ಪಂಚ ರಾಜ್ಯ ಚುನಾವಣೆ ಮೇಲೆ ಕಣ್ಣಿಟ್ಟು ಗುರುವಾರ ಬೆಳಗ್ಗೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಮಣೆ
PM Modi Cabinet: ಇಬ್ಬರು ಸಚಿವರ ನಿಧನ, ಮೋದಿ ಸರ್ಕಾರಕ್ಕೆ ಶಿವಸೇನೆ, ಅಕಾಲಿದಳ ಗುಡ್ ಬೈ ಹೇಳಿದ್ದರಿಂದ ಕೆಲ ಸಚಿವ ಸ್ಥಾನ ಖಾಲಿಯಾಗಿವೆ. ಸದ್ಯ ಮೋದಿ ಕ್ಯಾಬಿನೆಟ್ ನಲ್ಲಿ 53 ಮಂದಿ ಸಚಿವರಿದ್ದಾರೆ. ಇನ್ನೂ 28 ಮಂದಿಯ ಸಂಪುಟ ಸೇರ್ಪಡೆಗೆ ಅವಕಾಶವಿದೆ. ಹೀಗಾಗಿ 20ಕ್ಕೂ ಹೆಚ್ಚು ಸಂಸದರಿಗೆ ಈಗ ಸಚಿವರಾಗುವ ಅವಕಾಶ ಇದೆ. ಜೊತೆಗೆ ರಾಜಕೀಯ ಅನಿವಾರ್ಯತೆಯ ಕಾರಣಗಳಿಗಾಗಿಯೂ ಸಚಿವ ಸಂಪುಟದ ವಿಸ್ತರಣೆ ಅಗತ್ಯವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 2.0 ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆಯೂ ಇದೇ ಜುಲೈ 8ರ ಬೆಳಿಗ್ಗೆ ನಡೆಯುವುದು ಖಚಿತವಾಗಿದೆ. ಮೋದಿ ಸರ್ಕಾರವು ಈ ಬಾರಿ ಸಚಿವ ಸಂಪುಟ ವಿಸ್ತರಣೆಗೆ ಮುಂದಿನ ವರ್ಷ ನಡೆಯುವ ಪಂಚ ರಾಜ್ಯದ ವಿಧಾನಸಭೆ ಚುನಾವಣೆ, ಮೈತ್ರಿ ಪಕ್ಷಗಳಿಗೆ ಆದ್ಯತೆ, ಜಾತಿ ಸಮೀಕರಣಗಳೇ ಮಾನದಂಡಗಳಾಗಿವೆ. ಕೇಂದ್ರದ ಕ್ಯಾಬಿನೆಟ್ ನಲ್ಲಿರುವ ಕೆಲ ಅಸಮರ್ಥ ಸಚಿವರಿಗೆ ಗೇಟ್ ಪಾಸ್ ನೀಡಿ ಸಚಿವ ಸಂಪುಟ ಪುನರ್ ರಚಿಸುವುದು ಮೋದಿ ಪ್ಲ್ಯಾನ್.
ಗುರುವಾರ ಬೆಳಿಗ್ಗೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಹೊಸ ಮುಖಗಳಿಗೆ ಕೇಂದ್ರದ ಕ್ಯಾಬಿನೆಟ್ ನಲ್ಲಿ ಸ್ಥಾನ: ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ 2ನೇ ಬಾರಿಗೆ 2019ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿಲ್ಲ. ಕೊರೊನಾದ ಸಂಕಷ್ಟ, ಲಾಕ್ ಡೌನ್ ನಿಂದಾಗಿ ಕೇಂದ್ರ ಸರ್ಕಾರವು ಒತ್ತಡದಲ್ಲಿತ್ತು. 2ವರ್ಷ ಕಳೆದ ಬಳಿಕ ಕೇಂದ್ರದ ಸಚಿವ ಸಂಪುಟದ ವಿಸ್ತರಣೆ ಹಾಗೂ ಪುನರ್ ರಚನೆಗೆ ಮುಹೂರ್ತ ಕೂಡಿ ಬಂದಿದೆ. ಜುಲೈ 8ರ ಗುರುವಾರ ಬೆಳಿಗ್ಗೆ ಕೇಂದ್ರದ ಸಚಿವ ಸಂಪುಟದ ವಿಸ್ತರಣೆ ನಡೆಯುವ ಸಾಧ್ಯತೆ ಅಧಿಕವಾಗಿದೆ. ಇಂದು ಸಂಜೆ(ಜುಲೈ 6) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಿಮಾಚಲ ಪ್ರದೇಶದಿಂದ ದೆಹಲಿಗೆ ಹಿಂತಿರುಗಲಿದ್ದಾರೆ.
ಇಬ್ಬರು ಸಚಿವರ ನಿಧನ, ಮೋದಿ ಸರ್ಕಾರಕ್ಕೆ ಶಿವಸೇನೆ, ಅಕಾಲಿದಳ ಗುಡ್ ಬೈ ಹೇಳಿದ್ದರಿಂದ ಕೆಲ ಸಚಿವ ಸ್ಥಾನ ಖಾಲಿಯಾಗಿವೆ. ಸದ್ಯ ಮೋದಿ ಕ್ಯಾಬಿನೆಟ್ ನಲ್ಲಿ 53 ಮಂದಿ ಸಚಿವರಿದ್ದಾರೆ. ಇನ್ನೂ 28 ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದೆ. ಒಟ್ಟಾರೆ ಸಚಿವ ಸಂಪುಟದ ಗಾತ್ರ 81 ಅನ್ನು ದಾಟುವಂತಿಲ್ಲ. ಹೀಗಾಗಿ 20ಕ್ಕೂ ಹೆಚ್ಚು ಸಂಸದರಿಗೆ ಈಗ ಕೇಂದ್ರದ ಕ್ಯಾಬಿನೆಟ್ ನಲ್ಲಿ ಸಚಿವರಾಗುವ ಅವಕಾಶ ಇದೆ. ಜೊತೆಗೆ ರಾಜಕೀಯ ಅನಿವಾರ್ಯತೆಯ ಕಾರಣಗಳಿಗಾಗಿಯೂ ಸಚಿವ ಸಂಪುಟದ ವಿಸ್ತರಣೆ ಅಗತ್ಯವಾಗಿದೆ.
ಪ್ರಧಾನಿ ಮೋದಿ ಸಂಪುಟದಲ್ಲಿ ಇಲಾಖೆಗಳನ್ನು ಮುನ್ನಡೆಸುವ ಅನುಭವಿಗಳು, ಪ್ರತಿಭಾವಂತರ, ವೃತ್ತಿಪರರ, ದಕ್ಷ ಆಡಳಿತಗಾರರ ಕೊರತೆ ಇದೆ ಎಂಬ ಟೀಕೆ ಮೋದಿ 1.0 ಸರ್ಕಾರದ ಅವಧಿಯಲ್ಲೂ ಇತ್ತು. ಈಗಲೂ ಅದೇ ಟೀಕೆ ಮುಂದುವರಿದಿದೆ. ಈ ಟೀಕೆಯನ್ನು ಹೋಗಲಾಡಿಸಲು ಪ್ರಧಾನಿ ಮೋದಿ ಆಡಳಿತಗಾರರನ್ನು, ವೃತ್ತಿಪರರನ್ನು ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.
ಇಂಡಿಯನ್ ಫಾರಿನ್ ಸರ್ವೀಸ್ ನ ಜೈಶಂಕರ್ ಕೇಂದ್ರದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಜೈಶಂಕರ್ ಅವರನ್ನೇ ಈಗ ವಿದೇಶಾಂಗ ಇಲಾಖೆಯ ಮಂತ್ರಿಯನ್ನಾಗಿ ನೇಮಿಸಿದ್ದಾರೆ. ರಾಯಭಾರಿಯಾಗಿ ಅನುಭವ ಗಳಿಸಿಕೊಂಡಿರುವ ಹರದೀಪ್ ಸಿಂಗ್ ಪುರಿ ಕೇಂದ್ರದ ನಾಗರಿಕ ವಿಮಾನಯಾನ ಖಾತೆ ಮಂತ್ರಿಯಾಗಿದ್ದಾರೆ. ಈ ಹಿಂದೆ ಕೇಂದ್ರದ ಗೃಹ ಇಲಾಖೆ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಆರ್.ಕೆ.ಸಿಂಗ್ ಈಗ ಕೇಂದ್ರದಲ್ಲಿ ಇಂಧನ ಖಾತೆ ಸ್ವತಂತ್ರ ನಿರ್ವಹಣೆಯ ಸಚಿವರಾಗಿದ್ದಾರೆ.
(ಲೇಖನ: ಎಸ್. ಚಂದ್ರಮೋಹನ್, ಹಿರಿಯ ವರದಿಗಾರ, ಟಿವಿ9)
ಆದರೆ, ಆರೋಗ್ಯ, ಹಣಕಾಸು, ಕೈಗಾರಿಕೆಯಂಥ ಪ್ರಮುಖ ಖಾತೆಗಳನ್ನು ಸಚಿವರಾಗಿ ನಿರ್ವಹಿಸಲು ವೃತ್ತಿಪರರು ಹಾಗೂ ಆ ಕ್ಷೇತ್ರದ ಹಿನ್ನಲೆಯವರು ಸಚಿವರಾಗಬೇಕು ಎಂದು ಮೋದಿ ಬೆಂಬಲಿಗರೇ ಸಲಹೆ ನೀಡಿದ್ದಾರೆ. ಆ ಕ್ಷೇತ್ರದ ಹಿನ್ನಲೆಯವರನ್ನು ಸಚಿವರನ್ನಾಗಿ ಮಾಡುವುದು ಹಿತಾಸಕ್ತಿಯ ವಿರೋಧಭಾಸಕ್ಕೂ ಕಾರಣವಾಗಬಹುದು. ಹೀಗಾಗಿ ಕನಿಷ್ಠ ಆಯಾ ಕ್ಷೇತ್ರಗಳ ವೃತ್ತಿಪರರನ್ನು ಸಚಿವರ ಸಲಹೆಗಾರರಾಗಿ ನೇಮಿಸಿ, ಆಯಾ ಕ್ಷೇತ್ರಗಳಿಗೆ ಸ್ಪಂದಿಸುವ, ಸಮಸ್ಯೆ ನಿವಾರಿಸುವ ಕೆಲಸವಾಗಬೇಕು ಎಂಬ ಸಲಹೆಯೂ ಮೋದಿ ಬೆಂಬಲಿಗರಿಂದಲೇ ಬಂದಿದೆ. ಹೀಗಾಗಿ ಈಗ ನಡೆಯುವ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆಯಲ್ಲಿ ವಿವಿಧ ಕ್ಷೇತ್ರಗಳ ವೃತ್ತಿಪರರಿಗೆ, ಆಡಳಿತಗಾರರಿಗೆ ಮತ್ತೆ ಅವಕಾಶ ಸಿಗುತ್ತಾ ಎಂಬ ಕುತೂಹಲವೂ ಇದೆ.
ಪಂಚ ರಾಜ್ಯ ಚುನಾವಣೆ ಮೇಲೆ ಕಣ್ಣಿಟ್ಟು ವಿಸ್ತರಣೆ ಪ್ರಧಾನಿ ನರೇಂದ್ರ ಮೋದಿ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಪಂಚ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಮಣಿಪುರ, ಪಂಜಾಬ್ ರಾಜ್ಯಗಳಿಗೆ ಚುನಾವಣೆ ನಡೆಯಲಿದೆ. ಈ ರಾಜ್ಯಗಳ ಸಂಸದರಿಗೆ ವಿಶೇಷ ಪ್ರಾಶಸ್ತ್ಯ ಕ್ಯಾಬಿನೆಟ್ ವಿಸ್ತರಣೆ ವೇಳೆ ಸಿಗಲಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮೈತ್ರಿಪಕ್ಷಗಳಾಗಿರುವ ಅಪ್ನಾದಳದ ಅನುಪ್ರಿಯಾ ಪಟೇಲ್ ಗೆ ಮತ್ತೆ ಮೋದಿ ಕ್ಯಾಬಿನೆಟ್ ನಲ್ಲಿ ಸ್ಥಾನ ಸಿಗುವ ನಿರೀಕ್ಷೆ ಇದೆ. ಇನ್ನೂ ನಿಶಾದ್ ಪಾರ್ಟಿ ಕೂಡ ಸಚಿವ ಸ್ಥಾನದ ನಿರೀಕ್ಷೆಯಲ್ಲಿದೆ.
ಉತ್ತರ ಪ್ರದೇಶದ ಜಾಟ್, ಬ್ರಾಹ್ಮಣ ಸಮುದಾಯಕ್ಕೂ ಕೇಂದ್ರದ ಕ್ಯಾಬಿನೆಟ್ ನಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಈ ಸಮುದಾಯಗಳಿಗೆ ಬಿಜೆಪಿ ಪಕ್ಷ ನಿಮ್ಮ ಪರವಾಗಿದೆ ಎಂಬ ಸಂದೇಶ ರವಾನಿಸುವ ಪ್ರಯತ್ನ ಮಾಡಬಹುದು. ಇನ್ನೂ ಉತ್ತರ ಪ್ರದೇಶದ ರೀಟಾ ಬಹುಗುಣ ಜೋಷಿ, ದಲಿತ ಸಮುದಾಯದ ರಾಮಶಂಕರ್ ಕಥಾರಿಯಾ, ಫಿಲಿಬಿಟ್ ಸಂಸದ ವರುಣ್ ಗಾಂಧಿ ಹೆಸರುಗಳು ಕೂಡ ಕೇಂದ್ರ ಕ್ಯಾಬಿನೆಟ್ ಸೇರುವವರ ಸಂಭಾವ್ಯ ಪಟ್ಟಿಯಲ್ಲಿವೆ. ಜೊತೆಗೆ ಇತ್ತೀಚೆಗೆ ಬಿಜೆಪಿ ಸೇರಿರುವ ಬ್ರಾಹ್ಮಣ ಸಮುದಾಯದ ಜಿತಿನ್ ಪ್ರಸಾದ್ ಕೂಡ ಕೇಂದ್ರದ ಕ್ಯಾಬಿನೆಟ್ ನಲ್ಲಿ ಸ್ಥಾನ ಗಳಿಸಬಹುದು.
ಇನ್ನೂ ಅಸ್ಸಾಂನಲ್ಲಿ ಸಿಎಂ ಸ್ಥಾನವನ್ನು ಆರು ವರ್ಷದ ಹಿಂದೆಯಷ್ಟೇ ವಲಸೆ ಬಂದ ಹಿಮಂತ್ ಬಿಸ್ವಾ ಶರ್ಮಾಗೆ ಬಿಟ್ಟುಕೊಟ್ಟ ಸರ್ಬಾನಂದ ಸೋನವಾಲ್ ಗೆ ಮತ್ತೆ ಕೇಂದ್ರದಲ್ಲಿ ಸಚಿವ ಸ್ಥಾನ ಸಿಗುವುದು ಬಹುತೇಕ ನಿಶ್ಚಿತ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ಆಸ್ತಿತ್ವಕ್ಕೆ ಬರಲು ಕಾರಣವಾದ ಜ್ಯೋತಿರಾಧಿತ್ಯ ಸಿಂಧಿಯಾಗೂ ಕೇಂದ್ರದ ಕ್ಯಾಬಿನೆಟ್ ನಲ್ಲಿ ಸ್ಥಾನ ಸಿಗುವುದು ನಿಶ್ಚಿತವಾಗಿದೆ. ಜ್ಯೋತಿರಾಧಿತ್ಯ ಸಿಂಧಿಯಾ ಈಗಾಗಲೇ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಸರ್ಬಾನಂದ ಸೋನವಾಲ್, ಜ್ಯೋತಿರಾಧಿತ್ಯ ಸಿಂಧಿಯಾ ಇಬ್ಬರು ಇಂದು ಮಧ್ಯಾಹ್ನ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಉಜ್ಜೈನಿಯ ಮಹಾಕಾಳ ದೇವಾಲಯಕ್ಕೆ ಪೂಜೆ ಸಲ್ಲಿಸಿ, ಜ್ಯೋತಿರಾಧಿತ್ಯ ಸಿಂಧಿಯಾ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಇನ್ನೂ ಬಿಹಾರದ ಜೆಡಿಯು ಪಕ್ಷ 2019ರಲ್ಲಿ ಕೇಂದ್ರದ ಕ್ಯಾಬಿನೆಟ್ ನಲ್ಲಿ ಮೈತ್ರಿಪಕ್ಷಗಳಿಗೆ ತಲಾ ಒಂದು ಸಚಿವ ಸ್ಥಾನ ಮಾತ್ರ ನೀಡಲಾಗುತ್ತೆ ಎನ್ನುವುದನ್ನು ಒಪ್ಪದೇ ಕ್ಯಾಬಿನೆಟ್ ಸೇರಿರಲಿಲ್ಲ. ಆದರೆ, ಈಗ ಬದಲಾದ ಪರಿಸ್ಥಿತಿಯಲ್ಲಿ 2ರಿಂದ 3 ಸಚಿವ ಸ್ಥಾನಗಳನ್ನು ಜೆಡಿಯು ಕೇಳುತ್ತಿದೆ. ಜೆಡಿಯು ಪಕ್ಷದ ಆರ್‌ಸಿಪಿ ಸಿಂಗ್, ಲಾಲನ್ ಸಿಂಗ್ ಕೇಂದ್ರದ ಸಚಿವ ಸಂಪುಟ ಸೇರಲಿದ್ದಾರೆ. ತಮ್ಮ ಅಣ್ಣನ ಮಗ ಚಿರಾಗ್ ಪಾಸ್ವಾನ್ ವಿರುದ್ಧ ಲೋಕಜನಶಕ್ತಿ ಪಕ್ಷದೊಳಗೆ ಕ್ಷಿಪ್ರಕ್ರಾಂತಿ ನಡೆಸಿದ ಪಶುಪತಿನಾಥ ಪಾರಸ್ ಗೆ ಕೇಂದ್ರದ ಕ್ಯಾಬಿನೆಟ್ ನಲ್ಲಿ ಎಲ್.ಜೆಪಿ ಪಕ್ಷದ ಕೋಟಾದಲ್ಲಿ ಸಚಿವ ಸ್ಥಾನ ಸಿಗಲಿದೆ.
ಕೇಂದ್ರದ ಕ್ಯಾಬಿನೆಟ್ ನಲ್ಲಿ ಅಣ್ಣನ ಸ್ಥಾನವನ್ನು ತುಂಬಲು ಪಶುಪತಿನಾಥ ಪಾರಸ್ ಅನ್ನು ಮೋದಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರದ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ ಸಿಗುವ ಸುಳಿವು ಸಿಗುತ್ತಿದ್ದಂತೆ, ಪಶುಪತಿನಾಥ ಪಾರಸ್ ಹೊಸ ಕುರ್ತಾ ಖರೀದಿ ಮಾಡುತ್ತಿರುವ ವಿಡಿಯೋ ಹರಿದಾಡುತ್ತಿದೆ. ಸೀಕ್ರೆಟ್ ವಿಷಯ, ಸೀಕ್ರೆಟ್ ಆಗಿಯೇ ಇರಲಿ ಎಂದು ತಮಗೆ ಸಚಿವ ಸ್ಥಾನ ಸಿಗುವ ಬಗ್ಗೆ ಪಶುಪತಿ ನಾಥ ಪಾರಸ್ ಹೇಳಿದ್ದಾರೆ.
ಇನ್ನೂ ಬಿಹಾರದ ಡಿಸಿಎಂ ಹುದ್ದೆಯಿಂದ ಕೆಳಗಿಳಿದಿರುವ ಸುಶೀಲ್ ಕುಮಾರ್ ಮೋದಿಗೆ ಕೇಂದ್ರದ ಸಚಿವ ಸಂಪುಟದಲ್ಲಿ ಸ್ಥಾನ ಸಿಗುತ್ತೋ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. ಸುಶೀಲ್ ಕುಮಾರ್ ಮೋದಿ ಜಿಎಸ್‌ಟಿ ಮಂಡಳಿಯಲ್ಲೂ ಕಾರ್ಯನಿರ್ವಹಿಸಿ ಅನುಭವ ಗಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಬೇರೆ ಬೇರೆ ಪಕ್ಷಗಳನ್ನು ಸುತ್ತಿಕೊಂಡು ಬಂದಿರುವ ನಾರಾಯಣ್ ರಾಣೆಗೂ ಕೇಂದ್ರದಲ್ಲಿ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ನಾರಾಯಣ್ ರಾಣೆ ಸದ್ಯ ಬಿಜೆಪಿ ಬೆಂಬಲದೊಂದಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಜೆ.ಪಿ.ನಡ್ಡಾ ಕಚೇರಿಯಿಂದ ಪೋನ್ ಕರೆ ಬಂದಿರುವುದರಿಂದ ಗೋವಾದಲ್ಲಿದ್ದ ನಾರಾಯಣ್ ರಾಣೆ ಸೀದಾ ದೆಹಲಿ ವಿಮಾನ ಹತ್ತಿದ್ದಾರೆ.
ಇನ್ನು ಕರ್ನಾಟಕದ ಚಿತ್ರದುರ್ಗದ ಲೋಕಸಭಾ ಸದಸ್ಯ ಅನೇಕಲ್ ನಾರಾಯಣಸ್ವಾಮಿ ಅವರಿಗೂ ದೆಹಲಿಗೆ ಬರುವಂತೆ ಸೂಚನೆ ಬಂದಿದೆ. ಹೀಗಾಗಿ ನಾರಾಯಣಸ್ವಾಮಿ ಕೂಡ ದೆಹಲಿಗೆ ಕುಟುಂಬ ಸಮೇತ ತೆರಳಿದ್ದಾರೆ. ಅನೇಕಲ್ ನಾರಾಯಣಸ್ವಾಮಿ, ದಲಿತ ಎಡಗೈ ಸಮುದಾಯಕ್ಕೆ ಸೇರಿದವರು. ಕರ್ನಾಟಕದಲ್ಲಿ ದಲಿತ ಎಡಗೈ ಸಮುದಾಯ ಬಿಜೆಪಿಯನ್ನು ಬೆಂಬಲಿಸಿದೆ. ಈ ಹಿಂದೆ ಇದೇ ಸಮುದಾಯದ ರಮೇಶ್ ಜಿಗಜಿಣಗಿ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಹೀಗಾಗಿ ಈಗ ಅನೇಕಲ್ ನಾರಾಯಣಸ್ವಾಮಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಗುವ ಬಗ್ಗೆ ಕುತೂಹಲ ಇದೆ.
ಇನ್ನೂ ಪ್ರಬಲ ಸಮುದಾಯಗಳಾದ ಒಕ್ಕಲಿಗ, ಲಿಂಗಾಯತ ಸಮುದಾಯದ ಕೋಟಾದಲ್ಲಿ ಶೋಭಾ ಕರಂದ್ಲಾಜೆ, ಬಿ.ವೈ.ರಾಘವೇಂದ್ರಗೂ ಕೇಂದ್ರದಲ್ಲಿ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಬಿ.ವೈ.ರಾಘವೇಂದ್ರ ಕೇಂದ್ರ ಮಂತ್ರಿಯಾದರೇ, ಕರ್ನಾಟಕದಲ್ಲಿ ಸಿಎಂ ಹುದ್ದೆಯಲ್ಲಿರುವ ಯಡಿಯೂರಪ್ಪರನ್ನು ಬದಲಾವಣೆ ಮಾಡಲಾಗುತ್ತಾ ಎಂಬ ಚರ್ಚೆ ಕೂಡ ಶುರುವಾಗುತ್ತೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಭೂಪೇಂದ್ರ ಯಾದವ್ ಕೇಂದ್ರದ ಕ್ಯಾಬಿನೆಟ್ ಸೇರುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ ಪಕ್ಷ ಬಲಪಡಿಸಲು ಕೆಲವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಟಿಎಂಸಿಯಿಂದ ವಲಸೆ ಬಂದಿರುವ ದಿನೇಶ್ ತ್ರಿವೇದಿ, ಬಿಜೆಪಿಯಿಂದ ಲೋಕಸಭೆಗೆ ಆಯ್ಕೆಯಾಗಿರುವ ಲಾಕೆಟ್ ಚಟರ್ಜಿ ಹೆಸರುಗಳು ಕೂಡ ಕೇಂದ್ರದ ಕ್ಯಾಬಿನೆಟ್ ಗೆ ಸೇರ್ಪಡೆಯಾಗುವವರ ಪಟ್ಟಿಯಲ್ಲಿವೆ. ರಾಜಸ್ಥಾನದ ರಾಹುಲ್ ಕಾಸ್ವಾನ್ ಸಚಿವ ಸ್ಥಾನ ಪಡೆಯಬಹುದು. ಲಡಾಖ್ ಲೋಕಸಭಾ ಸದಸ್ಯ ಜಮಯಾಂಗ್ ಲೋಕಸಭೆಯ ತಮ್ಮ ಭಾಷಣದಿಂದ ದೇಶದ ಗಮನ ಸೆಳೆದಿದ್ದಾರೆ. ’
ಮೋದಿ ಸರ್ಕಾರದಲ್ಲಿ ಕೆಲ ಅಸಮರ್ಥ ಸಚಿವರನ್ನು ಕೈ ಬಿಡುವ ಸಾಧ್ಯತೆ ಇದೆ. ಇದರಲ್ಲಿ ಮೊದಲ ಹೆಸರೇ ಕೇಂದ್ರದ ಆರೋಗ್ಯ ಸಚಿವ ಡಾಕ್ಟರ್ ಹರ್ಷವರ್ಧನ್ ಅವರದ್ದು. ಕೊರೊನಾದ 2ನೇ ಅಲೆ ಬರುವ ಬಗ್ಗೆ ಸರಿಯಾದ ಪೂರ್ವಸಿದ್ದತೆಯನ್ನು ನಡೆಸದೇ ಇರೋದು, 2ನೇ ಅಲೆ ನಿರ್ವಹಣೆಯಲ್ಲಿ ವೈಫಲ್ಯದ ಕಾರಣದಿಂದ ಹರ್ಷವರ್ಧನ್ ಗೆ ಕ್ಯಾಬಿನೆಟ್ ನಿಂದ ಗೇಟ್ ಪಾಸ್ ಸಿಗುವ ಸಾಧ್ಯತೆ ಇದೆ. ಹರ್ಷವರ್ಧನ್ ಸ್ಥಾನದ ಮೇಲೆ ದೆಹಲಿಯ ಲೋಕಸಭಾ ಸದಸ್ಯರಾದ ಮೀನಾಕ್ಷಿ ಲೇಖಿ, ಮನೋಜ್ ತಿವಾರಿ ಕಣ್ಣಿಟ್ಟಿದ್ದಾರೆ.
ಇಂದು ಬೆಳಿಗ್ಗೆ ಕೇಂದ್ರದ ಸಾಮಾಜಿಕ ನ್ಯಾಯ ಖಾತೆ ಸಚಿವರಾಗಿದ್ದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಮತ್ತೊಂದು ಸಚಿವ ಸ್ಥಾನ ಖಾಲಿಯಾದಂತಾಗಿದೆ. ಜೊತೆಗೆ ಥಾವರ್ ಚಂದ್ ಗೆಹ್ಲೋಟ್ ರಾಜ್ಯಸಭಾ ಸದಸ್ಯತ್ವದ ಅವಧಿಯೂ 2024ರ ಏಪ್ರಿಲ್ ವರೆಗೂ ಇತ್ತು. ಈಗ ಈ ರಾಜ್ಯಸಭಾ ಸ್ಥಾನಕ್ಕೆ ಕೇಂದ್ರದಲ್ಲಿ ಸಚಿವರಾಗುವವರನ್ನು ಆಯ್ಕೆ ಮಾಡಲು ಅವಕಾಶವೂ ಸಿಕ್ಕಿದೆ. ಕೇಂದ್ರದ ಕ್ಯಾಬಿನೆಟ್ ನಿಂದ ಮೂರರಿಂದ ನಾಲ್ಕು ಮಂದಿಯನ್ನ ಕೈ ಬಿಡಬಹುದು ಎಂಬ ಮಾತುಗಳು ಕೇಳಿ ಬಂದಿವೆ.
ಸದ್ಯ ಪ್ರಕಾಶ್ ಜಾವಡೇಕರ್, ನರೇಂದ್ರ ಸಿಂಗ್ ತೋಮರ್, ರವಿಶಂಕರ್ ಪ್ರಸಾದ್, ಪಿಯೂಶ್ ಗೋಯಲ್, ಹರದೀಪ್ ಸಿಂಗ್ ಪುರಿ ಬಳಿ ತಲಾ ಮೂರರಿಂದ ನಾಲ್ಕು ಖಾತೆಗಳಿವೆ. ಈ ಖಾತೆಗಳನ್ನ ವಾಪಸ್ ಪಡೆದು ಹೊಸದಾಗಿ ಸಚಿವರಾಗುವವರಿಗೆ ನೀಡಲಿದ್ದಾರೆ. ಈ ಮೂಲಕ ಈ ಸಚಿವರ ಖಾತೆ ಹೊರೆಯನ್ನು ಇಳಿಸಲಾಗುತ್ತೆ. ಮೋದಿಯ ಹೊಸ ಟೀಮ್ ನಲ್ಲಿ ಹೊಸ ಮುಖಗಳಿಗೆ ಮನ್ನಣೆ ನೀಡಲಾಗುತ್ತಿದೆ. ಹೊಸ ಟೀಮ್ ಮೂಲಕ ಆಡಳಿತ ಚುರುಕುಗೊಳಿಸುವ ಪ್ಲ್ಯಾನ್ ಪ್ರಧಾನಿ ಮೋದಿ ಅವರದ್ದು. ಕೇಂದ್ರದ ಕ್ಯಾಬಿನೆಟ್ ಗೆ ಸೇರ್ಪಡೆಯಾಗುವವರಿಗೆ ಈಗಾಗಲೇ ದೆಹಲಿಗೆ ಬರುವಂತೆ ಸೂಚಿಸಲಾಗಿದೆ. ಬಹುತೇಕರು ಈಗಾಗಲೇ ದೆಹಲಿ ವಿಮಾನ ಹತ್ತಿದ್ದಾರೆ.
ರಾಜ್ಯದಿಂದ ಮೋದಿ ಸಂಪುಟ ಸೇರಲಿದ್ದಾರೆ ಎಡಗೈ ಸಮುದಾಯದ ನಾಯಕ..?
(Union Cabinet Expansion PM Narendra Modi cabinet to be expanded on july 8th new faces may take cabinet berth)
Published On - 3:30 pm, Tue, 6 July 21