MPLAD ಯೋಜನೆಯನ್ನು ಮರುಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ನಿರ್ಧಾರ: ಕೇಂದ್ರ ಸಚಿವ ಅನುರಾಗ್ ಠಾಕೂರ್

| Updated By: ರಶ್ಮಿ ಕಲ್ಲಕಟ್ಟ

Updated on: Nov 10, 2021 | 4:57 PM

Anurag Thakur ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, 2021-22 ರ ಆರ್ಥಿಕ ವರ್ಷದ ಉಳಿದ ಭಾಗಕ್ಕೆ ಯೋಜನೆಯನ್ನು ಪುನಃಸ್ಥಾಪಿಸಲಾಗಿದೆ ಎಂದು ಹೇಳಿದರು

MPLAD ಯೋಜನೆಯನ್ನು ಮರುಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ನಿರ್ಧಾರ: ಕೇಂದ್ರ ಸಚಿವ ಅನುರಾಗ್ ಠಾಕೂರ್
ಅನುರಾಗ್ ಠಾಕೂರ್
Follow us on

ದೆಹಲಿ: ಕೊವಿಡ್ -19 (Covid-19)  ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ರದ್ದು ಮಾಡಲಾಗಿದ್ದ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS) ಮರುಸ್ಥಾಪನೆ ಮತ್ತು ಮುಂದುವರಿಕೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ (Anurag Thakur) 2021-22 ರ ಆರ್ಥಿಕ ವರ್ಷದ ಉಳಿದ ಭಾಗಕ್ಕೆ ಯೋಜನೆಯನ್ನು ಪುನಃಸ್ಥಾಪಿಸಲಾಗಿದೆ ಎಂದು ಹೇಳಿದರು. ಯೋಜನೆಯು 2025-26 ರವರೆಗೆ ಮುಂದುವರಿಯುತ್ತದೆ.  2021-22ರ ಉಳಿದ ಅವಧಿಗೆ ಪ್ರತಿ ಸಂಸದರಿಗೆ 2 ಕೋಟಿ ರೂ.ನಂತೆ ಒಂದೇ ಕಂತಿನಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದರು. 2022-23 ರಿಂದ 2025-26 ರವರೆಗೆ ಈ ಯೋಜನೆಯಡಿಯಲ್ಲಿ ಪ್ರತಿ ಸಂಸದರಿಗೆ ತಲಾ 2.5 ಕೋಟಿ ರೂ.ಗಳಂತೆ ಎರಡು ಕಂತುಗಳಲ್ಲಿ ವಾರ್ಷಿಕ 5 ಕೋಟಿ ರೂ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.  ಕಳೆದ ವರ್ಷ ಏಪ್ರಿಲ್‌ನಲ್ಲಿ, ಸರ್ಕಾರವು 2020-21 ಮತ್ತು 2021-22 ರ ಅವಧಿಯಲ್ಲಿ MPLADS ಅನ್ನು ಸ್ಥಗಿತಗೊಳಿಸಿದ್ದು ಹಣವನ್ನು ಆರೋಗ್ಯ ಸೇವೆಗಳನ್ನು ನಿರ್ವಹಿಸಲು ಮತ್ತು ದೇಶದಲ್ಲಿ ಕೊವಿಡ್ -19 ಸಾಂಕ್ರಾಮಿಕದ ಪ್ರತಿಕೂಲ ಪರಿಣಾಮಕ್ಕಾಗಿ ಬಳಸಲಾಗುವುದು ಎಂದು ಹೇಳಿತ್ತು. ಯೋಜನೆಯಡಿ, ಸಂಸದರು ತಮ್ಮ ಕ್ಷೇತ್ರಗಳಲ್ಲಿ ಪ್ರತಿ ವರ್ಷ 5 ಕೋಟಿ ರೂಪಾಯಿ ವೆಚ್ಚವನ್ನು ಒಳಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಶಿಫಾರಸು ಮಾಡಬಹುದು.


ಸುದ್ದಿಗೋಷ್ಠಿಯ ಮುಖ್ಯಾಂಶಗಳು
ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದ ಅಡಿಯಲ್ಲಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಂದ ಎಥೆನಾಲ್ ಅನ್ನು ಸಂಗ್ರಹಿಸುವ ಕಾರ್ಯವಿಧಾನವನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಸಿ ಹೆವಿ ಸಿ ಮೊಲಸಿಸ್ ನಿಂದ ಎಥೆನಾಲ್‌ನ ಬೆಲೆ ರೂ 46.66/ಲೀಟರ್‌ಗೆ ಏರಿಕೆಯಾಗಿದೆ. ಬಿ ಹೆವಿ ಸಿ ಮೊಲಸಿಸ್ ನಿಂದ ಎಥೆನಾಲ್‌ನ ಬೆಲೆ ಲೀಟರ್‌ಗೆ 59.08 ರೂ.ಗೆ ಏರಿಕೆಯಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.


ಜೂಟ್ ಪ್ಯಾಕೇಜಿಂಗ್ ಮೆಟೀರಿಯಲ್ ಆಕ್ಟ್, 1987 ರ ಅಡಿಯಲ್ಲಿ 2021-22 ರ ಸೆಣಬಿನ ಪ್ಯಾಕೇಜಿಂಗ್ ಮೆಟೀರಿಯಲ್‌ಗಳಿಗೆ ಮೀಸಲು ಮಾನದಂಡಗಳನ್ನು ಕ್ಯಾಬಿನೆಟ್ ಅನುಮೋದಿಸಿರುವುದರಿಂದ ಶೇ 100 ಆಹಾರ ಧಾನ್ಯಗಳು ಮತ್ತು ಶೇ20 ಸಕ್ಕರೆಯನ್ನು ಸೆಣಬಿನ ಚೀಲಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ.


ಭಾರತೀಯ ಹತ್ತಿ ನಿಗಮಕ್ಕೆ 17,408.85 ಕೋಟಿ ರೂ.ಗಳ ಬದ್ಧ ಬೆಲೆ ಬೆಂಬಲಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 2014-15 ರಿಂದ 2020-21 ರವರೆಗಿನ ಹತ್ತಿ ಋತುವಿನಲ್ಲಿ (ಅಕ್ಟೋಬರ್‌ನಿಂದ ಸೆಪ್ಟೆಂಬರ್) ಹತ್ತಿಗೆ ಎಂಎಸ್​​ಪಿ ಆಪ್‌ಗಳ ಅಡಿಯಲ್ಲಿ ನಷ್ಟವನ್ನು ಮರುಪಾವತಿಸಲು ಸಿಸಿಇಎ (CCEA) ಅನುಮೋದಿಸಿದೆ.


ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15 ಅನ್ನು ‘ಜನಜಾತಿಯ ಗೌರವ್ ದಿವಸ್’ ಎಂದು ಘೋಷಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಬುಡಕಟ್ಟು ಜನರು, ಸಂಸ್ಕೃತಿ ಮತ್ತು ಸಾಧನೆಗಳ ವೈಭವದ ಇತಿಹಾಸವನ್ನು ಆಚರಿಸಲು ಮತ್ತು ಸ್ಮರಿಸಲು 15-22 ನವೆಂಬರ್ 2021 ರಿಂದ ವಾರದ ಅವಧಿಯ ಆಚರಣೆಗಳನ್ನು ಯೋಜಿಸಲಾಗಿದೆ.

ಇದನ್ನೂ ಓದಿ: Chennai Rain ತಮಿಳುನಾಡು, ಪುದುಚೇರಿಯಲ್ಲಿ ರೆಡ್ ಅಲರ್ಟ್; ಮಳೆಗೆ ಬಲಿಯಾದವರ ಸಂಖ್ಯೆ 12ಕ್ಕೆ ಏರಿಕೆ

Published On - 4:50 pm, Wed, 10 November 21