ಪಾಕಿಸ್ತಾನದ ಉಗ್ರ 2019ರ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ. ಹೆದ್ದಾರಿ ಮೇಲೆ ಸಾಗುತ್ತಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ವಾಹನಗಳನ್ನು ಗುರಿಯಾಗಿಸಿ ಉಗ್ರ ದಾಳಿ ಮಾಡಿದ್ದ. ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಈ ದಾಳಿಯಲ್ಲಿ 40 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಬಳಿಕ, ಉಗ್ರರ ಈ ದುಷ್ಕೃತ್ಯಕ್ಕೆ ತಿರುಗೇಟು ನೀಡಿದ ಭಾರತ, ಫೆ. 26ರಂದು ಪಾಕ್ ಆಕ್ರಮಿತ ಕಾಶ್ಮೀರ ಭಾಗಕ್ಕೆ ತೆರಳಿ ಉಗ್ರರ ಶಿಬಿರಗಳನ್ನು ಹೇಳಹೆಸರಿಲ್ಲದಂತೆ ಮಾಡಿತ್ತು. ಭಾರತೀಯ ವಾಯುಪಡೆ ಮತ್ತು ಭೂಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರ ಅಟ್ಟಹಾಸವನ್ನು ಹಿಮ್ಮೆಟ್ಟಿಸುವಂತೆ ಶಿಬಿರಗಳನ್ನು ಧ್ವಂಸಗೊಳಿಸಿತ್ತು. ಇಂದಿಗೆ ಪುಲ್ವಾಮ ಘಟನೆ ನಡೆದು 2 ವರ್ಷಗಳಾಗುತ್ತಿವೆ.
ಘಟನೆಯ ದಿನ ಏನಾಗಿತ್ತು?
ಅಂದು 78 ವಾಹನಗಳಲ್ಲಿ 2500 ಸಿಆರ್ಪಿಎಫ್ ಯೋಧರು ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುತ್ತಿದ್ದರು. ಕೇಂದ್ರ ಪೊಲೀಸ್ ಮೀಸಲು ಪಡೆಯ ಸಿಬ್ಬಂದಿ ರಜೆ ಮುಗಿಸಿ ಕರ್ತವ್ಯಕ್ಕೆ ಪುನಃ ಕಣಿವೆಗೆ ಮರಳುತ್ತಿದ್ದರು. 78 ವಾಹನಗಳಿಗೆ ಬೆಂಗಾವಲಾಗಿದ್ದ CRPF ಯೋಧರ ಬಸ್ಸುಗಳು ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಆವಂತಿಪುರದ ಲಾಟೂಮೋಡೆ ಎಂಬಲ್ಲಿಗೆ ತಲುಪಿತ್ತು.
ಆ ವೇಳೆ, ಹೆದ್ದಾರಿಯ ಎಡ ಮಾರ್ಗದಲ್ಲಿ ಸ್ಪೋಟಕಗಳನ್ನು ಹೊಂದಿದ್ದ ಬಸ್ ಒಂದು ಆಗಮಿಸಿತು. ಭಾರತೀಯ ಸೇನೆ ಬೆಂಗಾವಲು ಪಡೆಯ ಬಸ್ನ್ನು ಹಿಂದಿಕ್ಕಿ, ಢಿಕ್ಕಿ ಹೊಡೆದು ಸ್ಫೋಟಗೊಂಡಿತು. ಈ ಭೀಕರ ಆತ್ಮಾಹುತಿ ದಾಳಿಗೆ ಸೇನಾ ವಾಹನಗಳು ಭಸ್ಮಗೊಂಡವು. 40 ಯೋಧರು ಹುತಾತ್ಮರಾದರು. 35 ಮಂದಿ ಗಾಯಗೊಂಡರು.
ಪುಲ್ವಾಮದ ಅವಂತಿಪುರದ ಬಳಿ, ಮಧ್ಯಾಹ್ನ 3.15ರ ವೇಳೆಗೆ ವರದಿಯಾದ ಈ ದಾಳಿಯಲ್ಲಿ ಒಂದು ಬಸ್ನಲ್ಲಿದ್ದ 40ರಷ್ಟು ಯೋಧರು ಮೃತಪಟ್ಟಿದ್ದರು. 80 ಕೆ.ಜಿ.ಯಷ್ಟು ಸ್ಫೋಟಕಗಳನ್ನು ದಾಳಿಗೆ ಬಳಸಲಾಗಿತ್ತು. 1989ರ ಬಳಿಕ ಯೋಧರನ್ನು ಗುರಿಯಾಗಿಸಿ, ಭಯೋತ್ಪಾದಕರು ನಡೆಸಿದ ಅತಿ ಭೀಕರ ದಾಳಿ ಇದಾಗಿತ್ತು.
ಇದನ್ನೂ ಓದಿ: Two Years of Pulwama Attack | ಪುಲ್ವಾಮಾ ದಾಳಿ ಕರಾಳ ದಿನಕ್ಕೆ 2 ವರ್ಷ.. ಅಂದು ದೇಶಕ್ಕಾಗಿ ಹುತಾತ್ಮರಾದ ಯೋಧರಿಗೆ ಸಲಾಂ
ಪುಲ್ವಾಮ ದಾಳಿಗೆ ಭಾರತ ಹೀಗೆ ಪ್ರತಿಕ್ರಿಯಿಸಿತು..
ಪಾಕ್ನ ಉಗ್ರ ಸಂಘಟನೆಯ ದಾಳಿಯನ್ನು ಭಾರತ ಕಟುವಾಗಿ ಖಂಡಿಸಿತು. ಉಗ್ರ ಸಂಘಟನೆಗಳಿಗೆ ತಕ್ಕ ಉತ್ತರ ನೀಡುವ ಪಣ ತೊಟ್ಟಿತು. ಪ್ರಧಾನಿ ನರೇಂದ್ರ ಮೋದಿ, ‘ಯೋಧರ ಬಲಿದಾನ ಸ್ಮರಿಸಿ, ಭಾರತೀಯರೆಲ್ಲರ ಎದೆಯಲ್ಲಿ ಉರಿಯುತ್ತಿರುವ ಕಿಡಿಯೇ ನನ್ನಲ್ಲೂ ಹೊತ್ತಿದೆ’ ಎಂದು ಪ್ರತಿದಾಳಿಯ ಸುಳಿವನ್ನೂ ನೀಡಿದ್ದರು.
ಪುಲ್ವಾಮ ದಾಳಿಗೆ ಪ್ರತಿಯಾಗಿ ಪ್ರತ್ಯುತ್ತರ ನೀಡುವ ವಿಧಾನವನ್ನು ಆರಿಸಿಕೊಳ್ಳಲು ರಕ್ಷಣಾ ಪಡೆಗಳಿಗೆ ಪ್ರಧಾನಿ ಮೋದಿ ಸ್ವತಂತ್ರ ಅಧಿಕಾರ ನೀಡಿದ್ದರು. ವೈರಿಗಳ ಹುಟ್ಟಡಗಿಸಲು ಸೂಕ್ತ ಸಮಯ, ಸ್ಥಳ ಮತ್ತು ದಾರಿ ನಿರ್ಧರಿಸಲು ಸೇನೆಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಬಳಿಕ, ಫೆ.26ರಂದು ಗಡಿನಿಯಂತ್ರಣ ರೇಖೆ (LOC) ದಾಟಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಶಿಬಿರಗಳನ್ನು ಗುರಿಯಾಗಿಸಿ ಭಾರತೀಯ ವಾಯುಪಡೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಬಾಲಾಕೋಟ್ನಲ್ಲಿ ನಸುಕಿನಲ್ಲಿ ನಡೆದ ದಾಳಿಗೆ ಉಗ್ರ ಸಮೂಹ ತತ್ತರಿಸಿ ಹೋಗಿತ್ತು.
ಭಾರತೀಯ ವಾಯುಪಡೆ (IAF) ದಾಳಿಗೆ ಸುಮಾರು 350ಕ್ಕೂ ಅಧಿಕ ಉಗ್ರರು ಹತರಾಗಿದ್ದರು. 1971ರ ಯುದ್ಧದ ಬಳಿಕ ಮೊದಲ ಬಾರಿಗೆ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆ (LOC) ದಾಟಿತ್ತು.
ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯನ್ನು ದೇಶಾದ್ಯಂತ ಜನರು ಖಂಡಿಸಿದ್ದರು. ವಿಶ್ವದ ವಿವಿಧ ರಾಷ್ಟ್ರಗಳು ಕೂಡ ಈ ದುಷ್ಕೃತ್ಯವನ್ನು ವಿರೋಧಿಸಿದ್ದರು. ಚೀನಾ ಕೂಡ ಉಗ್ರರ ದಾಳಿಯನ್ನು ಖಂಡಿಸಿತ್ತು.
ಇದನ್ನೂ ಓದಿ: ಪುಲ್ವಾಮಾ ದಾಳಿ: ಉಗ್ರರಿಗೆ ಸಹಕರಿಸಿದ್ದ ದೇಶದ್ರೋಹಿ ಎನ್ಐಎ ಬಲೆಗೆ
ಪುಲ್ವಾಮಾ ದಾಳಿಕೋರನ ಜೊತೆ ಲವ್ ಅಫೇರ್, ಜೈಲು ಸೇರಿದ ಕಾಶ್ಮೀರದ ರೈಫಲ್ ಸುಂದರಿ