ದೆಹಲಿ: ಜುಲೈ 8ರಂದು ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಂದು ಬೆಳಗ್ಗೆ 10.30ಕ್ಕೆ ಕೇಂದ್ರ ಸಂಪುಟ ವಿಸ್ತರಣೆಯಾಗಲಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಸರ್ಕಾರಕ್ಕೆ ನೂತನ ಸಚಿವರು ಸೇರ್ಪಡೆಗೊಳ್ಳಲಿದ್ದಾರೆ. ಕೇಂದ್ರ ಸಂಪುಟದಲ್ಲಿ ಕರ್ನಾಟಕದಿಂದ ಇಬ್ಬರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೇಂದ್ರ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಕ್ಷೇತ್ರದ ಸಂಸದ ನಾರಾಯಣಸ್ವಾಮಿಗೆ ಕೇಂದ್ರ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ವರಿಷ್ಠರು ಬುಲಾವ್ ನೀಡಿದ ಹಿನ್ನೆಲೆ ಮಧ್ಯಾಹ್ನ ದೆಹಲಿಗೆ ತೆರಳಲು ನಾರಾಯಣಸ್ವಾಮಿ ಸಿದ್ಧತೆ ಮಾಡಿಕೊಂಡಿದ್ದಾರೆ. ಪತ್ನಿ ವಿಜಯ ಮತ್ತು ಪುತ್ರಿ ಶೀತಲ್ ಸೇರಿ ಕುಟುಂಬ ಸಮೇತ ದೆಹಲಿಗೆ ತೆರಳಲಿದ್ದಾರೆ.
ಮೊದಲ ಬಾರಿಗೆ ಸಂಸದರಾಗಿರುವ ಎಡಗೈ ಸಮುದಾಯದ ನಾಯಕ ನಾರಾಯಣಸ್ವಾಮಿಗೆ ಮೋದಿ ಸಂಪುಟದಲ್ಲಿ ಸ್ಥಾನ ಸಿಗುತ್ತಾ? ಎಂದು ನೋಡಬೇಕಿದೆ. ನಾರಾಯಣಸ್ವಾಮಿಗೆ ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಸಚಿವ ಸ್ಥಾನ ಒಲಿಯುವ ಸಾಧ್ಯತೆ ಇದೆ. ಪರಿಶಿಷ್ಟ ಜಾತಿ ಎಡಗೈ ಸಮೂದಾಯಕ್ಕೆ ಸೇರಿರುವುದರಿಂದ ಸಚಿವ ಸ್ಥಾನ ಗಿಟ್ಟಿಸಿಕೊಳ್ಳು ಅವಕಾಶ ಇದೆ.
ಇನ್ನು ಜೆಡಿಯು ಪಕ್ಷದ ಲಾಲನ್ ಸಿಂಗ್, ಮಹಾರಾಷ್ಟ್ರದ ನಾರಾಯಣ್ ರಾಣೆ, ಅಸ್ಸಾಂ ಸರ್ಬಾನಂದ ಸೋನವಾಲ್ ಕೂಡ ಇಂದು ಮಧ್ಯಾಹ್ನ ದೆಹಲಿಗೆ ಆಗಮಿಸಲಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾಗೆ ಸಂಪುಟದಲ್ಲಿ ಸ್ಥಾನ ಬಹುತೇಕ ಖಚಿತವಾಗಿದೆ. ಹೀಗಾಗಿ ಜ್ಯೋತಿರಾದಿತ್ಯ ಮಧ್ಯಪ್ರದೇಶ ಇಂದೋರ್ನಿಂದ ದೆಹಲಿಗೆ ಆಗಮಿಸಿದ್ದಾರೆ.
ಇನ್ನು ದಿವಂಗತ ರಾಮವಿಲಾಸ್ ಪಾಸ್ವಾನ್ ಸೋದರ ಪಶುಪತಿ ಪಾರಸ್ ಕುರ್ತಾ ಖರೀದಿ ಮಾಡುತ್ತಿದ್ದಾರೆ. ಕೇಂದ್ರದ ಕ್ಯಾಬಿನೆಟ್ನಲ್ಲಿ ಎಲ್ಜೆಪಿ ಪಕ್ಷದ ಕೋಟಾದಲ್ಲಿ ಪಶುಪತಿಪಾರಸ್ಗೆ ಸ್ಥಾನ ಸಿಗುವ ಸಾಧ್ಯತೆ ಇದೆ. ಬಿಹಾರದ ಜೆಡಿಯು ಪಕ್ಷದ ಸಿ.ಪಿ.ಸಿಂಗ್ ಕೂಡ ದೆಹಲಿಗೆ ಆಗಮಿಸಲಿದ್ದಾರೆ. ಜೆಡಿಯು ಕೋಟಾದಲ್ಲಿ ಸಿ.ಪಿ.ಸಿಂಗ್ಗೆ ಸಚಿವ ಸ್ಥಾನ ಸಾಧ್ಯತೆ ಇದೆ. ಇಂದು ಸಂಜೆ 5 ಗಂಟೆಗೆ ಮೋದಿ ಕರೆದಿದ್ದ ಸಚಿವರ ಸಭೆ ರದ್ದಾಗಿದೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರಿಗೆ ದೆಹಲಿಗೆ ಬರುವಂತೆ ಸೂಚನೆ ಹಿನ್ನೆಲೆಯಲ್ಲಿ ಎಲ್ಲರೂ ಆಗಮಿಸಲಿದ್ದಾರೆ.
ಇದನ್ನೂ ಓದಿ:
(Union Cabinet expansion to be held on July 8 morning says source)
Published On - 2:50 pm, Tue, 6 July 21