶ್ರಮಿಸುತ್ತಿದ್ದಾರೆ. ಈ ದಿನದಂದು ಅವರನ್ನ ನೆನೆಯದೇ ಇದ್ರೆ, ನಾವು ನೆಮ್ಮದಿಯಿಂದ ನಿದ್ರಿಸಲು ಸಾಧ್ಯವಿಲ್ಲ ಅನ್ನೋದನ್ನ ಭಾರತೀಯರು ಎಂದಿಗೂ ಮರೆಯಬಾರದು.
ಇದನ್ನೂ ಓದಿ: ಪುಲ್ವಾಮಾ ದಾಳಿ ಕರಾಳ ದಿನಕ್ಕೆ 1 ವರ್ಷ, ಅನಾವರಣಗೊಳ್ಳಲಿದೆ ಹುತಾತ್ಮ ಯೋಧರ ಸ್ಮಾರಕ