ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಅವರ ಸಂಬಂಧಿಗೆ ಸೇರಿದ 6 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ED) ಇಂದು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಥಾಣೆಯಲ್ಲಿರುವ ‘ನೀಲಾಂಬರಿ’ ಯೋಜನೆಯಲ್ಲಿನ 11 ವಸತಿ ಘಟಕಗಳು ಸೇರಿದಂತೆ ಹಲವು ಆಸ್ತಿಗಳು ಮುಖ್ಯಮಂತ್ರಿಯವರ ಸೋದರ ಮಾವ ಶ್ರೀಧರ್ ಪಾಟಂಕರ್ ಒಡೆತನದ ಕಂಪನಿಯ ಭಾಗವಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ.
ಮಹಾರಾಷ್ಟ್ರದಲ್ಲಿನ ಶಿವಸೇನಾ ನೇತೃತ್ವದ ಮೈತ್ರಿ ಸರ್ಕಾರವು ವಿರೋಧ ಪಕ್ಷವಾದ ಬಿಜೆಪಿ ನಾಯಕರು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ. 2019ರಲ್ಲಿ ಅಧಿಕಾರ ಹಂಚಿಕೆ ವಿಚಾರದಲ್ಲಿ ಶಿವಸೇನೆ ಮತ್ತು ಬಿಜೆಪಿ ದಶಕಗಳಷ್ಟು ಹಳೆಯ ಸಂಬಂಧವನ್ನು ಕಡಿದುಕೊಂಡಿದ್ದವು. ಅದರ ನಂತರ ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಶಿವಸೇನೆ ಸರ್ಕಾರವನ್ನು ರಚಿಸಿತು.
ಇಡಿ ಈ ಹಿಂದೆ ಮಹಾರಾಷ್ಟ್ರದ ಇಬ್ಬರು ರಾಜ್ಯ ಕ್ಯಾಬಿನೆಟ್ ಸಚಿವರು ಮತ್ತು ಎನ್‌ಸಿಪಿ ನಾಯಕರಾದ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಬಂಧಿಸಿತ್ತು. ಇಬ್ಬರೂ ಪ್ರಸ್ತುತ ಜೈಲಿನಲ್ಲಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸೋದರ ಮಾವನ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 6.45 ಕೋಟಿ ರೂ. ಆಸ್ತಿಯನ್ನು ಫ್ರೀಜ್ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯು ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ, ಸಚಿವ ಮತ್ತು ಸಹೋದ್ಯೋಗಿ ಅನಿಲ್ ಪರಬ್ ಅವರಿಗೆ ಸಂಬಂಧಿಸಿರುವ ಐಟಿ ದಾಳಿಗಳನ್ನು ನಡೆಸಿದ ಎರಡು ವಾರಗಳ ನಂತರ ಇದೀಗ ಅವರ ಸೋದರ ಮಾವನ ಮೇಲೆ ಇಡಿ ದಾಳಿ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ದಾಳಿ ನಡೆಸುತ್ತಿದೆ ಎಂದು ಶಿವಸೇನೆ ನಾಯಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಮುಂಬೈನಲ್ಲಿ ಉದ್ಧವ್ ಠಾಕ್ರೆ ಭೇಟಿ ಮಾಡಿದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್
ಶಿವಸೇನೆ ಆಪ್ತರಿಗೆ ಸೇರಿದ 12 ಸ್ಥಳಗಳಲ್ಲಿ ಐಟಿ ದಾಳಿ; ಬಿಜೆಪಿ ವಿರುದ್ಧ ಆದಿತ್ಯ ಠಾಕ್ರೆ ಕಿಡಿ
Published On - 7:34 pm, Tue, 22 March 22