ಅದೊಂದು ದಾಳಿ ಇಡೀ ಭಾರತವನ್ನೇ ಬೆಚ್ಚಿಬೀಳಿಸಿತ್ತು. ಆ ದಾಳಿ ಭಾರತದ ಪ್ರತಿಯೊಬ್ಬ ಪ್ರಜೆಯನ್ನ ಕೆಣಕಿತ್ತು. ಅಲ್ಲಿ ನೆತ್ತರು ಹರಿಸಿದ ಯೋಧರ ಸಾವಿಗೆ, ಪ್ರತೀಕಾರದ ಕಿಚ್ಚು ಕೂಡ ಮೊಳಗಿತ್ತು. ಇಷ್ಟೆಲ್ಲಾ ನಡೆದು 1 ವರ್ಷ ಕಳೆಯುವ ಹೊತ್ತಿನಲ್ಲೇ, ರಾಕ್ಷಸಿ ಕೃತ್ಯಕ್ಕೆ ಸಹಾಯ ಮಾಡಿದ್ದ ಕಟುಕನನ್ನ ಬೋನಿಗೆ ದಬ್ಬಲಾಗಿದೆ.
ಉಗ್ರ ಕ್ರಿಮಿಯನ್ನು ಬಲೆಗೆ ಕೆಡವಿದ ‘ಎನ್‌ಐಎ’..! ಪುಲ್ವಾಮಾ ಹೆಸರು ಕೇಳಿದರೆ ಸಾಕು ಪ್ರತಿಯೊಬ್ಬ ಭಾರತೀಯನ ಎದೆಯಲ್ಲೂ ನಡುಕ, ಆಕ್ರೋಶ ಒಟ್ಟೊಟ್ಟಿಗೆ ಮೊಳಗುತ್ತದೆ. ಯಾಕಂದ್ರೆ ಪುಲ್ವಾಮಾದಲ್ಲಿ ಪಾಪಿ ಪಾಕಿಸ್ತಾನ ಪ್ರೇರೇಪಿತ ಉಗ್ರಪಡೆ ನಡೆಸಿದ ದಾಳಿಯೇ ಅಂತಹದ್ದು. 40 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದಿದ್ದ ಪುಲ್ವಾಮದ ಆತ್ಮಹತ್ಯಾ ದಾಳಿ, ಭಾರತದ ಇತಿಹಾಸದ ಪುಟದಲ್ಲಿ ಎಂದಿಗೂ ಅಳಿಸಲಾಗದ ಕಪ್ಪು ಚುಕ್ಕೆ. ಇನ್ನು ಈ ದಾಳಿಗೆ ನೆರವು ನೀಡಿದ್ದ ಕ್ರಿಮಿಯೊಬ್ಬ ಬಲೆಗೆ ಬಿದ್ದಿದ್ದಾನೆ.
ಪುಲ್ವಾಮಾ ದಾಳಿಗೆ ಸಹಕರಿಸಿದ್ದ ದೇಶ ದ್ರೋಹಿ ಅಂದರ್ ಅಂದಹಾಗೆ ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಶಾಕಿರ್ ಬಶೀರ್ ಮಾಗ್ರೆ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ನಿನ್ನೆ ಬಂಧಿಸಿದ್ದಾರೆ. ಪುಲ್ವಾಮ ದಾಳಿಕೋರ ಆದಿಲ್ ಅಹ್ಮದ್ ದರ್‌ಗೆ ಅಗತ್ಯ ಸಾರಿಗೆ ಸಹಕಾರ ಮತ್ತು ವಾಸ್ತವ್ಯವನ್ನ ಶಾಕಿರ್ ಒದಗಿಸಿದ್ದ ಎನ್ನಲಾಗಿದೆ. ಅಲ್ದೆ ದಾಳಿಗೆ ಉಗ್ರ ದರ್ ಬಳಸಿದ್ದ ಈಕೋ ಕಾರನ್ನ ಅಗತ್ಯತೆಗೆ ತಕ್ಕಂತೆ ಮಾರ್ಪಾಡು ಮಾಡಿ ಅದಕ್ಕೆ ಸುಧಾರಿತ ಸ್ಫೋಟಕ ಸಾಧನ ಅಥವಾ ಐಇಡಿ ಅಳವಡಿಸುವಲ್ಲಿ ಈ ಶಾಕಿರ್ ಪ್ರಮುಖ ಪಾತ್ರವಹಿಸಿದ್ದ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ. ಇದಷ್ಟೇ ಅಲ್ಲ, ದಾಳಿಯಲ್ಲಿ ಬಂಧಿತ ಉಗ್ರ ಇನ್ನೂ ಮಹತ್ವದ ಪಾತ್ರ ವಹಿಸಿದ್ದ.
‘ಆನ್ಲೈನ್ ಬಾಂಬ್’ ಶಾಪಿಂಗ್..! ಪುಲ್ವಾಮ ದಾಳಿಕೋರ ಆದಿಲ್ ಮತ್ತು ಉಗ್ರ ಮೊಹಮ್ಮದ್ ಉಮರ್ ಫಾರೂಕ್‌ಗೆ ದಾಳಿ ನಡೆಸುವ ತನಕ ಆಶ್ರಯ ನೀಡಿದ್ದ ಶಾಕಿರ್. ನೈಟ್ರೋ-ಗ್ಲಿಸರೀನ್, ಅಮ್ಮೊನಿಯಂ ನೈಟ್ರೇಟ್ ಸೇರಿದಂತೆ ದಾಳಿಗೆ ಅಗತ್ಯವಿರುವ ಕೆಮಿಕಲ್ಗಳನ್ನ ಆನ್ಲೈನ್ನಲ್ಲಿ ಖರೀದಿಸಿದ್ದ. ಇದಷ್ಟೇ ಅಲ್ಲ, ಬಾಂಬ್ ಸ್ಫೋಟಿಸಲು ದಾಳಿಕೋರನಿಗೆ ಬೇಕಾಗಿದ್ದ ಎಲ್ಲವನ್ನೂ ಇದೇ ಶಾಕಿರ್ ಪೂರೈಸಿದ್ದನಂತೆ. ಹಾಗೇ ದಾಳಿ ನಡೆದ ದಿನ ದಾಳಿ ನಡೆಯುವ ಸ್ಥಳಕ್ಕಿಂತಲೂ ಸುಮಾರು 500 ದೂರದಲ್ಲೇ ಇಳಿದು ಎಸ್ಕೇಪ್ ಆಗಿದ್ದ. ಹೀಗೆ ಪ್ರಾಥಮಿಕ ಹಂತದ ವಿಚಾರಣೆಯಲ್ಲೇ ಶಾಕಿರ್ ಹಲವು ಸ್ಫೋಟಕ ಮಾಹಿತಿಗಳನ್ನ ಹೊರ ಹಾಕಿದ್ದು, ಶಾಕಿರ್ ವಿಚಾರಣೆ ತೀವ್ರಗೊಂಡಿದೆ.
ಒಟ್ನಲ್ಲಿ ಪುಲ್ವಾಮ ದಾಳಿಯ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಭಾರತದಲ್ಲೇ ಇದ್ದು ದಾಳಿಗೆ ಉಗ್ರ ಕ್ರಿಮಿಗಳನ್ನ ಬೆಂಬಲಿಸಿದ್ದ ದೇಶದ್ರೋಹಿ ಎನ್‌ಐಎ ಬಲೆಗೆ ಬಿದ್ದಿದ್ದಾನೆ. ಈತನನ್ನ ಇನ್ನೂ 15 ದಿನಗಳ ಕಾಲ ಎನ್‌ಐಎ ವಶಕ್ಕೆ ಕೋರ್ಟ್ ನೀಡಿದೆ. ಮತ್ತಷ್ಟು ಬೆಚ್ಚಿಬೀಳಿಸುವ ಸಂಗತಿಗಳು ಇವನಿಂದ ರಿವೀಲ್ ಆದರೆ ಆಶ್ಚರ್ಯವೇನಿಲ್ಲ.