
ನವದೆಹಲಿ, ಡಿಸೆಂಬರ್ 24: ಡೆಲ್ಲಿ ಮೆಟ್ರೋ ಜಾಲ (Delhi Metro) ಮತ್ತಷ್ಟು ವಿಸ್ತರಣೆಯಾಗಲಿದೆ. 12,015 ಕೋಟಿ ರೂ ವೆಚ್ಚದಲ್ಲಿ ಮೆಟ್ರೋ ವಿಸ್ತರಣೆಯ ಯೋಜನೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಕೇಂದ್ರ ಸಚಿವ ಎ ವೈಷ್ಣವ್ ಅವರು ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಡೆಲ್ಲಿ ಮೆಟ್ರೋ ಫೇಸ್-5 (ಎ) ಪ್ರಾಜೆಕ್ಟ್ ಅಡಿಯಲ್ಲಿ ಮೂರು ಹೊಸ ಕಾರಿಡಾರ್ ಮೊದಲಾದವರು ನಿರ್ಮಾಣವಾಗಲಿವೆ. ಈ ಮೂರು ಕಾರಿಡಾರ್ಗಳ ಒಟ್ಟು ಉದ್ದ 16.076 ಕಿಮೀ ಆಗಿರಲಿದೆ.
ಪ್ರಸ್ತಾಪವಾಗಿರುವ ಯೋಜನೆಯಲ್ಲಿ 16 ಕಿಮೀ ಜಾಲ ವಿಸ್ತರಣೆ ಆಗುವುದರ ಜೊತೆಗೆ 13 ಹೊಸ ಮೆಟ್ರೋ ಸ್ಟೇಷನ್ಗಳು ನಿರ್ಮಾಣವಾಗಲಿವೆ. ಈ ಪೈಕಿ 10 ಸುರಂಗ ನಿಲ್ದಾಣಗಳಾದರೆ, ಉಳಿದ ಮೂರು ಎಲಿವೇಟೆಡ್ ನಿಲ್ದಾಣವಾಗಲಿವೆ. ಸದ್ಯ ಡೆಲ್ಲಿ ಮೆಟ್ರೋ ಭಾರತದಲ್ಲಿರುವ ಅತಿದೊಡ್ಡ ಮೆಟ್ರೋ ಜಾಲ ಎನಿಸಿದೆ. 395 ಕಿಮೀ ಉದ್ದದ ನೆಟ್ವರ್ಕ್ ಹೊಂದಿದೆ. ಈಗ ಐದನೇ ಹಂತದ ಮೆಟ್ರೋ ಕಾಮಗಾರಿ ಪೂರ್ಣಗೊಂಡರೆ, ಇದರ ಒಟ್ಟು ಜಾಲ 400 ಕಿಮೀ ದಾಟುತ್ತದೆ.
ಇದನ್ನೂ ಓದಿ: ದೆಹಲಿ ಮಾಲಿನ್ಯದ ಭೀಕರತೆಯನ್ನು ತೆರೆದಿಟ್ಟ ಸಚಿವ ನಿತಿನ್ ಗಡ್ಕರಿ
ಭಾರತದ ಕೆಲವು ನಗರಗಳಲ್ಲಿ ಮೆಟ್ರೋ ರೈಲು ಸೇವೆ ಇದೆ. ಡೆಲ್ಲಿ ಮೆಟ್ರೋ 400 ಕಿಮೀಯೊಂದಿಗೆ ಅತಿದೊಡ್ಡ ಜಾಲ ಹೊಂದಿದೆ. ಬೆಂಗಳೂರಿನ ನಮ್ಮ ಮೆಟ್ರೋ ಎರಡನೇ ಸ್ಥಾನ ಪಡೆಯುತ್ತದೆ. ಇದು ಸುಮಾರು 100 ಕಿಮೀ ಜಾಲ ಹೊಂದಿದೆ. ಹೈದರಬಾದ್, ಮುಂಬೈ ಮತ್ತು ಕೋಲ್ಕತಾದ ಮೆಟ್ರೋಗಳ ಜಾಲ 50ರಿಂದ 80 ಕಿಮೀ ಇದೆ.
ಇದನ್ನೂ ಓದಿ: ಇಸ್ರೋದಿಂದ ಐತಿಹಾಸಿಕ ಸಾಧನೆ, ಬ್ಲೂಬರ್ಡ್ ಬ್ಲಾಕ್-2 ಇಂಟರ್ನೆಟ್ ಉಪಗ್ರಹ ಯಶಸ್ವಿ ಉಡಾವಣೆ
ಭಾರತದ ಮೆಟ್ರೋ ಜಾಲವು ವಿಶ್ವದಲ್ಲೇ ಮೂರನೇ ಗರಿಷ್ಠ ಮಟ್ಟದ್ದೆನಿಸಿದೆ. ಡೆಲ್ಲಿ ಮೆಟ್ರೋ, ಬೆಂಗಳೂರು ಮೆಟ್ರೋ ಸೇರಿ ಒಟ್ಟು ಮೆಟ್ರೋಗಳ ಒಟ್ಟೂ ಜಾಲ ಸುಮಾರು 1,000ದಿಂದ 1,100 ಕಿಮೀಯಷ್ಟಾಗುತ್ತದೆ.
ಮೆಟ್ರೋ ಮತ್ತು ಹೈಸ್ಪೀಡ್ ನೆಟ್ವರ್ಕ್ನಲ್ಲಿ ಬಹಳ ಮುಂದಿರುವ ಚೀನಾದಲ್ಲಿ ಬರೋಬ್ಬರಿ 11,000ಕ್ಕೂ ಅಧಿಕ ಕಿಮೀಗಳಷ್ಟು ಮೆಟ್ರೋ ಜಾಲ ಇದೆ. ಅಮೆರಿಕ ತನ್ನ ವಿವಿಧ ನಗರಗಳನ್ನು ಸೇರಿಸಿದರೆ ಸುಮಾರು 1,400 ಕಿಮೀ ಮೆಟ್ರೋ ಜಾಲ ಹೊಂದಿದೆ. ನಂತರದ ಸ್ಥಾನ ಭಾರತದ್ದು. ಆದರೆ, ವಿವಿಧ ನಗರಗಳಲ್ಲಿ ಮೆಟ್ರೋ ಜಾಲ ಕ್ಷಿಪ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲ ವರ್ಷಗಳಲ್ಲಿ ಭಾರತದ ಮೆಟ್ರೋ ಜಾಲ ಅಮೆರಿಕದ್ದನ್ನೂ ಮೀರಿಸುವ ಸಂಭವ ಇದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ