ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ದಸರಾ ರ್ಯಾಲಿ ಆಯೋಜಿಸಲು ಉದ್ಧವ್​​​ ಠಾಕ್ರೆಯ ಶಿವಸೇನಾಗೆ ಬಾಂಬೆ ಹೈಕೋರ್ಟ್ ಅನುಮತಿ

| Updated By: ರಶ್ಮಿ ಕಲ್ಲಕಟ್ಟ

Updated on: Sep 23, 2022 | 5:42 PM

ಕಕ್ಷಿದಾರರ ಹಕ್ಕು ವಿವಾದ ಇತ್ಯರ್ಥವಾಗುವವರೆಗೆ ಅರ್ಜಿಯ ಕುರಿತು ತೀರ್ಮಾನಿಸದಂತೆ ಶಿಂಧೆ ಬಣದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ದಸರಾ ರ್ಯಾಲಿ ಆಯೋಜಿಸಲು ಉದ್ಧವ್​​​ ಠಾಕ್ರೆಯ ಶಿವಸೇನಾಗೆ ಬಾಂಬೆ ಹೈಕೋರ್ಟ್ ಅನುಮತಿ
ಉದ್ಧವ್ ಠಾಕ್ರೆ
Image Credit source: NDTV
Follow us on

ಮುಂಬೈ: ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ದಸರಾ ರ್ಯಾಲಿ (Dussehra Rally) ಆಯೋಜಿಸಲು ಉದ್ಧವ್ ಠಾಕ್ರೆ (Uddhav Thckeray) ನೇತೃತ್ವದ ಶಿವಸೇನೆಗೆ ಬಾಂಬೆ ಹೈಕೋರ್ಟ್ (Bombay High Court) ಅನುಮತಿ ನೀಡಿದ್ದು ಶಿವಸೇನಾದ ಏಕನಾಥ್ ಶಿಂಧೆ ಬಣಕ್ಕೆ ಇದು ದೊಡ್ಡ ಹೊಡೆತವಾಗಿದೆ.  ಕಕ್ಷಿದಾರರ ಹಕ್ಕು ವಿವಾದ ಇತ್ಯರ್ಥವಾಗುವವರೆಗೆ ಅರ್ಜಿಯ ಕುರಿತು ತೀರ್ಮಾನಿಸದಂತೆ ಶಿಂಧೆ ಬಣದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಶಿಂಧೆ ಬಣದ ಸದಸ್ಯ  ದಾದರ್ ಶಾಸಕ ಸದಾ ಸರ್ವಂಕರ್ ಅವರು ಪ್ರಸ್ತುತ ಅರ್ಜಿಯ ಅಡಿಯಲ್ಲಿ ಅರ್ಜಿದಾರರು (ಠಾಕ್ರೆ ನೇತೃತ್ವದ ಶಿವಸೇನಾ) ಪಕ್ಷದ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಾದಿಸಿದ್ದರು. ಸೆಂಟ್ರಲ್ ಮುಂಬೈನಲ್ಲಿರುವ ಶಿವಾಜಿ ಪಾರ್ಕ್‌ನಲ್ಲಿ ಶಿವಸೇನಾದ ವಾರ್ಷಿಕ ದಸರಾ ರ್ಯಾಲಿಯನ್ನು ನಡೆಸಲು ಅನುಮತಿ ಕೋರಿ ಆಗಸ್ಟ್ 30 ರಂದು ಮುಂಬೈ ನಾಗರಿಕ ಸಂಸ್ಥೆಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಸರ್ವಾಂಕರ್ ಹೇಳಿದರು. ಏಕನಾಥ್ ಶಿಂಧೆ ಅವರಿಗೆ ಬಹುಮತದ ಬೆಂಬಲವಿದ್ದು ಉದ್ಧವ್ ಠಾಕ್ರೆ ಅವರಿಗೆ ಪಕ್ಷದೊಳಗೆ ಯಾವುದೇ ಬೆಂಬಲವಿಲ್ಲ ಎಂದು ಅವರು ಹೇಳಿದ್ದಾರೆ.

ನ್ಯಾಯಮೂರ್ತಿಗಳಾದ ಆರ್ ಡಿ ಧನುಕಾ ಮತ್ತು ಕಮಲ್ ಖಾತಾ ಅವರ ವಿಭಾಗೀಯ ಪೀಠವು ಅನುಮತಿ ನಿರಾಕರಿಸಿದ ಮುಂಬೈ ನಾಗರಿಕ ಸಂಸ್ಥೆಯ ಆದೇಶವನ್ನು ಪ್ರಶ್ನಿಸಿ ಠಾಕ್ರೆ ಬಣ ಮತ್ತು ಅದರ ಕಾರ್ಯದರ್ಶಿ ಅನಿಲ್ ದೇಸಾಯಿ ಸಲ್ಲಿಸಿದ ಅರ್ಜಿಯನ್ನು ಅಂಗೀಕರಿಸಿತು. ಅರ್ಜಿದಾರರ ಅರ್ಜಿಯನ್ನು ನಿರ್ಧರಿಸುವಲ್ಲಿ ಮುಂಬೈ ನಾಗರಿಕ ಸಂಸ್ಥೆ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ನ್ಯಾಯಾಲಯ ಹೇಳಿದೆ. ನಮ್ಮ ದೃಷ್ಟಿಯಲ್ಲಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲೇಖಿಸಿ ಅರ್ಜಿಯನ್ನು ತಿರಸ್ಕರಿಸುವ ಬಿಎಂಸಿಯ ಆದೇಶವು ಕಾನೂನಿನ ಪ್ರಕ್ರಿಯೆಯ ಸ್ಪಷ್ಟ ದುರುಪಯೋಗವಾಗಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ಠಾಕ್ರೆ ನೇತೃತ್ವದ ಪಕ್ಷವು ಅಕ್ಟೋಬರ್ 2 ರಿಂದ ಅಕ್ಟೋಬರ್ 6 ರವರೆಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಮೈದಾನದಲ್ಲಿ ದಸರಾ ರ್ಯಾಲಿ ನಡೆಸಲು ನ್ಯಾಯಾಲಯವು ಅನುಮತಿ ನೀಡಿದೆ.

ದಾದರ್ ಶಾಸಕರು ಗುರುವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾದ ಅರ್ಜಿಯನ್ನು ನ್ಯಾಯಾಲಯವು ಆಲಿಸಬಾರದು ಅಥವಾ ತೀರ್ಮಾನಿಸಬಾರದು ಎಂದು ಕೋರಿದ್ದರು. ಮುಂಬೈ ಪೊಲೀಸರು ಎತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಕಾಳಜಿಯ ಆಧಾರದ ಮೇಲೆ ಪ್ರಸಿದ್ದ ಶಿವಾಜಿ ಪಾರ್ಕ್‌ನಲ್ಲಿ ದಸರಾ ರ್ಯಾಲಿ ನಡೆಸಲು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಹಾಗೂ ಏಕನಾಥ್ ಶಿಂಧೆ ಬಣಕ್ಕೆ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನಿನ್ನೆ ಅನುಮತಿ ನಿರಾಕರಿಸಿತ್ತು. ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂಧೆ ನೇತೃತ್ವದ ಬಂಡಾಯ ಬಣವು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ರ್ಯಾಲಿಗೆ ಈಗಾಗಲೇ ಅನುಮತಿ ಪಡೆದಿದೆ.

ನ್ಯಾಯಾಲಯದ ಆದೇಶದ ನಂತರ ಪ್ರತಿಕ್ರಿಯಿಸಿದ  ಮಹಾರಾಷ್ಟ್ರ ಶಿಕ್ಷಣ ಸಚಿವ ಮತ್ತು ಶಿಂಧೆ ಬಣದ ವಕ್ತಾರ ದೀಪಕ್ ಕೇಸರ್ಕರ್ ನ್ಯಾಯಾಲಯವು ಏನು ನಿರ್ಧರಿಸುತ್ತದೆಯೋ ಅದು ಎಲ್ಲರಿಗೂ ಬದ್ಧವಾಗಿದೆ” ಎಂದು ಅದು ಹಿನ್ನಡೆಯಲ್ಲ ಎಂದು ಹೇಳಿದ್ದಾರೆ. “ನಾವು ಅದನ್ನು ಬೇರೆಡೆ ನಡೆಸುತ್ತೇವೆ” ಎಂದು ಹೇಳಿದ ಅವರು ಮಹಾರಾಷ್ಟ್ರದಾದ್ಯಂತದ ಜನರನ್ನು ವಾರ್ಷಿಕ ದಸರಾ ರ್ಯಾಲಿಯಲ್ಲಿ ಸೇರುವಂತೆ ಒತ್ತಾಯಿಸಿದರು.
ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದು, ಸತ್ಯವನ್ನು ಎತ್ತಿ ಹಿಡಿದಿದ್ದಕ್ಕಾಗಿ ಹೈಕೋರ್ಟ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Published On - 4:59 pm, Fri, 23 September 22